ಕಾಸರಗೋಡು: ಮಂಜೇಶ್ವರದ ಕುಂಜತ್ತೂರಿನಲ್ಲಿ ಕೇರಳ ಪೊಲೀಸರು ಮತ್ತು ನಾರ್ಕೊಟಿಕ್ ಸೆಲ್ ಜಂಟಿಯಾಗಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಒಟ್ಟು16 ಕೆಜಿ ಗಾಂಜಾ ಸಹಿತ ಮೂವರನ್ನು ಬಂಧಿಸಿದ್ದು, ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 4 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕುಂಜತ್ತೂರು ಜಿ.ಎಚ್.ಎಸ್ ಎಸ್. ಶಾಲಾ ರಸ್ತೆಯ ಯಾಸೀನ್ ಇಮ್ರಾನ್ (33) ಎಂಬಾತನನ್ನು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ಹಾಗೂ ನಾರ್ಕೊಟಿಕ್ ಸೆಲ್ ಡಿವೈಎಸ್ಪಿ ಎಂ.ಎ.ಮ್ಯಾಥ್ಯೂ ನೇತೃತ್ವದ ಪೊಲೀಸ್ ತಂಡ ಭಾಗವಹಿಸಿತ್ತು.
ಇನ್ನೊಂದು ಪ್ರಕರಣದಲ್ಲಿ ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಯಾರಿನಲ್ಲಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 12 ಕಿಲೋ ಗಾಂಜಾವನ್ನು ನಾರ್ಕೋ ಟಿಕ್ ಸೆಲ್ ಸಿಬ್ಬಂದಿ ಹಾಗೂ ಆದೂರು ಪೊಲೀಸರು ಪತ್ತೆ ಹಚ್ಚಿದ್ದು ಇಬ್ಬರನ್ನು ಬಂಧಿಸಿದ್ದಾರೆ.
ಅಜನೂರು ಕೊಡಂಕೋಡು ಮಡಗರ ನಿವಾಸಿ ಅಹ್ಮದ್ ಕಬೀರ್ (32) ಹಾಗೂ ಅಬ್ದುಲ್ ರಹಮಾನ್ ಸಫ್ವಾನ್ (23) ಬಂಧಿತ ಆರೋಪಿಗಳಾಗಿದ್ದಾರೆ.