DAKSHINA KANNADA
ಪೀಕ್ ಅವರ್‌ನಲ್ಲೇ ದಿನನಿತ್ಯ ಕರೆಂಟ್ ಕಟ್ -ಲೋಡ್ ಶೆಡ್ಡಿಂಗ್ ವಿರುದ್ಧ ಸಾರ್ವಜನಿಕರ ಆಕ್ರೋಶ
ಮೆಸ್ಕಾಂ ವ್ಯಾಪ್ತಿಯಲ್ಲಿ ರಾತ್ರಿ ಅನಿಯಮಿತವಾಗಿ ವಿದ್ಯುತ್ ಕಡಿತ ಆರಂಭಗೊಂಡಿದ್ದು, ಜನರು ಆತಂಕ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯನವರ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ 200 ಯೂನಿಟ್‌ವರೆಗೆ ವಿದ್ಯತ್ ಭಾಗ್ಯ ಏನೋ ಸಿಕ್ಕಿದೆ.
ಆದರೆ ಇನ್ನೊಂದೆಡೆ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ.
ಮಳೆಗಾಲ ಆಗಿದ್ದರೂ ಮೆಸ್ಕಾಂ ವ್ಯಾಪ್ತಿಯಲ್ಲಿ ರಾತ್ರಿ ಅನಿಯಮಿತವಾಗಿ ವಿದ್ಯುತ್ ಕಡಿತ ಆರಂಭಗೊಂಡಿದ್ದು, ಜನರು ಆತಂಕ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಒಂದು ವಾರದಿಂದ ರಾತ್ರಿ ಯಾವುದೇ ಪೂರ್ವ ಸೂಚನೆ ಇಲ್ಲದೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ನಗರದ ವಿವಿಧ ಕಡೆಗಳಿಂದ ನಾಗರಿಕರು ದೂರುತ್ತಿದ್ದಾರೆ.
ಪ್ರತಿನಿತ್ಯ ರಾತ್ರಿ ವೇಳೆ 2ರಿಂದ 3 ಗಂಟೆಯವರೆಗೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ.
ಸಾಮಾನ್ಯವಾಗಿ ವಿದ್ಯುತ್ ಕಡಿತ ಇರುವಾಗ ಮೆಸ್ಕಾಂ ಸಕಾರಣ ಸಹಿತ ಪೂರ್ವ ಪ್ರಕಟನೆ ನೀಡುತ್ತದೆ.
ಆದರೆ ಪ್ರಸ್ತುತ ಅನಿಯಮಿತವಾಗಿ ಅದರಲ್ಲೂ ರಾತ್ರಿ ಹೊತ್ತು ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ನಗರದಲ್ಲಿ ಬಹುತೇಕ ಎಲ್ಲ ಪ್ರದೇಶಗಳಲ್ಲೂ ವಿದ್ಯುತ್ ಕಡಿತ ಕಳೆದ ವಾರವೊಂದರಿಂದ ಆಗುತ್ತಿದೆ.
ಕೈಗಾರಿಕಾ ಪ್ರದೇಶದಲ್ಲೂ ವಿದ್ಯುತ್ ಕಡಿತವಾಗುತ್ತಿದೆ ಎಂದು ಕೆಲವರು ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನಗರ ಭಾಗದಲ್ಲಿ ಸಮಸ್ಯೆ ಇಲ್ಲದಿದ್ದರೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಹೆಚ್ಚಿದೆ ಎನ್ನುವ ದೂರು ವ್ಯಕ್ತವಾಗುತ್ತಿದೆ.
ಮೆಸ್ಕಾಂ ಅಧಿಕಾರಿಗಳ ಪ್ರಕಾರ ಪವರ್ ಜನರೇಶನ್‌ನಲ್ಲಿ ಕೆಲವು ದಿನಗಳಿಂದ ಸಮಸ್ಯೆ ಇದೆ.
ರಾಯಚೂರು ಹಾಗೂ ಬಳ್ಳಾರಿಯ ಉಷ್ಣ ವಿದ್ಯುತ್ ಸ್ಥಾವರಗಳ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ಉತ್ಪಾದನೆ ಕುಸಿದಿದೆ.
ಆದ್ದರಿಂದ ಲೋಡ್ ಹೆಚ್ಚಿರುವ ಅವಧಿಗಳಲ್ಲಿ ಪವರ್ ಕಟ್ ಮಾಡುವಂತೆ ಕೆಪಿಟಿಸಿಎಲ್‌ನ ಬೆಂಗಳೂರಿನ ಲೋಡ್ ಡಿಸ್ಪಾಚ್ ಸೆಂಟರ್ ನಿಂದಲೇ ಸೂಚನೆ ಬಂದಿದೆ ಎಂದು ಮೆಸ್ಕಾಂ ಅಧಿಕಾರಿಗಳು ಸಿದ್ಧ ಉತ್ತರ ನೀಡುತ್ತಿದ್ದಾರೆ.
ಲೋಡ್ ಶೆಡ್ಡಿಂಗ್‌ನಿಂದಾಗಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ.
ಬೆಳಿಗ್ಗಿನ ಹೊತ್ತು ಕಚೇರಿಎ ಹೋಗುವ ಒತ್ತಡ, ಶಾಲಾ ಮಕ್ಕಳನ್ನು ಕಳುಹಿಸುವ ಗಡಿಬಿಡಿಯಲ್ಲಿದ್ದರೆ, ಸಂಜೆ ಮನೆಗೆ ಬಂದಾಗ ಅಡುಗೆ ಕೆಲಸದ ಒತ್ತಡವಿದೆ.
ಆದರೆ ಇದೇ ಅವಧಿಯಲ್ಲಿ ಪವರ್ ಕಟ್ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ.
ಇದರಿಂದ ಪ್ರತಿಯೊಬ್ಬರಿಗೂ ತೊಂದರೆ ಉಂಟಾಗುತ್ತಿದೆ.
ಲೋಡ್ ಶೆಡ್ಡಿಂಗ್ ಕಡಿಮೆ ಮಾಡಿ ದಿನದ 24 ಗಂಟೆಯೂ ವಿದ್ಯುತ್ ಕೊಡಬೇಕು ಎಂದು ಉದ್ಯೋಗಿ ಮಹಿಳೆಯರು ಆಗ್ರಹಿಸಿದ್ದಾರೆ.
DAKSHINA KANNADA
ಜಾನುವಾರು ಸಾಗಾಟಗಾರರ ಕೊಲೆಗೆ ಸಂಚು ರೂಪಿಸುತ್ತಿದ್ದ ಇಬ್ಬರ ಬಂಧನ..!
ಮಂಗಳೂರು: ಜಾನುವಾರು ಅಕ್ರಮ ಸಾಗಾಟದ ತಂಡವೊಂದರ ಸದಸ್ಯರ ಕೊಲೆಗೆ ಸಂಚು ರೂಪಿಸಿದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ಮಂಗಳೂರು ನಗರ ಹೊರವಲಯದ ಅಡ್ಯಾರ್ ನಲ್ಲಿ ನಡೆದಿದೆ.
ಫರಂಗಿಪೇಟೆ ಸಮೀಪದ ಅಮೆಮಾರ್‌ನ ನಿವಾಸಿಗಳು ತಸ್ಲೀಮ್ ಯಾನೆ ಗರುಡ ತಸ್ಲೀಮ್ (34) ಮತ್ತು ಹೈದರಾಲಿ ಯಾನೆ ಹೈದು (26) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಗುರುವಾರದಂದು ತಸ್ಲೀಮ್ ಮತ್ತು ಆತನ ಗುಂಪಿನ ಸದಸ್ಯರು ಇನ್ನೊಂದು ತಂಡದ ಕೊಲೆಗೆ ಸಂಚು ರೂಪಿಸಿ ತಲವಾರಿನೊಂದಿಗೆ ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಕೊಲೆ ಸಂಚನ್ನು ವಿಫಲಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ತಸ್ಲೀಮ್ ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಹಾಗೂ ದರೋಡೆ ಪ್ರಕರಣ, ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣ, ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ, ಜಾನುವಾರು ಕಳ್ಳತನ ಪ್ರಕರಣ, ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣ ಗಳು, ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಸಹಿತ 14 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಈತನು 10 ದಿನಗಳ ಹಿಂದೆ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದ.
ಇನ್ನೋರ್ವ ಆರೋಪಿ ಹೈದರಾಲಿಯು ಈ ಹಿಂದೆ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣ, ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣ ಹಾಗೂ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
BANTWAL
ವಿಟ್ಲ: ವಿದ್ಯಾರ್ಥಿನಿಗೆ ಕಿರುಕುಳ-ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು
ಬಂಟ್ವಾಳ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ವಿಚಾರದಲ್ಲಿ ಪೆರುವಾಯಿ ಮೂಲದ ಯುವಕನ ವಿರುದ್ಧ ವಿಟ್ಲ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.
ಕೇಪು ಗ್ರಾಮದ 9ನೇ ತರಗತಿ ವಿದ್ಯಾರ್ಥಿಯೊಬ್ಬಳನ್ನು ಯುವಕ ಕೆಲವು ದಿನಗಳಿಂದ ಹಿಂಬಾಲಿಸುತ್ತಿದ್ದು, ಮೊಬೈಲ್ ನಂಬರ್ ನೀಡುವಂತೆ ಕಿರುಕುಳ ನೀಡಿದ್ದಾನೆ. ಶಾಲೆ ಸಮೀಪ ಬಂದು ಬೈಕ್ ನಲ್ಲಿ ಕೂರುವಂತೆ ಹೇಳಿದ್ದಾನೆ.
ಈ ಎಲ್ಲಾ ವಿಚಾರವನ್ನು ಬೇರೆ ಕಡೆ ಹೇಳಬಾರದೆಂದು ಬೆದರಿಸುವ ಕಾರ್ಯ ಮಾಡಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ಶಾಲೆಯ ಶಿಕ್ಷಕರಲ್ಲಿ ತಿಳಿಸಿದ್ದು, ಅವರು ಪೋಷಕರಿಗೆ ಮಾಹಿತಿ ನೀಡಿ, ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
DAKSHINA KANNADA
ಇಂದು ಕರ್ನಾಟಕ ಬಂದ್: ಕರಾವಳಿಗರಿಂದ ನೈತಿಕ ಬೆಂಬಲ-ಬಸ್, ಹೊಟೇಲ್, ಶಾಲೆಗಳು ಎಂದಿನಂತೆ
ಮಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಹಲವು ಸಂಘಟನೆಗಳು ಕರೆ ನೀಡಿರುವ ಇಂದಿನ (ಶುಕ್ರವಾರ) ಕರ್ನಾಟಕ ಬಂದ್ ಗೆ ಕರಾವಳಿಯಲ್ಲಿ ನೈತಿಕ ಬೆಂಬಲ ವ್ಯಕ್ತವಾಗಿದೆ.
ಖಾಸಗಿ ಬಸ್ ಸಂಘಟನೆಯು ಕರ್ನಾಟಕ ಬಂದ್ ಗೆ ನೈತಿಕ ಬೆಂಬಲ ನೀಡಿದೆ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳು ಎಂದಿನಂತೆ ಓಡಾಟ ನಡೆಸಲಿದೆ.
ಕಾವೇರಿ ವಿಚಾರವಾಗಿ ನಮ್ಮ ಸಹಾನುಭೂತಿಯಿದೆ. ಆದರೆ ಬಸ್ ಸಂಚಾರ ಬಂದ್ ಮಾಡುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಸೇರಿ ಸಾರ್ವಜನಿಕ ಜೀವನಕ್ಕೆ ಕಷ್ಟವಾಗುವ ಕಾರಣ ನಾವು ನೈತಿಕ ಬೆಂಬಲ ಸೂಚಿಸುತ್ತೇವೆ. ಬಸ್ ಓಡಾಟ ಎಂದಿನಂತೆ ಇರಲಿದೆ ಎಂದು ಖಾಸಗಿ ಬಸ್ ಒಕ್ಕೂಟ ತಿಳಿಸಿದೆ.
ಜೊತೆಗೆ ಕರಾವಳಿ ಹೋಟೆಲ್ ಉದ್ಯಮವು ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಮಾತ್ರ ನೀಡಿದೆ. ಹೀಗಾಗಿ ಉಡುಪಿ- ಮಂಗಳೂರಿನಲ್ಲಿ ಹೋಟೆಲ್ ಗಳು ತೆರೆದಿರಲಿವೆ.
ಇಂದು ಕರ್ನಾಟಕ ಬಂದ್ ಇದ್ದರೂ, ಕರಾವಳಿ ಜಿಲ್ಲೆಗಳಲ್ಲಿ ಜನ ಜೀವನ ಎಂದಿನಂತೆ ಇರಲಿದೆ. ಜೊತೆಗೆ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ.