ಲಂಡನ್ : ಒಂದು ಕಾಲದಲ್ಲಿ ದೇಶದ ಅತೀ ಶ್ರೀಮಂತ ಉದ್ಯಮಿಯಾಗಿ ಮೆರೆದಾಡಿದ್ದ ಅನಿಲ್ ಅಂಬಾನಿ ಈಗ ನ್ಯಾಯಾಲಯ ಶುಲ್ಕಭರಿಸಲು ತನ್ನ ಬಳಿ ಇದ್ದ ಎಲ್ಲಾ ಆಭರಣಗಳನ್ನು ಮಾರಾಟ ಮಾಡಿದ್ದಾಗಿ ಬ್ರಿಟನ್ ಕೋರ್ಟ್ ಗೆ ತಿಳಿಸಿದ್ದಾರೆ.
ಚೀನಾ ಮೂಲದ ಬ್ಯಾಂಕ್‌ನಿಂದ ಪಡೆದ ಸಾಲವನ್ನು ಮರುಪಾವತಿಸಲಾಗದ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ವಿರುದ್ಧ ಲಂಡನ್ ಕೋರ್ಟ್‌ನಲ್ಲಿ ಚೀನಾ ಬ್ಯಾಂಕ್ ಕೇಸ್ ದಾಖಲಿಸಿದೆ. ಇದೀಗ, ಬ್ಯಾಂಕ್ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಅನಿಲ್ ಅಂಬಾನಿ ಹೋರಾಟಕ್ಕೆ ಮನೆಯಲ್ಲಿದ್ದ ಚಿನ್ನಾಭರಣವನ್ನೆಲ್ಲಾ ಮಾರಾಟ ಮಾಡಿದ್ದೇನೆ ಎಂದು ಲಂಡನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನನ್ನ ಬಳಿ ಇದೀಗ ಬಳಕೆಗೆ ಒಂದು ಕಾರು ಮಾತ್ರ ಇದ್ದು , ಕಳೆದ ಜನವರಿ ಜೂನ್ ನಡುವೆ ಎಲ್ಲಾ ಆಭರಣ ಮಾಡಿ 9.9 ಕೋಟಿ ಪಡೆದಿದ್ದು, ಈಗ ನನ್ನ ಹತ್ತರ ಏನೂ ಉಳಿದಿಲ್ಲ ಎಂದು ತಿಳಿಸಿದ್ದಾರೆ. ಈಗಿನ ಕೋರ್ಟ್ ವೆಚ್ಚವನ್ನು ನನ್ನ ಪತ್ನಿ ಹಾಗೂ ಕುಟುಂಬದವರು ಭರಿಸುತ್ತಿದ್ದಾರೆ. ಇದಕ್ಕಾಗಿ, ನನ್ನ ಮಗ ಕೂಡ ಸಾಲ ಪಡೆದಿದ್ದಾನೆಂದು ಅನಿಲ್ ಅಂಬಾನಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅನಿಲ್ ಧೀರೂಭಾಯ್ ಅಂಬಾನಿ ಗ್ರೂಪ್ನ ಚೇರ್ಮನ್ ಅನಿಲ್ ಅಂಬಾನಿ ಈಗ ಪಾಪರ್ ಆಗಿರುವುದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಮೂರು ಚೀನೀ ಬ್ಯಾಂಕುಗಳು – ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ, ಚೀನಾ ಡೆವಲಪ್ಮೆಂಟ್ ಬ್ಯಾಂಕ್, ಎಕ್ಸಿಮ್ ಬ್ಯಾಂಕ್ ಆಫ್ ಚೀನಾಗಳು- ಅನಿಲ್ ಅಂಬಾನಿ ವಿರುದ್ಧ ವ್ಯಾಜ್ಯ ಹೂಡಿವೆ. 680 ಶತಕೋಟಿ ಡಾಲರ್ ಸಾಲ ಮರುಪಾವತಿಸಿಲ್ಲ, ಅಲ್ಲದೆ, ಮರುಸಾಲ ರೂಪದಲ್ಲಿ ಪಡೆದ 925 ದಶಲಕ್ಷ ಡಾಲರನ್ನೂ ಹಿಂದಿರುಗಿಸದೇ ವಂಚನೆ ಎಸಗಿದ್ದಾರೆ ಎಂಬ ಆರೋಪ ಹೊರಿಸಿವೆ.