ರಾಜ್ಯದಲ್ಲಿ ಈಗಾಗಲೇ ಎಚ್3ಎನ್2 ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವಲ್ಲೇ ಮಹಾಮಾರಿ ಕೊರೊನಾ ಮತ್ತು ಹಂದಿ ಜ್ವರ ದ ಪ್ರಕರಣಗಳು ಏರಿಕೆಯಾಗುತ್ತಿರುವುದು ಕಳವಳದ ಜೊತೆಗೆ ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ.
ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಎಚ್3ಎನ್2 ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವಲ್ಲೇ ಮಹಾಮಾರಿ ಕೊರೊನಾ ಮತ್ತು ಹಂದಿ ಜ್ವರ ದ ಪ್ರಕರಣಗಳು ಏರಿಕೆಯಾಗುತ್ತಿರುವುದು ಕಳವಳದ ಜೊತೆಗೆ ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ.
ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 500 ದಾಟಿದೆ.
ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಅಧ್ಯಕ್ಷ ಡಾ ಎಂಕೆ ಸುದರ್ಶನ್ ಮಾತನಾಡಿ, ಕಳೆದ ಕೆಲವು ವಾರಗಳಿಂದ ಎಚ್3ಎನ್2 ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.
ಇದರ ಜೊತೆಗೆ ಎಚ್1ಎನ್1 ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯವು ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲೂ ವೈರಸ್ ಹೆಚ್ಚಾಗಿ ಹರಡುತ್ತಿರುವುದು ಕಂಡುಬರುತ್ತಿದೆ.
ಕೋವಿಡ್ ಪ್ರಕರಣಗಳಲ್ಲಿ ಏಕಕಾಲದಲ್ಲಿ ಏರಿಕೆಯಾಗುತ್ತಿದ್ದು, ಐಸಿಯು ದಾಖಲಾತಿಗಳ ಸಂಖ್ಯೆಯಲ್ಲಿನ ಹೆಚ್ಚಳವು ಕಳವಳಕಾರಿ ವಿಚಾರವಾಗಿದೆ ಎಂದು ಸುದರ್ಶನ್ ಅವರು ತಿಳಿಸಿದ್ದಾರೆ.
ಮಾರ್ಚ್ 15 ರ ವೇಳೆಗೆ ರಾಜ್ಯದಲ್ಲಿ 119 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣ ಸಂಘ್ಯೆ 560ಕ್ಕೆ ಏರಿಕೆಯಾಗಿದೆ.
ಈ ನಡುವೆ ಕೋವಿಡ್ ನಿಂದಾಗಿ ಮಂಗಳವಾರ ರಾಜ್ಯದಲ್ಲಿ ಒಂದು ಸಾವು ಕೂಡ ವರದಿಯಾಗಿದೆ.
ಮೃತರು ಬೆಂಗಳೂರಿನ 71 ವರ್ಷದ ವ್ಯಕ್ತಿಯಾಗಿದ್ದು, ಇವರಲ್ಲಿ ಜ್ವರ, ಕೆಮ್ಮು ಮತ್ತು ಉಸಿರಾಟದ ಲಕ್ಷಣಗಳು ಕಂಡು ಬಂದಿತ್ತು.
ಪ್ರಸ್ತುತ ಐಸಿಯುಗೆ ದಾಖಲಾಗುತ್ತಿರುವ ಹೆಚ್ಚಿನ ರೋಗಿಗಳು ಇತರೆ ದೀರ್ಘಕಾಲಿಕ ರೋಗಗಳನ್ನು ಹೊಂದಿರುವುದು ಕಂಡು ಬರುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಆಸ್ಪತ್ರೆಗಳಲ್ಲಿ ನಿಗಾ ಹೆಚ್ಚಿಸಲಾಗಿದ್ದು, ಸೋಂಕು ಪ್ರಕರಣಗಳ ಹೆಚ್ಚಳವು ಆತಂಕಕಾರಿಯಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.
ಐಎಲ್ಐ ಮತ್ತು ಕೋವಿಡ್ ಪ್ರಕರಣಗಳ ಲಕ್ಷಣಗಳು ಬಹುತೇಕ ಒಂದೇ ಆಗಿದ್ದು, ರೋಗ ಲಕ್ಷಣ ಇರುವ ಎಲ್ಲಾ ರೋಗಿಗಳ ಮೇಲೆ ನಿಗಾ ಇರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.