ಮಂಗಳೂರು: ತುಳುನಾಡಿನ ದೈವಗಳ ಬಗ್ಗೆ ಈಗೀಗ ಜನರಿಗೆ ನಂಬಿಕೆ ಹೆಚ್ಚಾಗುತ್ತಿದೆ. ಹಲವಾರು ಮಂದಿ ಸಿನಿಮಾ ಸೆಲೆಬ್ರೆಟಿಗಳು, ರಾಜಕೀಯ ಮುಖಂಡರು ದೈವಾರಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಾ ಬರುತ್ತಿದ್ದು, ನಿನ್ನೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಶ್ರೀ ಸತ್ಯ ದೇವತೆ ಕಲ್ಲುರ್ಟಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ದ.ಕ ಜಿಲ್ಲೆಯ ಜನರು ಭಕ್ತಿಯಿಂದ ಆರಾಧಿಸುವ ಕೊರಗಜ್ಜನ ಸನ್ನಿಧಿ, ಕಟೀಲು ದುರ್ಗಾಪರಮೇಶ್ವರಿ, ಧರ್ಮಸ್ಥಳ ಮಂಜುನಾಥ, ಕುಕ್ಕೆ ಸುಬ್ರಹ್ಮಣ್ಯ ಹೀಗೆ ನಾನಾ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವವರು ಕೂಡಾ ಹೆಚ್ಚಾಗಿದ್ದಾರೆ.
ಶನಿವಾರ ಆನಂದ್ ಸಿಂಗ್ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದಕ್ಕೂ ಮೊದಲು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.
ಅಲ್ಲಿಂದ ಅಳದಂಗಡಿಗೆ ಭೇಟಿ ನೀಡಿದ್ದಾರೆ. ಕಲ್ಲುರ್ಟಿ ದೈವದ ಕೋಲ ಸೇವೆಯಲ್ಲಿ ಪಾಲ್ಗೊಂಡ ಸಚಿವರು ಮತ್ತವರ ಕುಟುಂಬದವರು, ದೈವದ ಗಂಧ ಪ್ರಸಾದ ಸ್ವೀಕರಿಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಜತೆಗಿದ್ದರು.