ನವದೆಹಲಿ: ಕಳೆದ ಹಲವಾರು ವರ್ಷಗಳಿಂದ ರಾಜಪಥ್ ಎಂದು ಕರೆಯಲಾಗುತ್ತಿದ್ದ ಇಂಡಿಯಾ ಗೇಟ್ ಬಳಿಯ ಬೃಹತ್ ರಸ್ತೆಯನ್ನು ‘ಕರ್ತವ್ಯ ಪಥ್’ ಎಂದು ಹೊಸದಾಗಿ ನಾಮಕರಣ ಮಾಡಲಾಗಿದ್ದು ಅದರ ಉದ್ಘಾಟನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸಂಜೆ 7 ಗಂಟೆಗೆ ನೆರವೇರಿಸಲಿದ್ದಾರೆ.
ಸೆಂಟ್ರಲ್ ವಿಸ್ತಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ನಿಂದಾಗಿ ಸಮಸ್ಯೆ ಉಂಟಾಗುತ್ತಿದೆ. ಇಲ್ಲಿ ಸಾರ್ವಜನಿಕ ಶೌಚಾಲಯ, ಕುಡಿಯುವ ನೀರು, ರಸ್ತೆ ಸೌಲಭ್ಯ ಮತ್ತು ಪಾರ್ಕಿಂಗ್ ಸೌಲಭ್ಯವಿರಲಿಲ್ಲ. ಅಲ್ಲದೆ ದಾರಿ ಫಲಕಗಳು ಹಾಗೂ ಮಾರ್ಗಸೂಚಿಗಳು ಸಹ ಇರಲಿಲ್ಲ.
ಆದರೆ ಈಗ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಇದಕ್ಕೆ ಕರ್ತವ್ಯ ಪಥ್ ಎಂದು ನಾಮಕರಣ ಮಾಡಲಾಗಿದೆ. ಸುಂದರಗೊಳಿಸಿದ ಲ್ಯಾಂಡ್ಸ್ಕೇಪ್, ಕಾಲ್ನಡಿಗೆ ಪಥ, ಯೊಂದಿಗೆ ಹುಲ್ಲುಹಾಸುಗಳು, ಹಸಿರು ಪಟ್ಟಿಗಳು, ನವೀಕರಿಸಿದ ಕಾಲುವೆಗಳು, ಹೊಸ ಸೌಕರ್ಯ ಬ್ಲಾಕ್‌ಗಳು, ಸುಧಾರಿತ ಮಾರ್ಗಸೂಚಿ ಫಲಕಗಳು ಮತ್ತು ಮಾರಾಟ ಕಿಯೋಸ್ಕ್‌ಗಳನ್ನು ಈಗ ಇಲ್ಲಿ ಅಳವಡಿಸಲಾಗಿದೆ.
ಹೊಸ ಪಾದಚಾರಿ ಅಂಡರ್‌ಪಾಸ್‌ಗಳು, ಸುಧಾರಿತ ಪಾರ್ಕಿಂಗ್ ಸ್ಥಳ, ಹೊಸ ಪ್ರದರ್ಶನ ಫಲಕಗಳು ಮತ್ತು ನವೀಕರಿಸಿದ ರಾತ್ರಿ ದೀಪಗಳು ಸಾರ್ವಜನಿಕರಿಗೆ ಉತ್ತಮ ಅನುಭವ ನೀಡುತ್ತವೆ.
ಸಾರ್ವಜನಿಕ ಸಂಚಾರದ ಮೇಲೆ ಕನಿಷ್ಠ ನಿರ್ಬಂಧಗಳೊಂದಿಗೆ ಗಣರಾಜ್ಯೋತ್ಸವದ ಪರೇಡ್ ಮತ್ತು ಇತರ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯ ಕಂಡುಬಂದಿತ್ತು.
ಇದನ್ನು ಗಮನದಲ್ಲಿರಿಸಿಕೊಂಡು ಈ ಪ್ರದೇಶದ ಪುನರಾಭಿವೃದ್ಧಿ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ