Connect with us

LATEST NEWS

ಎಸಿಬಿ ಭ್ರಷ್ಟಾಚಾರ ಪ್ರಶ್ನಿಸಿದ್ದಕ್ಕೆ ನನಗೇ ವರ್ಗಾವಣೆ ಬೆದರಿಕೆ: ಹೈಕೋರ್ಟ್‌ ನ್ಯಾಯಧೀಶರ ಗಂಭೀರ ಆರೋಪ

Published

on

ಬೆಂಗಳೂರು: ‘ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಗಳು ವಸೂಲಿ ಕೇಂದ್ರಗಳಾಗಿವೆ. ಅಲ್ಲಿನ ಅಕ್ರಮಗಳನ್ನು ಪ್ರಶ್ನಿಸಿರುವುದಕ್ಕೆ ನನಗೇ ವರ್ಗಾವಣೆ ಬೆದರಿಕೆ ಹಾಕಲಾಗಿದೆ ಎಂದು ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಗಂಭೀರ ಆರೋಪ ಮಾಡಿದ್ದು,

ನನಗೆ ಯಾರ ಹೆದರಿಕೆಯೂ ಇಲ್ಲ, ಬೆಕ್ಕಿಗೆ ಗಂಟೆ ಕಟ್ಟಲು ಸಿದ್ದನಿದ್ದೇನೆ ಎಂದು ಖಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಸೀಲ್ದಾರ್ ಪಿ.ಎಸ್ ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನಿನ್ನೆ ನಡೆಸಿದ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠವು “ಎಸಿಬಿಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿರುವುದಕ್ಕೆ ನನಗೇ ವರ್ಗಾವಣೆ ಬೆದರಿಕೆ ಹಾಕಲಾಗಿದೆ. ಎಸಿಬಿ ಎಡಿಜಿಪಿ ತುಂಬ ಪವರ್‌ಫುಲ್‌ ಆಗಿದ್ದಾರಂತೆ,

ಓರ್ವ ವ್ಯಕ್ತಿ ಈ ವಿಚಾರವನ್ನು ನನ್ನ ಸಹೋದ್ಯೋಗಿ ನ್ಯಾಯಮೂರ್ತಿಯೊಬ್ಬರಿಗೆ ಹೇಳಿದ್ದಾರಂತೆ. ಅದನ್ನು ಆಧರಿಸಿ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳೇ ನನಗೆ ವರ್ಗಾವಣೆಯ ಬೆದರಿಕೆ ಇದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಯಾರು ಎಂಬ ವಿವರವನ್ನೆಲ್ಲಾ ಮಧ್ಯಾಹ್ನದ ಕಲಾಪದಲ್ಲಿ ಆದೇಶದಲ್ಲೇ ಬರೆಯಿಸಿ ತೀರುತ್ತೇನೆ’ ಎಂದು ಪಟ್ಟು ಹಿಡಿದಿದ್ದರು.
ಮಧ್ಯಾಹ್ನ ಕಲಾಪ ಮುಂದುವರಿದಾಗ ಸರ್ಕಾರದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಹಾಜರಾಗಿ, ‘ಸರ್ಕಾರ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ.

ತಾವು ಯಾವುದಕ್ಕೂ ಬೇಸರ ಮಾಡಿಕೊಳ್ಳಬಾರದು. ಎಸಿಬಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನೂ ನೀಡುತ್ತೇವೆ. ಬಿ ರಿಪೋರ್ಟ್‌ನ ಸಂಪೂರ್ಣ ಮಾಹಿತಿಯನ್ನೂ ಕೊಡುತ್ತೇವೆ. ಸರ್ಕಾರ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ’ ಎಂಬ ಭರವಸೆ ನೀಡಿದರು.

ಇದಕ್ಕೆ ಸಂದೇಶ್‌, ‘ನನಗೆ ವರ್ಗಾವಣೆಯ ಪರೋಕ್ಷ ಬೆದರಿಕೆ ಹಾಕಲಾಗಿದೆ. ನಾನೀಗ ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಿದೆ. ಜಡ್ಜ್ ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ವರ್ಗಾವಣೆ ಬೆದರಿಕೆ ಎದುರಿಸುತ್ತೇನೆ.

ಜನರ ಒಳಿತಿಗಾಗಿ ವರ್ಗಾವಣೆಯಾಗಲು ಸಿದ್ಧನಿದ್ದೇನೆ, ನನಗೆ 500ರಲ್ಲಿ ಜೀವನ ಮಾಡಿಯೂ ಗೊತ್ತು, 5,000ದಲ್ಲಿ ಜೀವನ ಮಾಡಿಯೂ ಗೊತ್ತು. ಯಾರ ಹೆದರಿಕೆಯೂ ಇಲ್ಲ, ಬೆಕ್ಕಿಗೆ ಗಂಟೆ ಕಟ್ಟಲು ಸಿದ್ದನಿದ್ದೇನೆ.

ಇವತ್ತು ಭ್ರಷ್ಟಾಚಾರ ಸಮಾಜದಲ್ಲಿ ಕ್ಯಾನ್ಸರ್‌ ಆಗಿ ಪರಿಣಮಿಸಿದೆ ಎಂದ ಅವರು ಜಿಲ್ಲಾಧಿಕಾರಿ ಮಂಜುನಾಥ್‌ ಅವರ ಸೇವಾ ದಾಖಲೆಯನ್ನು ಹಾಜರುಪಡಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಜು. 7ಕ್ಕೆ ಮುಂದೂಡಿದರು.

ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಅನುಕೂಲಕರ ಆದೇಶ ನೀಡಲು ಬೇಗೂರು ನಿವಾಸಿ ಅಜಂ ಪಾಷಾ ಎಂಬುವರಿಂದ ರೂ 5 ಲಕ್ಷ ಲಂಚ ಪಡೆಯಲಾಗಿದೆ ಎಂಬ ಪ್ರಕರಣದಲ್ಲಿ ಅರ್ಜಿದಾರ ಮಹೇಶ್‌ ಆರೋಪಿಯಾಗಿದ್ದಾರೆ.

ಎಸಿಬಿ ಪರ ಪಿ.ಎನ್‌.ಮನಮೋಹನ್‌ ಮತ್ತು ಅರ್ಜಿದಾರ ಮಹೇಶ್‌ ಪರ ಹಿರಿಯ ವಕೀಲ ಎ.ಎಸ್‌.ಪೊನ್ನಣ್ಣ ಹಾಜರಾಗಿದ್ದರು.

ರಾಜ್ಯ ಸರ್ಕಾರ ಐಎಎಸ್, ಐಪಿಎಸ್ ಲಾಬಿಗೆ ಒಳಗಾಗುತ್ತಿದೆ
ಐಎಎಸ್ ಅಧಿಕಾರಿಯ ಲಾಬಿ ಬಗ್ಗೆ ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ಐಎಎಸ್ ಅಧಿಕಾರಿಯೊಬ್ಬರ ಮೇಲೆ ನಡೆಸಿದ ದಾಳಿಯಲ್ಲಿ ನಾಲ್ಕೂವರೆ ಕೋಟಿ ಹಣ ಮತ್ತು 6 ಕೆ.ಜಿ. ಚಿನ್ನ ಸಿಕ್ಕಿತ್ತು. ಆದರೆ, ಎಸಿಬಿ ಮಾತ್ರ ಆ ಕೇಸಿನಲ್ಲಿ ಬಿ ರಿಪೋರ್ಟ್ ಹಾಕಿದೆ.

ಬಿ ರಿಪೋರ್ಟ್ ಹಾಕಿದ್ದೇಕೆ ಎಂದು ಪ್ರಶ್ನಿಸಿದ ನ್ಯಾಯಾಧೀಶರನ್ನೇ ವರ್ಗಾಯಿಸಲಾಗಿದೆ. ಬೇರೆ ನ್ಯಾಯಾಧೀಶರು ಬಂದ ನಂತರ ಬಿ ರಿಪೋರ್ಟ್ ಅಂಗೀಕರಿಸಲಾಗಿದೆ.

ಇದನ್ನೆಲ್ಲಾ ನೋಡಿ ಕಣ್ಮುಚ್ಚಿ ಕೂರುವುದಾದರೂ ಹೇಗೆ, ವರ್ಗಾವಣೆ ಬೆದರಿಕೆ ಬಗ್ಗೆ ಹೇಳಿದವರ ಹೆಸರನ್ನೂ ಬಹಿರಂಗಪಡಿಸುತ್ತೇನೆ.

ಎಸಿಬಿಯ ಹಾಲಿ ಎಡಿಜಿಪಿ ಬಂದ ನಂತರ ಎಷ್ಟು ಬಿ ರಿಪೋರ್ಟ್ ಆಗಿದೆ. ಐಎಎಸ್, ಐಪಿಎಸ್ ಲಾಬಿಗೆ ಒಳಗಾಗುತ್ತಿದೆ. ರಾಜ್ಯಕ್ಕೆ ಅವಮಾನವಾಗುತ್ತಿದ್ದರೂ ಕಳಂಕಿತ ಡಿಸಿಯನ್ನು ರಕ್ಷಿಸಲಾಗುತ್ತಿದೆ.

ರಾಜ್ಯದಲ್ಲಿ ಅಧಿಕಾರಿಗಳಿಗೇ ದರ್ಬಾರ್ ನಡೆಸಲು ಬಿಡಲಾಗಿದೆ. ಆ ಮೂಲಕ ಸರ್ಕಾರವೂ ಅಪರಾಧದ ಭಾಗವಾಗಿರುವಂತಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿತು.

DAKSHINA KANNADA

ಮಂಗಳೂರು: ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿ; ಪೊಲೀಸ್ ಅಧಿಕಾರಿಗಳ ಜೊತೆಯಲ್ಲೇ ಅನುಚಿತ ವರ್ತನೆ

Published

on

ಮಂಗಳೂರು: ನಗರದ ಕಪಿತಾನಿಯೋ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ ಚಲಾಯಿಸಿದ ಬಳಿಕ ಮಾಧ್ಯಮ ಪ್ರತಿನಿಧಿ ಜೊತೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಪೊಲೀಸ್ ಹಾಗೂ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿ ವಾಗ್ವಾದವುಂಟಾದ ಘಟನೆ ನಡೆಯಿತು.

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್. ಆರ್ ಪೂಜಾರಿಯವರು ಮತದಾನ ಮಾಡಿ ಹೊರಬಂದಾಗ ಮಾಧ್ಯಮದವರು ಗೇಟಿನ ಹೊರಭಾಗದಲ್ಲಿ ಅವರ ಹೇಳಿಕೆ ತೆಗೆದುಕೊಳ್ಳುತ್ತಿದ್ದರು. ಆಗ “ಎಷ್ಟು ಹೊತ್ತು ಪ್ರತಿಕ್ರಿಯೆ ಪಡೆಯುವುದು”ಎಂದು ಸಂದೀಪ್ ಎಕ್ಕೂರು ಎಂಬಾತ ಕ್ಯಾತೆ ತೆಗೆದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಸೇರಿದಂತೆ ಇತರ ಪೊಲೀಸರು ಆತನನ್ನು ತಳ್ಳಿಕೊಂಡು ಒಂದಷ್ಟು ದೂರ ಹೋಗಿದ್ದಾರೆ. ಈ ವೇಳೆ ಆತನೊಂದಿಗೆ ಇದ್ದವರು ಸಮಾಧಾನ ಮಾಡಲು ಯತ್ನಿಸಿದರೂ, ಆತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ವಾಗ್ವಾದ ನಡೆಸಿದ್ದಾನೆ. ಆಗ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿ ಕಳಿಸಿದ್ದಾರೆ.

ಪೊಲೀಸರು ಅಲ್ಲಿಂದ ಹಿಂದಿರುಗಿದ ಬಳಿಕ ತಂಡದಲ್ಲಿದ್ದ ಮತ್ತೊಬ್ಬ ಘಟನೆಯ ದೃಶ್ಯ ಚಿತ್ರೀಕರಿಸುತ್ತಿದ್ದ ಮಾಧ್ಯಮ ವರದಿಗಾರರ ಮೇಲೆ ಹರಿಹಾಯ್ದಿದ್ದಾನೆ. ಈ ವೇಳೆ ಪತ್ರಕರ್ತರೊಂದಿಗೂ ತಂಡದಿಂದ ವಾಗ್ವಾದ ನಡೆದಿದೆ. ಈ ವೇಳೆ ಸ್ಥಳದಲ್ಲಿ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ ವೇಳೆ ಆತನ ಮೇಲೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುತ್ತೇನೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಯಿತು.

Continue Reading

DAKSHINA KANNADA

ಪತ್ನಿ ಮಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಪದ್ಮರಾಜ್ ಪೂಜಾರಿ

Published

on

ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಮಂಗಳೂರಿನಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ಮಂಗಳೂರಿನ ಕಪಿತಾನಿಯೋ ಶಾಲೆಯ ಮತಗಟ್ಟೆಗೆ ತನ್ನ ಪತ್ನಿ ಹಾಗೂ ಮಗಳ ಜೊತೆ ಆಗಮಿಸಿ ಮತ ಚಲಾಯಿಸಿದ್ದಾರೆ.

ಮುಂಜಾನೆ ಏಳುಗಂಟೆಗೆ ಮತಗಟ್ಟೆಗೆ ಆಗಮಿಸಿದ ಪದ್ಮರಾಜ್ ಅವರು ಬರುವ ವೇಳೆಗೆ ಜನರು ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದರು. ಹೀಗಾಗಿ ಪದ್ಮರಾಜ್ ಹಾಗೂ ಅವರ ಪತ್ನಿ ಮತ್ತು ಮಗಳು ಸರತಿ ಸಾಲಿನಲ್ಲಿ ನಿಂತೇ ಮತ ಚಲಾಯಿಸಿದ್ದಾರೆ. ಪದ್ಮರಾಜ್ ಆಗಮಿಸುವ ವೇಳೆ ಅವರ ಸಾಕಷ್ಟು ಅಭಿಮಾನಿಗಳು ಮತಗಟ್ಟೆಯ  ಹೊರಗೆ ನಿಂತು ಅವರಿಗೆ ಶುಭ ಕೋರಿದ್ದಾರೆ.

 

ಮತದಾನ ಮಾಡಿದ ಪದ್ಮರಾಜ್ ಬಳಿಕ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ವೀಕ್ಷಣೆಗೆ ತೆರಳಿದ್ದಾರೆ.

Continue Reading

DAKSHINA KANNADA

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ

Published

on

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮೊದಲನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದಲೇ ಆರಂಭಗೊಂಡಿದೆ.

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇದಾಗಿದ್ದು, ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನವಾಗಿದೆ. ಮತದಾರರು ತಮ್ಮ ತಮ್ಮ ಮತ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ಮತದಾನ ಮಾಡುತ್ತಿದ್ದಾರೆ.

ಅದರಂತೆ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ತುಮಕೂರು, ಕೋಲಾರ, ಹಾಸನ, ಉಡುಪಿ-ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಬೆಳಿಗ್ಗೆಯಿಂದಲೇ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.

Continue Reading

LATEST NEWS

Trending