ಮಂಗಳೂರು: ಕೇರಳದಲ್ಲಿ ಎರಡನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದ್ದು, ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿದ ಯುವಕನಲ್ಲಿ ಮಂಕಿಪಾಕ್ಸ್ ಸೋಂಕು ಧೃಡವಾಗಿದೆ. ಈ ಬಗ್ಗೆ ಸ್ವತಃ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಆತನೊಂದಿಗೆ ಆಗಮಿಸಿದ 35 ಮಂದಿಯನ್ನು ಐಸೋಲೇಶನ್‌ಗೆ ಒಳಪಡಿಸಲಾಗಿದೆ.
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್
ದುಬೈನಿಂದ ಜುಲೈ 13ರಂದು ವಿಮಾನದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 31 ವರ್ಷದ ಯುವಕನಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಕಣ್ಣೂರಿನ ಪರಿಯಾರಂ ಮೆಡಿಕಲ್ ಕಾಲೇಜಿಗೆ ತಪಾಸಣೆಗೆಂದು ಯುವಕ ತೆರಳಿದ್ದ. ಇಂದು ಅದರ ವರದಿ ಬಂದು ಸೋಂಕು ಧೃಡವಾಗಿದೆ. ಸದ್ಯ ಆತನನ್ನು ವಿಶೇಷ ವಾರ್ಡಿನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಮಧ್ಯೆ ಯುವಕನೊಂದಿಗೆ ನೇರ ಸಂಪರ್ಕ ಹೊಂದಿದ್ದ 35 ಮಂದಿ ಸೆಲ್ಫ್ ಐಸೋಲೇಶನ್‌ಗೆ ಒಳಗಾಗಿದ್ದಾರೆ. ಇದರಲ್ಲಿ ಯುವಕ ಪ್ರಯಾಣಿಸಿದ ವಿಮಾನದ ಕೆಲವು ಪ್ರಯಾಣಿಕರು, ವಿಮಾನ ನಿಲ್ದಾಣದ ಅಧಿಕಾರಿಗಳು ಸೇರಿದ್ದಾರೆ.
ಅಂದು ದುಬೈನಿಂದ ಆಗಮಿಸಿದ ವಿಮಾನದಲ್ಲಿ ಒಟ್ಟು 191 ಪ್ರಯಾಣಿಕರಿದ್ದರು. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ 15, ಉಡುಪಿ ಜಿಲ್ಲೆಯ 6, ಕಾಸರಗೋಡು ಜಿಲ್ಲೆಯ 13, ಕಣ್ಣೂರಿನ 1 ಹಾಗೂ ಮಂಗಳೂರು ವಿಮಾನ ನಿಲ್ದಾಣದ ಇಮ್ಮಿಗ್ರೇಶನ್ ಅಧಿಕಾರಿಯನ್ನು ಪ್ರತ್ಯೇಕವಾಗಿ ಇರುವಂತೆ ಸೂಚನೆ ನೀಡಲಾಗಿದೆ ಎಂದು ಪ್ರಭಾರ ಜಿಲ್ಲಾ ಆರೋಗ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ.