Wednesday, February 8, 2023

ನೌಕರಿ ಎಎಸ್‌ಐ – ಮನೆ ಮಾತ್ರ 6 ಕೋಟಿದ್ದು: ಎಸಿಬಿ ದಾಳಿಗೆ ಪರಾರಿಯಾದ ಪೊಲೀಸ್ ದಯಾನಂದ..!

ಬೆಂಗಳೂರು: ಲಂಚ ಪಡೆದ ಆರೋಪದಡಿ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಯ ಎಎಸ್‌ಐ ದಯಾನಂದ ಸ್ವಾಮಿ ಅಮಾನತುಗೊಂಡ ಬೆನ್ನಲ್ಲೇ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಯಲಹಂಕ ಉಪನಗರ ಠಾಣಾ ವ್ಯಾಪ್ತಿಯಲ್ಲಿರುವ ದಯಾನಂದಸ್ವಾಮಿ ಮನೆ ಮೇಲೆ ಎಸಿಬಿ ಎಸ್‌ಪಿ ಯತೀಶ್‌ಚಂದ್ರ ನೇತೃತ್ವದಲ್ಲಿ 15 ಮಂದಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಎ ಎಸ್ ಐ ದಯಾನಂದ ಮಾತ್ರ ಮನೆ ಖಾಲಿ ಮಾಡಿ ಎಸ್ಕೇಪ್ ಆಗಿದ್ದಾನೆ.

ಮನೆಯಲ್ಲಿ ಕೆಲವು ದಾಖಲಾತಿ ಪತ್ರಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಚರಾಸ್ತಿ ಹಾಗೂ ಸ್ಥಿರಾಸ್ತಿ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. ಸುಮಾರು 6 ಕೋಟಿ ರೂ. ಮೌಲ್ಯದ ಮನೆಯನ್ನು ಎಎಸ್‌ಐ ಕಟ್ಟಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ಲಂಚ ಪಡೆದ ಆರೋಪದಡಿ ಉದ್ಯಮಿ ಭರತ್‌ಶೆಟ್ಟಿ ಎಂಬುವರು ಇತ್ತೀಚೆಗೆ ನಗರದ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಗೆ ಹಾಗೂ ಎಸಿಬಿಗೆ ದೂರು ನೀಡಿದ್ದರು.

ಆಂತರಿಕ ತನಿಖೆ ನಡೆಸಿ ಪ್ರಾಥಮಿಕ ತನಿಖಾ ವರದಿಯನ್ನು ನಗರದ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರಿಗೆ ಸಲ್ಲಿಸಿದ್ದರು. ಮೇಲ್ನೋಟಕ್ಕೆ ಎಎಸ್‌ಐ ತಪ್ಪಿತಸ್ಥ ಎಂದು ಕಂಡು ಬಂದಿದ್ದರಿಂದ ಅವರನ್ನು ಅಮಾನತು ಮಾಡಿ ಎಸಿಬಿ ತನಿಖೆಗೆ ಶಿಫಾರಸು ಮಾಡಲಾಗಿತ್ತು.

ಭರತ್‌ಶೆಟ್ಟಿ ವಿರುದ್ಧ ವಂಚನೆ ಹಾಗೂ ಹಲ್ಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದಿಂದ ಮುಕ್ತಗೊಳಿಸಿ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್‌ ಸಲ್ಲಿಸಲು ಎಎಸ್‌ಐ ದಯಾನಂದ ಸ್ವಾಮಿ 5 ಲಕ್ಷ ರೂ. ಲಂಚ ಪಡೆದಿದ್ದರು.

ಅಲ್ಲದೆ, ತಮ್ಮ ಅಧಿಕಾರದ ಪ್ರಭಾವ ಬಳಸಿ ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಿ ಹಣ ಸುಲಿಗೆ ಮಾಡಿದ ಆರೋಪ ಕೇಳಿ ಬಂದಿತ್ತು.

ಈ ಸಂಬಂಧ ಭರತ್‌, ಎಎಸ್‌ಐ ವಿರುದ್ಧ ನಗರ ಪೊಲೀಸ್‌ ಆಯುಕ್ತರು ಹಾಗೂ ಎಸಿಬಿಗೆ ದೂರು ನೀಡಿದ್ದರು. ಪ್ರಾಥಮಿಕ ತನಿಖೆಯಲ್ಲಿಎಸ್‌ಐ ಮೇಲೆ ಬಂದ ಆಪಾದನೆ ಮೇಲ್ನೋಟಕ್ಕೆ ಸಾಬೀತಾಗಿದ್ದು, ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು.

ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಆಯುಕ್ತರು ಪತ್ರ ಬರೆದ ಬೆನ್ನಲ್ಲೇ ಎಸಿಬಿ ದಾಳಿ ನಡೆಸಿದೆ.

LEAVE A REPLY

Please enter your comment!
Please enter your name here

Hot Topics