Connect with us

DAKSHINA KANNADA

Mangaluru: ಹೆದ್ದಾರಿ ಕಾಮಗಾರಿ- ಗುರುಪುರ ಕೈಕಂಬದಲ್ಲಿ 150 ಅಡಿ ದೂರಕ್ಕೆ ಬಹುಮಹಡಿ ಕಟ್ಟಡವೇ ಸ್ಥಳಾಂತರ..!

Published

on

ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರಿನ ಬಿಕರ್ನಕಟ್ಟೆ ಕೈಕಂಬದಿಂದ ಸಾಣೂರು ವರೆಗೆ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗುರುಪುರ ಕೈಕಂಬ ಜಂಕ್ಷನ್ ಬಳಿ 6000 ಚದರ ಅಡಿ ವಿಸ್ತೀರ್ಣದ ಒಂದು ಅಂತಸ್ತಿನ ವಾಣಿಜ್ಯ ಕಟ್ಟಡವನ್ನು 150 ಅಡಿ ಸ್ಥಳಾಂತರಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರಿನ ಬಿಕರ್ನಕಟ್ಟೆ ಕೈಕಂಬದಿಂದ ಸಾಣೂರು ವರೆಗೆ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗುರುಪುರ ಕೈಕಂಬ ಜಂಕ್ಷನ್ ಬಳಿ 6000 ಚದರ ಅಡಿ ವಿಸ್ತೀರ್ಣದ ಒಂದು ಅಂತಸ್ತಿನ ವಾಣಿಜ್ಯ ಕಟ್ಟಡವನ್ನು 150 ಅಡಿ ಸ್ಥಳಾಂತರಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಹರಿಯಾಣ ಮೂಲದ ಎಚ್‌ಎಸ್‌ಬಿಎಲ್‌ ಬಿಲ್ಡಿಂಗ್‌ ಸೊಲ್ಯೂಷನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯು ಸ್ಥಳಾಂತರ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದು, ಸ್ಥಳಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಎರಡು ತಿಂಗಳ ಹಿಂದೆ ವಾಮಂಜೂರಿನಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದ ಅಂಗಡಿ, ಮನೆ ಇದ್ದ ಕಟ್ಟಡವನ್ನು ಕಂಪೆನಿಯು ಸ್ಥಳಾಂತರಿಸಿತ್ತು.

ಅಲ್ಲದೆ ಕೊಪ್ಪಳ, ಶಿರಗುಪ್ಪ ಮತ್ತು ಕೇರಳದಲ್ಲಿಯೂ ಈ ಕಂಪೆನಿ ಯಶಸ್ವಿಯಾಗಿ ಕಟ್ಟಡ ಸ್ಥಳಾಂತರ ಕಾಮಗಾರಿ ನಡೆಸಿದ ಅನುಭವ ಹೊಂದಿದೆ. ಗುರುಪುರ ಕೈಕಂಬದ ಸ್ಥಳಾಂತರಗೊಳ್ಳಲಿರುವ ಕಟ್ಟಡ ಉದ್ಯಮಿ ರಾಜೇಶ್‌ ಪೈ ಅವರಿಗೆ ಸೇರಿದೆ.

ಕಟ್ಟಡದ ಒಂದು ಪಾರ್ಶ್ವ ಹೆದ್ದಾರಿ ಕಾಮಗಾರಿ ಪ್ರಯುಕಗತ ತೆರವುಗೊಳಿಸ ಬೇಕಾಗಿದೆ.

ಆದರೆ ಮಾಲಕರು ಸಂಪೂರ್ಣ ನೆಲಸಮಗೊಳಿಸಲು ಅಥವಾ ಅರ್ಧ ಧ್ವಂಸಗೊಳಿಸಲು ಇಷ್ಟಪಡದೆ ಯಥಾಸ್ಥಿತಿಯಲ್ಲಿ ಸ್ಥಳಾಂತರಗೊಳಿಸುವ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

ಈ ಕಟ್ಟಡವನ್ನು 1999ರಲ್ಲಿ ನಿರ್ಮಿಸಲಾಗಿತ್ತು.

‘ಇದು ನಮ್ಮ ನಿರ್ಮಾಣದ ಪ್ರಥಮ ಕಟ್ಟಡ. ಬಹಳ ಕಷ್ಟಪಟ್ಟು ಕಟ್ಟಿಸಿದ ಕಟ್ಟಡವಾಗಿದ್ದು, ಸುಧೀಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದ್ದರು.

ಭವಿಷ್ಯದಲ್ಲಿ ಹೆದ್ದಾರಿ ವಿಸ್ತರಣೆಗೊಳಿಸಿದರೂ ಕಟ್ಟಡಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು.

ಕಟ್ಟಡದೊಂದಿಗೆ ಇಷ್ಟೆಲ್ಲಾ ಭಾವನೆ, ನೆನಪುಗಳು ಇರುವುದರಿಂದ ಅದನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಸ್ಥಳಾಂತರಗೊಳಿಸಲು ನಿರ್ಧರಿಸಲಾಗಿದೆ’ ಎಂದು ಕಟ್ಟಡದ ಇನ್ನೋರ್ವ ಪಾಲುದಾರ ಅಶೋಕ್‌ ಪೈ ತಿಳಿಸಿದ್ದಾರೆ.

ಹೊಸ ಕಟ್ಟಡ ನಿರ್ಮಿಸಲು ಬಹಳ ಖರ್ಚಾಗುತ್ತದೆ. ಆದರೆ ಅದರ ಶೇ. 35ರಷ್ಟು ಮಾತ್ರವೇ ಸ್ಥಳಾಂತರಕ್ಕೆ ಖರ್ಚಾಗುತ್ತದೆ.

ಸ್ಥಳಾಂತರ ಕಾಮಗಾರಿಗೆ 50 ಲಕ್ಷ ರೂ. ಖರ್ಚಾಗಲಿದೆ. ಕಟ್ಟಡ ಧ್ವಂಸಗೊಳಿಸಿದರೆ ಕಲ್ಲು, ಸಿಮೆಂಟ್‌, ಇಟ್ಟಿಗೆ, ಮರಳು, ಮರಮಟ್ಟು ಎಲ್ಲವೂ ಹಾಳಾಗುತ್ತದೆ.

ಇದರಿಂದ ಪರಿಸರಕ್ಕೂ ಹಾನಿ’ ಎನ್ನುವುದು ಅವರ ಅಭಿಪ್ರಾಯ. ಸ್ಥಳಾಂತರಗೊಳ್ಳುವ ಕಟ್ಟಡವು 30 ವರ್ಷ ಬಾಳಿಕೆ ಬರುತ್ತದೆ ಎಂದು ಕಂಪೆನಿ ಭರವಸೆ ನೀಡಿದೆ.

ಸ್ಥಳಾಂತರಗೊಂಡ 6 ತಿಂಗಳ ಬಳಿಕ ಅದಕ್ಕೆ 2 ಅಂತಸ್ತು ಏರಿಸ ಬಹುದು ಎಂದು ಖಾತರಿ ನೀಡಿದೆ.

ಈ ಕಟ್ಟಡದಲ್ಲಿ ಕೆನರಾ ಬ್ಯಾಂಕ್‌ ಶಾಖೆ, ಮೆಸ್ಕಾಂ ಕಚೇರಿ ಸಹಿತ ಹಲವು ಅಂಗಡಿಗಳು ಇದ್ದವು.

ಅವುಗಳನ್ನು ಹಿಂಬದಿ ನಿರ್ಮಿಸಿದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಹೊಸ ಕಟ್ಟಡದ ಬಳಿ ಈ ಹಳೆಯ ಕಟ್ಟಡವನ್ನು ಸ್ಥಳಾಂತರಿಸಲಾಗುತ್ತಿದೆ.ಅಡಿಪಾಯದ ಮಣ್ಣು ತೆಗೆದು ಕಟ್ಟಡದ ಸುತ್ತ ಅಗೆದು ನೆಲದ ಅಡಿಯಿಂದ ಕಟ್ಟಡ ಆಧರಿಸಿ 500 ಜ್ಯಾಕ್‌ ಅಳವಡಿಸಲಾಗಿದೆ.

ಬೀಮ್‌ ಕೆಳಗೆ ಪಿಲ್ಲರ್‌ಗಳನ್ನು ಅಳವಡಿಸಲಾಗುತ್ತದೆ.

ಅಗತ್ಯವಿದ್ದ ಕಡೆ ಕೆಂಪು ಕಲ್ಲಿನಿಂದ ಭರ್ತಿ ಮಾಡಿ ಎರಡೂ ಅಂತಸ್ತುಗಳ ಭಾರ ಸಮತೋಲನಗೊಳಿಸಲಾಗುತ್ತದೆ.

ಮೊದಲಿಗೆ ಕಟ್ಟಡವನ್ನು 15 ಅಡಿ ಹಿಂದಕ್ಕೆ ನಂತರ ಬಲಕ್ಕೆ 115 ಅಡಿ, ಅಲ್ಲಿಂದ ಹಿಂದಕ್ಕೆ ಹೊಸ ಕಟ್ಟಡದ ಸಮಕ್ಕೆ 15 ಅಡಿ ಸರಿಸಲಾಗುತ್ತದೆ.

ಅಡಿಪಾಯವಿಲ್ಲದೆ ಉದ್ದೇಶಿತ ಜಾಗಕ್ಕೆ ಸ್ಥಳಾಂತರಿಸಿ ನಂತರ ಅಡಿಪಾಯ ಹಾಕಲಾಗುತ್ತದೆ.

ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯಲಿದ್ದು, ಮೂರು ತಿಂಗಳಲ್ಲಿ ಮುಕ್ತಾಯಗೊಳ್ಳುತ್ತದೆ. ದಿನಕ್ಕೆ 10 ಅಡಿಯಷ್ಟು ಸ್ಥಳಾಂತರ ಮಾಡಲು ಸಾಧ್ಯವಾಗುತ್ತದೆ.

ಸ್ಥಳಾಂತರಕ್ಕೆ ಯಂತ್ರಗಳನ್ನು ಬಳಸದೆ ಸಂಪೂರ್ಣವಾಗಿ ಮಾನವ ಶ್ರಮದಿಂದಲೇ ಕಾಮಗಾರಿ ನಡೆಸಲಾಗುತ್ತದೆ.

BELTHANGADY

ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು- ಕಳ್ಳ ಅರೆಸ್ಟ್..!

Published

on

ಬೆಳ್ತಂಗಡಿ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ನಿವಾಸಿ ಉಮೇಶ್‌ ಬಳೇಗಾರ್‌(47) ಬಂಧಿತ ಆರೋಪಿ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಅಜಿತ್ ನಗರ ಕೆಲ್ಲೆ ನಿವಾಸಿ ಫೆಲಿಕ್ಸ್ ರೋಡ್ರಿಗಸ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಗಲು ಹೊತ್ತಿನಲ್ಲಿ ಮನೆಯ ಬಾಗಿಲು ಮುರಿದು ನುಗ್ಗಿ ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಆಗಿದೆ.

ಈ ಕೂಡಲೇ ಮನೆಯವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.

ಆರೋಪಿ ವಿರುದ್ಧ ತಮಿಳುನಾಡು, ಕೇರಳದ ವಿವಿಧ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಿಸಲಾಗಿದೆ.

ಅಲ್ಲದೆ ಕರ್ನಾಟಕದ ಪುತ್ತೂರು, ಬಂಟ್ವಾಳ, ಮಂಗಳೂರು, ಮೂಡಬಿದ್ರೆ ಠಾಣೆಯಲ್ಲಿಯೂ ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾನೆ.

ಈತನಿಗಾಗಿ ಮೂರೂ ರಾಜ್ಯಗಳ ಪೊಲೀಸರು ಹುಡುಕಾಟ ನಡೆಸುತ್ತಿರುವಾಗಲೇ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈತನಿಂದ ಕಳ್ಳತನ ಮಾಡಲಾದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

Continue Reading

DAKSHINA KANNADA

ಜಾನುವಾರು ಸಾಗಾಟಗಾರರ ಕೊಲೆಗೆ ಸಂಚು ರೂಪಿಸುತ್ತಿದ್ದ ಇಬ್ಬರ ಬಂಧನ..!

Published

on

ಮಂಗಳೂರು: ಜಾನುವಾರು ಅಕ್ರಮ ಸಾಗಾಟದ ತಂಡವೊಂದರ ಸದಸ್ಯರ ಕೊಲೆಗೆ ಸಂಚು ರೂಪಿಸಿದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ಮಂಗಳೂರು ನಗರ ಹೊರವಲಯದ ಅಡ್ಯಾರ್ ನಲ್ಲಿ ನಡೆದಿದೆ.

ಫರಂಗಿಪೇಟೆ ಸಮೀಪದ ಅಮೆಮಾರ್‌ನ ನಿವಾಸಿಗಳು ತಸ್ಲೀಮ್ ಯಾನೆ ಗರುಡ ತಸ್ಲೀಮ್ (34) ಮತ್ತು ಹೈದರಾಲಿ ಯಾನೆ ಹೈದು (26) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಗುರುವಾರದಂದು ತಸ್ಲೀಮ್ ಮತ್ತು ಆತನ ಗುಂಪಿನ ಸದಸ್ಯರು ಇನ್ನೊಂದು ತಂಡದ ಕೊಲೆಗೆ ಸಂಚು ರೂಪಿಸಿ ತಲವಾರಿನೊಂದಿಗೆ ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಕೊಲೆ ಸಂಚನ್ನು ವಿಫಲಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ತಸ್ಲೀಮ್ ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಹಾಗೂ ದರೋಡೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣ, ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ, ಜಾನುವಾರು ಕಳ್ಳತನ ಪ್ರಕರಣ, ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣ ಗಳು, ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಸಹಿತ 14 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಈತನು 10 ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ.

ಇನ್ನೋರ್ವ ಆರೋಪಿ ಹೈದರಾಲಿಯು ಈ ಹಿಂದೆ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣ, ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣ ಹಾಗೂ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

BANTWAL

ವಿಟ್ಲ: ವಿದ್ಯಾರ್ಥಿನಿಗೆ ಕಿರುಕುಳ-ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

Published

on

ಬಂಟ್ವಾಳ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ವಿಚಾರದಲ್ಲಿ ಪೆರುವಾಯಿ ಮೂಲದ ಯುವಕನ ವಿರುದ್ಧ ವಿಟ್ಲ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಕೇಪು ಗ್ರಾಮದ 9ನೇ ತರಗತಿ ವಿದ್ಯಾರ್ಥಿಯೊಬ್ಬಳನ್ನು ಯುವಕ ಕೆಲವು ದಿನಗಳಿಂದ ಹಿಂಬಾಲಿಸುತ್ತಿದ್ದು, ಮೊಬೈಲ್ ನಂಬರ್ ನೀಡುವಂತೆ ಕಿರುಕುಳ ನೀಡಿದ್ದಾನೆ. ಶಾಲೆ ಸಮೀಪ ಬಂದು ಬೈಕ್ ನಲ್ಲಿ ಕೂರುವಂತೆ ಹೇಳಿದ್ದಾನೆ.

ಈ ಎಲ್ಲಾ ವಿಚಾರವನ್ನು ಬೇರೆ ಕಡೆ ಹೇಳಬಾರದೆಂದು ಬೆದರಿಸುವ ಕಾರ್ಯ ಮಾಡಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ಶಾಲೆಯ ಶಿಕ್ಷಕರಲ್ಲಿ ತಿಳಿಸಿದ್ದು, ಅವರು ಪೋಷಕರಿಗೆ ಮಾಹಿತಿ ನೀಡಿ, ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Continue Reading

LATEST NEWS

Trending