ಉಡುಪಿ ನಿಟ್ಟೂರು ಬಳಿ ರೆಕ್ಕೆಗೆ ಏಟಾಗಿ ಹಾರಲಾಗದ ಸ್ಥಿತಿಯಲ್ಲಿದ್ದ ಬ್ರಾಹ್ಮಣಿ ಕೈಟ್ ಗರುಡ ಪಕ್ಷಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ, ಚಿಕಿತ್ಸೆ ನೀಡಿ ಮತ್ತೆ ಪರಿಸರಕ್ಕೆ ಬಿಟ್ಟಿದ್ದಾರೆ.
ಉಡುಪಿ : ಉಡುಪಿ ನಿಟ್ಟೂರು ಬಳಿ ರೆಕ್ಕೆಗೆ ಏಟಾಗಿ ಹಾರಲಾಗದ ಸ್ಥಿತಿಯಲ್ಲಿದ್ದ ಬ್ರಾಹ್ಮಣಿ ಕೈಟ್ ಗರುಡ ಪಕ್ಷಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ, ಚಿಕಿತ್ಸೆ ನೀಡಿ ಮತ್ತೆ ಪರಿಸರಕ್ಕೆ ಬಿಟ್ಟಿದ್ದಾರೆ.
ವೈದ್ಯರ ಸಲಹೆ ಪಡೆದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸುಮಾರು 22 ದಿನಗಳವರೆಗೆ ತನ್ನ ಸುಪರ್ದಿಯಲ್ಲಿರಿಸಿ ಆರೈಕೆ ಮಾಡಿದ್ದ ವಿಶು ಶೆಟ್ಟಿ ಪಕ್ಷಿ ಪೂರ್ಣವಾಗಿ ಚೇತರಿಸಿಕೊಂಡು ಹಾರಲು ಶಕ್ತವಾದ ಬಳಿಕ ಗುರುವಾರ ಅದನ್ನು ಬಿಡುಗಡೆಗೊಳಿಸಿದ್ದಾರೆ.
ನಿರ್ಗತಿಕರಿಗೆ, ರೋಗಿಗಳಿಗೆ, ಸಂತ್ರಸ್ತರಿಗೆ ಸದಾ ಮಾನವೀಯ ನೆರವು ನೀಡಿ ಪ್ರಸಿದ್ಧರಾಗಿರುವ ವಿಶು ಶೆಟ್ಟಿ ಅವರು ಹಲವಾರು ಗಾಯಗೊಂಡ ಪಕ್ಷಿಗಳಿಗೂ ಆರೈಕೆ ಮಾಡಿ ಅವುಗಳನ್ನು ಸಂರಕ್ಷಿಸುವ ಕಾರ್ಯ ನಡೆಸಿದ್ದಾರೆ.
ಗರುಡ ಪಕ್ಷಿಗೆ ಆರೈಕೆ ಮಾಡಿ ಹಾರಲು ಬಿಟ್ಟಿರುವುದು ಇದು ಎರಡನೆಯ ಪ್ರಕರಣವಾಗಿದೆ.
ಬೆನ್ನು, ರೆಕ್ಕೆ, ಬಾಲ ಎಲ್ಲಾ ಕೆಂಪು ಅಥವಾ ಕೆಮ್ಮಣ್ಣಿನ ಬಣ್ಣ, ತಲೆ, ಎದೆ ಬಿಳಿ ಬಣ್ಣ ಹೊಂದಿರುವ ಹದ್ದಿನ ಗಾತ್ರದ ಗರುಡನನ್ನು ಕಾಣದ ಕರಾವಳಿಗರಿಲ್ಲ.
ತುಳು ಭಾಷೆಯಲ್ಲಿ ` ಗೆಂದಗಿಡಿ ‘ ಎಂದೇ ಗುರುತಿಸಿಕೊಂಡಿರುವ ಈ ಪಕ್ಷಿಯನ್ನು ಇಂಗ್ಲೀಷ್‌ನಲ್ಲಿ `ಬ್ರಾಹ್ಮಿಣಿ ಕೈಟ್ ‘ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಹಾಲೋಸ್ಟರ್ ಇಂಡುಸ್ ಎಂದಾಗಿದೆ.
ಕೋಳಿ ಮರಿಗಳನ್ನು ಕಣ್ಣು ಮಿಟುಕಿಸುವುದರೊಳಗೆ ಎತ್ತಿಕೊಂಡು ಹಾರಿ ಹೋಗುವ ಈ ಗರುಡ, ಆಸ್ತಿಕರ ಪಾಲಿಗೆ ವಿಷ್ಣು ದೇವರ ವಾಹನವಾಗಿದ್ದಾನೆ.
ಹೀಗಾಗಿ ಯಾರೂ ಗರುಡನನ್ನು ಬೇಟೆಯಾಡುವುದಿಲ್ಲ.
ಸಾಮಾನ್ಯವಾಗಿ ಒಂಟಿಯಾಗಿ ನದಿ, ಸಮುದ್ರ ತೀರ, ಗದ್ದೆಗಳುಳ್ಳ ಗ್ರಾಮೀಣ ಭಾಗ, ನಗರ ಪ್ರದೇಶ, ಮೀನು ಮಾರುಕಟ್ಟೆ, ಬಂದರು, ಹೀಗೆ ಎಲ್ಲೆಡೆಗಳಲ್ಲಿ ಗರುಡ ಪಕ್ಷಿ ಕಂಡು ಬರುತ್ತದೆ.
ಎತ್ತರದ ತೆಂಗಿನ ಮರ, ಬೋಗಿ ಮರಗಳಲ್ಲಿ ಕೋಲು, ಕಡ್ಡಿಗಳನ್ನು ಸಂಗ್ರಹಿಸಿ ಅಸ್ತವ್ಯಸ್ತವಾಗಿ ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡುತ್ತದೆ.