Friday, March 24, 2023

MITಯಲ್ಲಿ ವಿದ್ಯಾರ್ಥಿಯನ್ನು ಉಗ್ರ ಕಸಬ್‌ಗೆ ಹೋಲಿಸಿದ ಪ್ರಾಧ್ಯಾಪಕ : ಇಂಜಿನಿಯರಿಂಗ್‌ ವಿದ್ಯಾರ್ಥಿಯ ತೀವ್ರ ಆಕ್ಷೇಪಕ್ಕೆ ಪ್ರೊಫೆಸರ್ ಅಮಾನತು..!

ಉಡುಪಿ : ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಯನ್ನು ಉಗ್ರ ಕಸಬ್‌ಗೆ ಹೋಲಿಸಿದ ಘಟನೆ ನಡೆದಿದೆ.

ಕ್ಲಾಸಲ್ಲೇ ಪ್ರಾಧ್ಯಾಪಕರನ್ನು ವಿದ್ಯಾರ್ಥಿ ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆ ಬಗ್ಗೆ ಆಂತರಿಕ ತನಿಖೆಗೆ ಎಂಐಟಿ ಆಡಳಿತ ಆದೇಶಿಸಿದ್ದು, ಪ್ರಾಧ್ಯಾಪಕನನ್ನು ವಿಚಾರಣೆ ಮುಗಿಯುವವರೆಗೂ ತರಗತಿ ತೆಗೆದುಕೊಳ್ಳದಂತೆ ಅಮಾನತಿಸಲಾಗಿದೆ.

ಕಳೆದ ಶುಕ್ರವಾರ ಈ ಘಟನೆ ನಡೆದಿದ್ದು, ಆ ಬಗ್ಗೆ ವಿಡಿಯೋ ಕೂಡ ವೈರಲ್ ಆಗಿದೆ. ವಿದ್ಯಾರ್ಥಿ ಹಂಝಾ ತನ್ನನ್ನು ಭಯೋತ್ಪಾದಕ ಎಂದು ಕರೆದ ಸಹಾಯಕ ಪ್ರಾಧ್ಯಾಪಕ ರವೀಂದ್ರನಾಥ್ ಅವರನ್ನು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಪ್ರಾಧ್ಯಾಪಕ ರವೀಂದ್ರನಾಥ್‌ ತರಗತಿಯಲ್ಲಿ ವಿದ್ಯಾರ್ಥಿಯ ಹೆಸರನ್ನು ಕೇಳಿದ್ದು, ವಿದ್ಯಾರ್ಥಿ ಮುಸ್ಲಿಂ ಹೆಸರು ಹೇಳಿದ ತಕ್ಷಣ ಓ ನೀನು ಕಸಬ್‌ ರೀತಿಯಾ ಎಂದು ಪ್ರಶ್ನಿಸಿದ್ದಾರೆ.

2008ರ 26/11 ಮುಂಬೈ ದಾಳಿಯಲ್ಲಿ ಸೆರೆ ಸಿಕ್ಕ ಏಕೈಕ ಉಗ್ರ ಅಜ್ಮಲ್‌ ಕಸಬ್‌ಗೆ ವಿದ್ಯಾರ್ಥಿಯನ್ನು ಹೋಲಿಸಿದ್ದಕ್ಕೆ ವಿದ್ಯಾರ್ಥಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾನೆ.

ನೀವು ನನ್ನನ್ನು ಹಾಗೆ ಹೇಗೆ ಕರೆಯುತ್ತೀರಿ ಎಂದು ಪ್ರಾಧ್ಯಾಪಕನಿಗೆ ವಿದ್ಯಾರ್ಥಿ ಪ್ರಶ್ನಿಸಿದ್ದು, ನಾನು ಹಾಸ್ಯದ ಧಾಟಿಯಲ್ಲಿ ಆ ರೀತಿ ಹೇಳಿದೆ ಎಂದು ಪ್ರಾಧ್ಯಾಪಕ ಹೇಳಿದ್ದಾನೆ.

ಆಗ ವಿದ್ಯಾರ್ಥಿ 26/11 ಮುಂಬೈ ದಾಳಿ ಹಾಸ್ಯ ಘಟನೆ ಅಲ್ಲ ಮತ್ತು ಮುಸ್ಲಿಮನಾಗಿ ಈ ರೀತಿಯ ವರ್ತನೆಯನ್ನು ಪ್ರತಿನಿತ್ಯ ಅನುಭವಿಸುತ್ತಿರೋದು ಕೂಡ ಹಾಸ್ಯವಲ್ಲ ಸರ್‌. ನನ್ನ ಧರ್ಮದ ಬಗ್ಗೆ ನೀವು ಜೋಕ್‌ ಮಾಡಬೇಡಿ ಎಂದು ಹೇಳಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಐಟಿ ನಿರ್ದೇಶಕರಾದ ಪಿಆರ್ ಎಸ್.ಪಿ.ಕರ್ ಅವರು, “ಈ ಘಟನೆ ಗುರುವಾರ ಅಥವಾ ಶುಕ್ರವಾರ ನಮ್ಮ ಸಂಸ್ಥೆಯಲ್ಲಿ ನಡೆದಿದೆ.

ಈ ಬಗ್ಗೆ ಆಂತರಿಕ ವಿಚಾರಣೆ ನಡೆಯುವವರೆಗೆ ತರಗತಿ ತೆಗೆದುಕೊಳ್ಳದಂತೆ ಸಂಬಂಧಪಟ್ಟ ಸಹಾಯಕ ಪ್ರಾಧ್ಯಾಪಕರಿಗೆ ಸೂಚನೆ ನೀಡಿದ್ದೇವೆ” ಎಂದು ತಿಳಿಸಿದ್ದಾರೆ.

ಈ ವಿವಾದದ ಬಳಿಕ ಹೇಳಿಕೆ ನೀಡಿರುವ ವಿದ್ಯಾರ್ಥಿ ಹಂಝಾ, ಜನಾಂಗೀಯ ಟೀಕೆ ಎಂದಿಗೂ ಒಪ್ಪುವಂತದಲ್ಲ.

ನಾನು ನನ್ನ ಪ್ರಾಧ್ಯಾಪಕರನ್ನು ಪ್ರಶ್ನಿಸುವ ವೀಡಿಯೊ ವೈರಲ್ ಆಗಿದೆ.

ಈ ದೇಶ ಕಂಡ ದೊಡ್ಡ ಭಯೋತ್ಪಾದಕರಲ್ಲಿ ಒಬ್ಬನಾದ ಕಸಬ್ ಎಂಬ ಸ್ವೀಕಾರಾರ್ಹವಲ್ಲದ ಹೆಸರಿನಿಂದ ಅವರು ನನ್ನನ್ನು ಕರೆದಿರುವುದೇ ನನ್ನ ಆಕ್ಷೇಪಕ್ಕೆ ಕಾರಣ.

ಬಳಿಕ ನಾನು ಪ್ರಾಧ್ಯಾಪಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಕ್ಷಮೆಯಾಚಿಸಿದ್ದಾರೆ. ಪ್ರಾಧ್ಯಾಪಕರಿಂದ ತಪ್ಪಾಗಿದೆ.

ಅದೂ ಕೂಡ ನಾನು ಮೆಚ್ಚುವ ವ್ಯಕ್ತಿ ಹೀಗೆ ಮಾಡಿರುವುದು ಬೇಸರ ತಂದಿದೆ. ಆದರೆ ಒಂದು ಬಾರಿ ಇದನ್ನು ಕ್ಷಮಿಸಿ ಇಲ್ಲಿಗೇ ಬಿಟ್ಟು ಬಿಡಬೇಕು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics