ಹಾಸನ: ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿಕೊಂಡು ಲೋಕ ಅದಾಲತ್‌ನಲ್ಲಿ ಭಾಗವಹಿಸಿ ರಾಜೀ ಮೂಲಕ ಹೊರಗೆ ಬಂದ ಗಂಡ ಪತ್ನಿಯ ಕತ್ತು ಕೊಯ್ದು, ಮಗುವನ್ನು ಹತ್ಯೆಗೆ ಯತ್ನಿಸಿದ ಭಯಾನಕ ಘಟನೆ ಹೊಳೆನರಸೀಪುರದ ಕೋರ್ಟ್ ಆವರಣದಲ್ಲಿ ನಡೆದಿದೆ.
ಗಂಭೀರ ಗಾಯಗೊಂಡಿದ್ದ ಪತ್ನಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕಿನ ತಟ್ಟೇಕೆರೆ ಗ್ರಾಮದ ಶಿವಕುಮಾರ ಎಂಬಾತ ಚೈತ್ರಾ ಎಂಬ ಯುವತಿಯನ್ನು 6 ವರ್ಷಗಳ ಹಿಂದೆ ಮದುವೆಯಾಗಿದ್ದನು.
ಇವರಿಗೆ 2 ಹಾಗೂ 5 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 3 ವರ್ಷಗಳಿಂದ ಗಂಡ– ಹೆಂಡತಿಯ ನಡುವೆ ಜಗಳ ನಡೆದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿತ್ತು.
ಗಂಡ ಶಿವಕುಮಾರ ಹೆಂಡತಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಕಾರಣ ಚೈತ್ರಾ ಮಕ್ಕಳನ್ನು ತಾಯಿ ಮನೆಯಲ್ಲಿ ಬಿಟ್ಟು ಬೆಂಗಳೂರಿನ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು.
ಇಂದು ಲೋಕ್ ಅದಾಲತ್‌ನಲ್ಲಿ ರಾಜಿ ಸಂಧಾನಕ್ಕೆ ಅರ್ಜಿ ತೆಗೆದುಕೊಳ್ಳಲಾಗಿತ್ತು. ನ್ಯಾಯಾಲಯ ಇವರ ವಿಚಾರಣೆ ನಡೆಸಿ, ರಾಜೀ ಪಂಚಾಯಿತಿಯಲ್ಲಿ ಮುಗಿಸುವಂತೆ ಸಲಹೆ ನೀಡಿ ಮುಂದಿನ ದಿನಾಂಕ ನೀಡಿ ವಿಚಾರಣೆಗೆ ಆಗಮಿಸುವಂತೆ ಸೂಚನೆ ನೀಡಿತ್ತು.
ನ್ಯಾಯಾಲಯದಿಂದ ಹೊರಬಂದ ಚೈತ್ರಾ ತನ್ನ ಮಗಳೊಂದಿಗೆ ಶೌಚಾಲಯಕ್ಕೆ ಹೋದಾಗ ಹಿಂದಿನಿಂದ ಹೋದ ಗಂಡ ಶಿವಕುಮಾರ್ ಪತ್ನಿಯ ಕತ್ತು ಕುಯ್ದಿದ್ದಾನೆ.
ಜೊತೆಗೆ ಜೊತೆಗಿದ್ದ ಮಗುವನ್ನು ಕೊಲ್ಲಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಸೇರಿದ್ದನ್ನು ಕಂಡು ಕತ್ತಿಯ ಮೂಲಕ ಹೆದರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಸದ್ಯ ಆತನನ್ನು ಪೊಲಿಸರು ಬಂಧಿಸಿದ್ದಾರೆ. ಗಂಭೀರ ರಕ್ತಸ್ರಾವದಿಂದ ನರಳುತ್ತಿದ್ದ ಪತ್ನಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾಳೆ.