ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರವಾಸ ಕೈಗೊಳ್ಳುವ ಹಾಗೂ ಆಗಮಿಸುವವರ ಪಾಲಿಗೆ ಭವಿಷ್ಯದಲ್ಲಿ ದುಬಾರಿಯಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿ ಬಳಕೆ ಶುಲ್ಕ 3 ರಿಂದ 10 ಪಟ್ಟು ಹೆಚ್ಚಳವಾಗಲಿದೆ.
ಸದ್ಯ ಈ ವಿಮಾನ ನಿಲ್ದಾಣ ನಿರ್ವಹಣೆ ಮಾಡುತ್ತಿರುವ ಅದಾನಿ ಕಂಪನಿ ಪ್ರಯಾಣಿಕರಿಂದ ವಸೂಲಿ ಮಾಡುತ್ತಿರುವ ಯುಡಿಎಫ್ (ಯೂಸರ್ ಡೆವಲಪ್‌ಮೆಂಟ್ ಫೀ) ಪ್ರಸ್ತಾವನೆಯನ್ನು ಆ.12 ರಂದು ಏರ್‌ಪೋರ್ಟ್ ಇಕಾನಮಿಕ್ಸ್ ರೆಗ್ಯುಲೇಟರಿ ಅಥಾರಿಟಿ (ಎಇಆರ್‌ಎ)ಗೆ ಅನುಮತಿಗಾಗಿ ಸಲ್ಲಿಸಿದೆ.
ಇದರಲ್ಲಿ ದೇಶಿಯಾ ಹಾಗೂ ವಿದೇಶಿ ಯಾನಿಗಳಿಗೆ ಶುಲ್ಕ ಹೆಚ್ಚಳ ಪ್ರಸ್ತಾಪಿಸಲಾಗಿದೆ. ಇದರಲ್ಲಿ ನಿರ್ಗಮನ ಮಾತ್ರವಲ್ಲ ಆಗಮನದ ಯಾತ್ರಿಗಳಿಗೂ ಈ ಶುಲ್ಕ ಅನ್ವಯಿಸುವಂತೆ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ದೇಶಿಯ ಯಾನಿಗಳಿಗೆ 15 ರೂ ಹಾಗೂ ವಿದೇಶಿಯರಿಗೆ 825 ರೂ ಅಭಿವೃದ್ಧಿ ಬಳಕೆ ಶುಲ್ಕ ವಿಧಿಸಲಾಗುತ್ತಿದೆ. 2010 ರಿಂದ ಇದೇ ಶುಲ್ಕ ವಿಧಿಸಲಾಗುತ್ತಿತ್ತು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಿಲ್ದಾಣವನ್ನು ನಿರ್ವಹಣೆ ಮಾಡುತ್ತಿದ್ದುದರಿಂದ ಈ ಶುಲ್ಕದಲ್ಲಿ ಪರಿಷ್ಕರಣೆಯಾಗಿರಲಿಲ್ಲ. ಪ್ರಾಧಿಕಾರದ ನಿಯಮದ ಪ್ರಕಾರ ಇದು ಪ್ರತೀ ಐದು ವರ್ಷದಲ್ಲಿ ಶುಲ್ಕ ಪರಿಷ್ಕರಣೆಗೆ ಅವಕಾಶ ಇದೆ. ಪ್ರಸ್ತಾವನೆಗೆ ಅನುಮತಿ ಸಿಕ್ಕರೆ ಅ.1 ರಿಂದ ಈ ಶುಲ್ಕ ಜಾರಿಯಾಗುವ ಸಾಧ್ಯತೆ ಇದೆ.
ಇದೀಗ 2022ರಿಂದ 2026ರವರೆಗೆ ದೇಶಿಯ ಯಾನಿಗಳಿಗೆ 250 ರಿಂದ 725ರವರೆಗೆ, ವಿದೇಶಿಯಾನಿಗಳಿಗೆ 825 ರಿಂದ 1,200ವರೆಗೆ ಅಭಿವೃದ್ಧಿ ಶುಲ್ಕ ಹೆಚ್ಚಾಗಲಿದೆ. 2 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಇದರಲ್ಲಿ ವಿನಾಯ್ತಿ ಇರುತ್ತದೆ. ಈ ಶುಲ್ಕ ಹೆಚ್ಚಳಕ್ಕೆ ಅನಿವಾಸಿ ಭಾರತೀಯರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಪಿಎಂಒ ಕಚೇರಿ ಸೇರಿ ಹಲವರಿಗೆ ಟ್ವೀಟ್
ಈ ಬಗ್ಗೆ ಅನಿವಾಸಿ ಕನ್ನಡಿಗ ಮೋಹನ್‌ದಾಸ್ ಕಾಮತ್ ಈಗಾಗಲೇ ಪಿಎಂಓ ಕಚೇರಿಗೆ, ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೂ ಟ್ವೀಟ್ ಮಾಡಿ ಶುಲ್ಕ ಹೆಚ್ಚಳದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಂಗಳೂರಲ್ಲಿ ಲಗೇಜು ಸಾಗಾಟಗಾರರ ದರವೂ ದುಬಾರಿ
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜು ಸಾಗಾಟದಾರರ ದರವೂ ಲಗೇಜ್‌ಗೆ 100 ರೂ. ಇದ್ದುದು ಮೂರು ಪಟ್ಟು ಏರಿಕೆಯಾಗಿ 400 ರೂ ಆದರೆ. ವಿದೇಶಿ ಯಾನಿಗಳಿಗೆ 600 ರೂ ಆಗಿದೆ.
ಗಲ್ಫ್ ಉದ್ಯೋಗಿಗಳಿಗೆ ಸಂಕಷ್ಟ
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಹಲವು ಕರಾವಳಿಗರು ಗಲ್ಫ್ ದೇಶಗಳಲ್ಲಿ ದುಡಿಯುತ್ತಿದ್ದಾರೆ. ಅವರು ತಮ್ಮ ಹೊಟ್ಟೆಪಾಡಿಗಾಗಿ ದೂರದ ದೇಶಗಳಲ್ಲಿ ದುಡಿಯುತ್ತಾರೆ. ಇಂತಹ ಶುಲ್ಕಗಳಿಂದ ಅಂತಹವರು ಸಂಕಷ್ಟಕ್ಕೀಡಾಗುತ್ತಾರೆ. ಆದ್ದರಿಂದ ಈ ಶುಲ್ಕಗಳು ಹೆಚ್ಚಾಗಬಾರದು ಎಂದು ಹೆಚ್ಚಿನ ಗಲ್ಫ್ ಉದ್ಯೋಗಿಗಳು ಹೇಳುತ್ತಿದ್ದಾರೆ.