Connect with us

    ಚಾರಿಟಿಯಿಂದ ಚಾರ್ಟಡ್ ಫ್ಲೈಟ್ ವರೆಗೆ… ಅನಿವಾಸಿ ಕನ್ನಡಿಗರು ಹಕ್ಕೊತ್ತಾಯ ಧ್ವನಿ ಆಗುವುದು ಯಾವಾಗ.??

    Published

    on

    ಚಾರಿಟಿಯಿಂದ ಚಾರ್ಟಡ್ ಫ್ಲೈಟ್ ವರೆಗೆ… ಅನಿವಾಸಿ ಕನ್ನಡಿಗರು ಹಕ್ಕೊತ್ತಾಯ ಧ್ವನಿ ಆಗುವುದು ಯಾವಾಗ.??

    ಒಮಾನ್: ಅನಿವಾಸಿ ಕನ್ನಡಿಗರು ಚಾರಿಟಿಯಲ್ಲಿ ಎತ್ತಿದ ಕೈ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

    ಊರಿನ ಸಭೆ ಸಮಾರಂಭ, ಭಜನೆ, ಪೂಜೆ ಪುನಸ್ಕಾರ, ಕ್ರಿಕೆಟ್ ಪಂದ್ಯಾವಳಿಗಳಿಂದ ಹಿಡಿದು ಬೃಹತ್ ವಿದ್ಯಾಸಂಸ್ಥೆ, ಆಸ್ಪತ್ರೆಗಳವರೆಗೂ ಅನಿವಾಸಿ ಕನ್ನಡಿಗರ ಬೆವರ ಹನಿ ತೊಟ್ಟಿಕ್ಕಿರುತ್ತದೆ.

    ಅನಿವಾಸಿ ಕನ್ನಡಿಗರು ತಮ್ಮ ಮನೆ, ಕುಟುಂಬದ ಜವಾಬ್ಧಾರಿಯೊಂದಿಗೆ ತನ್ನ ಊರು, ದೇಶದ ಬಗ್ಗೆಯೂ ಕಾಳಜಿಯನ್ನು ಸದಾ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

    ಪ್ರತಿಯೊಂದಕ್ಕೂ ಸರಕಾರವನ್ನೇ ಕಾದು ಕುಳಿತುಕೊಳ್ಳುವಷ್ಟು ತಾಳ್ಮೆ, ಪುರುಸೊತ್ತು ಇಲ್ಲದ “ಸುರ ಸುರ” ಪ್ರವೃತ್ತಿ ಅನಿವಾಸಿ ಕನ್ನಡಿಗರಲ್ಲಿ ಬೆಳೆದುಬಿಟ್ಟಿದೆ ಎಂಬುದಂತೂ ಸತ್ಯ.

    “ಸುರಸುರ” ಎಂದರೆ ಪಟಕ್ಕನೆ ಮುಗಿಸಿಬಿಡುವ ಅರಬಿಗಳ ಶೈಲಿ.

    ಇಂದು ನಾಡಿನ ವಿವಿಧ ಧರ್ಮೀಯರ ಬಹುತೇಕ ಸಂಘಟನೆಗಳು, ಸಾಮಾಜಿಕ ಸಂಸ್ಥೆಗಳು ಯಾವುದೇ ಯೋಜನೆಗಳ ಆರ್ಥಿಕ ಮೂಲಕ್ಕೆ ದಿಟ್ಟಿಸಿ ನೋಡುವುದು ಅರಬಿ ಸಮುದ್ರದ ಆಚೆಗೆ ಇರುವ ಅನಿವಾಸಿ ಕನ್ನಡಿಗರನ್ನು.

    ಸರಕಾರ ಕೈ ಬಿಟ್ಟಾಗಲೆಲ್ಲಾ ಅನಿವಾಸಿ ಕನ್ನಡಿಗರು ಖುದ್ದು ತನ್ನ ಶಕ್ತಿಯಿಂದ ಎದ್ದು ನಿಂತು ಸ್ವಾಭಿಮಾನದಿಂದ ತಲೆ ಎತ್ತಿ ನಿಂತ ಹಲವು ವಿಚಾರಗಳನ್ನು ನಾವು ಕಾಣುತ್ತಲೇ ಬರುತ್ತಿದ್ದೇವೆ.

    ಅದಕ್ಕೊಂದು ಹೊಸ ಸೇರ್ಪಡೆಯಾಗಿದೆ ದಮಾಮ್ ನಿಂದ ಹೊರಟ ಚಾರ್ಟೆಡ್ ಫ್ಲೈಟ್!…

    ಹೌದು… ಕೋವಿಡ್ -19 ಸಂದಿಗ್ಧ ಪರಿಸ್ಥಿತಿಯಿಂದಾಗಿ ವಲಸೆ ಕಾರ್ಮಿಕರಂತೆ ಅತಿ ಹೆಚ್ಚು ಅತಂತ್ರ ಸ್ಥಿತಿಗೆ ತಳ್ಳಲ್ಪಟ್ಟವರು ಅನಿವಾಸಿ ಭಾರತೀಯರು.

    ಅದರಲ್ಲೂ ಅತಿಹೆಚ್ಚು ಅನಿವಾಸಿ ಕನ್ನಡಿಗರು ನೆಲೆಸಿರುವ ಸೌದಿಅರೇಬಿಯದಿಂದ ಕನ್ನಡಿಗರನ್ನು ಸ್ವದೇಶಕ್ಕೆ ಕರೆತರಲು ವಂದೇ ಭಾರತ್ ಮಿಶನ್ ನಡಿ ಒಂದೇ ಒಂದು ಫ್ಲೈಟ್ ಕರ್ನಾಟಕದ ಕರಾವಳಿಯ ಮಂಗಳೂರಿಗೆ ಇಲ್ಲ.

    ಸೌದಿ ಅರೇಬಿಯದ ಪ್ರಮುಖ ಕೈಗಾರಿಕಾ ವಲಯವಾಗಿರುವ ಜುಬೈಲ್ ತಥಾಕಥಿತ ಬೈಕಂಪಾಡಿ ಕೈಗಾರಿಕಾ ವಲಯದಂತಾಗಿದೆ.

    ಅತಿಹೆಚ್ಚು ಮ್ಯಾನ್ ಪವರ್ ಕಂಪೆನಿಗಳು, ಇಕ್ಯೂಮೆಂಟ್ ಸರಬರಾಜು ಸಂಸ್ಥೆಗಳ ಮಾಲಕರು, ಅತಿಹೆಚ್ಚು ಕಾರ್ಮಿಕರು ಮಂಗಳೂರು ಮೂಲದವರು.

    ಹೀಗಾಗಿ ಸೌದಿಅರೇಬಿಯದ ದಮಾಮ್ ನಿಂದ ಮಾತ್ರವೇ ಮಂಗಳೂರಿಗೆ ಇದುವರೆಗೆ ನೇರ ವಿಮಾನ ಸೌಲಭ್ಯ ಇತ್ತು.

    ಜಾಗತಿಕ ಲಾಕ್ ಡೌನ್ ನಿಂದಾಗಿ ತತ್ತರಿಸಿದ ಸೌದಿಅರೇಬಿಯದ ಕನ್ನಡಿಗರು ಒಂದು ವಿಮಾನ ಸೌಲಭ್ಯಕ್ಕಾಗಿ,

    ಕಳೆದೆರಡು ತಿಂಗಳಿನಿಂದ ಕೇಂದ್ರದಿಂದ ರಾಜ್ಯದವರೆಗಿನ ಎಲ್ಲ ರಾಜಕೀಯ ಮುಖಂಡರ, ಅಧಿಕಾರಿಗಳ ದುಂಬಾಲು ಬಿದ್ದಿದ್ದಾರೆ.

    ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ, ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್,  ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಸಿದ್ಧರಾಮಯ್ಯ, ಡಾ. ಆರತಿ ಕೃಷ್ಣ…

    ಹೀಗೆ ಎಲ್ಲರೊಂದಿಗೂ ವೆಬಿನಾರ್ (ವೀಡಿಯೋ ಕಾನ್ಫರೆನ್ಸ್) ಮಾತುಕತೆ ನಡೆಸಿ ತಮ್ಮ ಅಹವಾಲು ತೋಡಿಕೊಂಡಿದ್ದರು.

    180 ಸೀಟುಗಳಿರುವ ವಿಮಾನಕ್ಕೆ 2500 ಅರ್ಜಿಗಳು ಮೊದಲ ತಿಂಗಳಲ್ಲೇ ಭಾರತ ರಾಯಭಾರ ಕಚೇರಿಗೆ ಸಲ್ಲಿಕೆಯಾಗಿದ್ದವು.

    ಸತತ ಎರಡು ತಿಂಗಳಲ್ಲಿ ಅನಿವಾಸಿ ಕನ್ನಡಿಗರು ನಡೆಸಿದ ಪರಿಶ್ರಮಕ್ಕೆ ಕವಡೆಕಾಸಿನ ಬೆಲೆ ಸಿಗದಿದ್ದಾಗ,

    ಮತ್ತೆ ಅನಿವಾಸಿ ಕನ್ನಡಿಗ ಮುಖಂಡರು ಅರ್ಥಾತ್ ಜುಬೈಲ್ ನಲ್ಲಿರುವ  ಕರಾವಳಿಯ ಉದ್ಯಮಿಗಳು ಚಾರ್ಟೆಡ್ ಫ್ಲೈಟ್ ಆಯೋಜಿಸಿದರು.

    ಭಾರತದ ವಿದೇಶಿ ವಿನಿಮಯದಲ್ಲಿ ದೊಡ್ಡ ಕೊಡುಗೆಯನ್ನು ಸಲ್ಲಿಸುತ್ತಿರುವ ಅನಿವಾಸಿ ಕನ್ನಡಿಗರು ಈ ರೀತಿ ಸೋಲೊಪ್ಪಿಕೊಳ್ಳಬಾರದಿತ್ತು.

    ಕೆಲಸದಿಂದ ಟರ್ಮಿನೇಟ್ ಮಾಡಲಾಗಿರುವ ತನ್ನ ಕಂಪೆನಿಯ ಉದ್ಯೋಗಿಗಳನ್ನು ಶೀಘ್ರವೇ ಊರಿಗೆ ಕಳುಹಿಸಿಕೊಡುವ ಅನಿವಾರ್ಯತೆಯೂ ಚಾರ್ಟೇಡ್ ವಿಮಾನದ ಜರೂರತ್ತು ಕೂಡ ಹೌದು.

    ಇಲ್ಲಿ ಸರಕಾರವು ನಿರ್ವಹಿಸಬೇಕಾದ ಕಡ್ಡಾಯ ಜವಾಬ್ಧಾರಿ ಮತ್ತು ಕಡ್ಡಾಯವಾಗಿ ವ್ಯಹಿಸಬೇಕಾದ ಖರ್ಚನ್ನು ಅನಿವಾಸಿ ಕನ್ನಡಿಗ ಸಮುದಾಯ ತನ್ನ ಮೇಲೆ ಹೇರಿಕೊಳ್ಳುವುದು ಭವಿಷ್ಯಕ್ಕೆ ಮಾರಕ.

    ಇನ್ನು ವಂದೇ ಭಾರತ್ ಮಿಷನ್ ನಡಿ ಹಾರಾಡುವ ವಿಮಾನದ ಟಿಕೇಟು, ಕ್ವಾರಂಟೈನ್ ವೆಚ್ಚ, ವೈದ್ಯಕೀಯ ವೆಚ್ಚ, ಊಟೋಪಚಾರದ ವೆಚ್ಚ…

    ಹೀಗೆ ಎಲ್ಲವನ್ನೂ ಸ್ವತಹ ಪ್ರಯಾಣಿಕನೇ ಭರಿಸುತ್ತಿರುವಾಗ ಸರಕಾರ ನೀಡುತ್ತಿರುವ ಸಹಾಯವಾದರೂ ಏನು? ಎಂಬ ಪ್ರಶ್ನೆ ಕಾಡುತ್ತಿರುವ ಹೊತ್ತಿಗೆ ಈಗ ವಿಮಾನವೇ ಕಾಣೆಯಾಗಿದೆ.

    ಅಂದರೆ ಕೇರಳಕ್ಕೆ 37 ವಿಮಾನ ಸೌಲಭ್ಯ ಇರುವಾಗ ನಮ್ಮ ಮಂಗಳೂರಿಗೆ ಸೌದಿಅರೇಬಿಯದಿಂದ ಒಂದೇ ಒಂದು ವಿಮಾನ ಇಲ್ಲ ಎಂದರೆ ಏನರ್ಥ?

    ಕೆಲವೊಂದು ಹೆಚ್ಚುವರಿ ಹೊರೆಗಳನ್ನು ಅನಿವಾಸಿ ಕನ್ನಡಿಗರು ತಮಗೆ ಗೊತ್ತಿಲ್ಲದೆಯೇ ತಮ್ಮ ಮೇಲೆ ಹೇರಿಕೊಳ್ಳುತ್ತಿದ್ದಾರೆ ಎಂಬುದರ ನಿದರ್ಶನವಾಗಿದೆ ನಿನ್ನೆ ಮಂಗಳೂರು ತಲುಪಿರುವ ವೈಯಕ್ತಿಕ ವೆಚ್ಚದ ಚಾರ್ಟೆಡ್ ಫ್ಲೈಟ್.

    ವಾಸ್ತವದಲ್ಲಿ ನಾವು ಸರಕಾರದಿಂದ ನಮ್ಮ ಹಕ್ಕುಗಳನ್ನು ಪಡೆಯಲು ಕಲಿತುಕೊಳ್ಳಬೇಕು.

    2018ರಲ್ಲಿ ಭಾರತವು ವಿಶ್ವದಾಖಲೆಯ 6.3 ಲಕ್ಷ ಕೋಟಿ ರೂಪಾಯಿ ವಿದೇಶಿ ವಿನಿಮಯ ಗಳಿಸಿತ್ತು.

    ಅದರಲ್ಲಿ ಸೌದಿಅರೇಬಿಯದ ಪಾಲು ಶೇ. 27!  ಸರಕಾರದ ಬಳಿ ಇರುವುದು ನಮ್ಮ ಹಣ ಮತ್ತು ಅದನ್ನು ಅಧಿಕಾರಯುತವಾಗಿ ಕೇಳಿ ಪಡೆಯಬೇಕೇ ಹೊರತು ಭಿಕ್ಷೆ ಬೇಡುವ ರೀತಿಯಲ್ಲಿ ಅಲ್ಲ.

    ಚಾರ್ಟೇಡ್ ಫ್ಲೈಟ್ ಸೌಲಭ್ಯ ಕಲ್ಪಿಸಿದವರನ್ನು ಗುಟ್ಟಾಗಿ ಅಭಿನಂದಿಸಿದರಷ್ಟೇ ಚೆನ್ನ.

    ಅದನ್ನು ಸಾಧನೆ ಎಂದುಕೊಂಡು ವೈಭವೀಕರಿಸಿದಷ್ಟು ಅದೆಷ್ಟೋ ಬಡಪಾಯಿ ಅನಿವಾಸಿ ಕನ್ನಡಿಗರು ಅವಕಾಶದಿಂದ ವಂಚಿತರಾಗುವರು.

    ಒಂದೆರಡು ಚಾರ್ಟೆಡ್ ಫ್ಲೈಟ್ ಎರಡೂವರೆ ಸಾವಿರದಷ್ಟು ಅನಿವಾಸಿ ಕನ್ನಡಿಗರ ಸಮಸ್ಯೆ ಬಗೆಹರಿಸದು.

    ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಆಗುವ ಸಾಧ್ಯತೆಗಳೇ ಜಾಸ್ತಿ. ಒಂದು ಕಂಪೆನಿಯ ಮಾಲಕ ಮಾಡಿದ್ದನ್ನೇ ಅನುಕರಿಸುವ ಸಂಪ್ರದಾಯವೂ ಇದೆ.

    ಸೌದಿಅರೇಬಿಯದ ಮಹಾಧಣಿಗಳು ತಮ್ಮ ಪ್ರಭಾವ ತೋರ್ಪಡಿಸಬೇಕಾಗಿರುವುದು ಸರಕಾರದಿಂದಲೇ ವಿಮಾನ ಸೌಲಭ್ಯವನ್ನು ಕಲ್ಪಿಸುವಂತೆ ಮಾಡುವ ಮೂಲಕವೇ ಹೊರತು ತನ್ನ ಜೇಬಿನಿಂದ ವಿಮಾನ ತರಿಸಿ ಅಲ್ಲ.

    ಅನಿವಾಸಿ ಕನ್ನಡಿಗ ಧಣಿಗಳು ಹಕ್ಕೊತ್ತಾಯದ ಧ್ವನಿಗಳಾಗುವತ್ತ ಚಿಂತಿಸಲಿ… ಮುನ್ನಡೆಯಲಿ.

    ಯಾಕೆಂದರೆ ಅನಿವಾಸಿ ಭಾರತೀಯರ ಅದರಲ್ಲೂ ಕನ್ನಡಿಗರ ಸಮಸ್ಯೆ ಕೇವಲ ಕೊರೋನ ಕಾಲಘಟ್ಟಕ್ಕೆ ಮಾತ್ರ ಸೀಮಿತವಾದದ್ದಲ್ಲ ಎಂಬುದು ತಿಳಿದಿರಲಿ.

    ಅನಿವಾಸಿ ಕನ್ನಡಿಗರ ಬದುಕು ಭವಿಷ್ಯದ ಸವಾಲು?!

    ಇದು ಅನಿವಾಸಿ ಕನ್ನಡಿಗರ ಬದುಕು ಭವಿಷ್ಯದ ಪ್ರಶ್ನೆಯಾಗಿದೆ. ವಿಶೇಷ ವಿಮಾನದಲ್ಲಿ ಬಂದಿಳಿಯುವವರಲ್ಲಿ ಬಹುತೇಕ ಪ್ರಯಾಣಿಕರು ಉದ್ಯೋಗ ಕಳೆದುಕೊಂಡವರು.

    ಕೊರೋನ ಸೋಂಕಿತರ ಸಂಖ್ಯೆಯಂತೆ ಉದ್ಯೋಗ ಕಳೆದುಕೊಂಡ ಅನಿವಾಸಿ ಕನ್ನಡಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ.

    ಅತ್ತ ತವರಿನಲ್ಲಿಯೂ ನಿರುದ್ಯೋಗಿಗಳ ಸಂಖ್ಯೆ ಈಗಾಗಲೇ ಬೆಳೆದುಬಿಟ್ಟಿದೆ.

    ಇಂತಹ ಸಂದರ್ಭದಲ್ಲಿ ಈಗ ಸರಕಾರವು ಅನಿವಾಸಿ ಕನ್ನಡಿಗರ ಪುನರುಜ್ಜೀವನದ ಬಗ್ಗೆ ಏನಾದರೂ ಯೋಜನೆ ಹಾಕಿಕೊಂಡಿದೆಯೇ?  ಖಂಡಿತವಾಗಿಯೂ ಇಲ್ಲ.

    ಹೀಗಾಗಿ ಅದನ್ನು ಸರಕಾರದ ಗಮನಕ್ಕೆ ತರುವ ಪ್ರಯತ್ನಗಳ ಬಗ್ಗೆಯೂ ಅನಿವಾಸಿ ಕನ್ನಡಿಗರ ಸಂಘಟನೆಗಳು ಒಂದಾಗಿ ಚಿಂತಿಸಬೇಕಾಗಿದೆ.

    ಕೇರಳದಲ್ಲಿ ನೋರ್ಕಾ ಎಂಬ ಸರಕಾರಿ ಇಲಾಖೆಯೇ ಇದೆ. ಅನಿವಾಸಿ ಕೇರಳಿಗರ ಸಂಪೂರ್ಣ ಡೇಟಾ ನೋರ್ಕಾದಲ್ಲಿ ಸಂಗ್ರಹವಾಗಿರುತ್ತದೆ.

    ಕೇರಳ ಸರಕಾರದ ಬಳಿ ಅನಿವಾಸಿ ಕೇರಳಿಗರ ಸ್ಥಿತಿಗತಿ, ಬಿಕ್ಕಟ್ಟು, ತವರಿಗೆ ಹಿಂತಿರುಗುತ್ತಿರುವವರ ವಿವರ ಸೇರಿದಂತೆ ಎಲ್ಲವೂ ಒಂದು ಇಲಾಖೆಯಡಿ ಸಂಗ್ರಹಿಸಲ್ಪಟ್ಟಿರುತ್ತವೆ.

    ಇದೇ ವೇಳೆ ಒಟ್ಟು ಅನಿವಾಸಿ ಭಾರತೀಯರ ಪೈಕಿ ಕನ್ನಡಿಗರ ಸಂಖ್ಯೆ ಎಷ್ಟಿದೆ ಎಂಬ ಅಂಕಿ ಅಂಶವೂ ನಮ್ಮ ಸರಕಾರದ ಬಳಿ ಇದೆಯೇ?.

    ಅಂತಹ ಅಂಕಿಅಂಶಗಳು ಇದ್ದರಲ್ಲವೇ ಯಾವುದೇ ಸರಕಾರಕ್ಕೆ ಕಲ್ಯಾಣ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುವುದು?.

    ಇದೇ ಕಾರಣದಿಂದಾಗಿಯೇ ಕಳೆದ ಬಜೆಟ್ ನಲ್ಲಿ ವಿದೇಶದಲ್ಲಿರುವ ಅನಿವಾಸಿ ಕನ್ನಡಿಗರ ವಿಷಯವೇ ಪ್ರಸ್ತಾಪವಾಗದಿರುವುದು.

    ಪ್ರತಿಯೊಂದು ಗಲ್ಫ್ ರಾಜ್ಯಗಳಲ್ಲಿ ಅನಿವಾಸಿ ಕನ್ನಡಿಗರ ವಿವಿಧ ಸಂಘ ಸಂಸ್ಥೆಗಳಿವೆ.

    ಕೋವಿಡ್-19ನ್ನು ಎದುರಿಸುವ ನಿಟ್ಟಿನಲ್ಲಿ ವಿವಿಧ ಸಂಘಸಂಸ್ಥೆಗಳಲ್ಲಿ ಗುರುತಿಸಿಕೊಂಡ ಅನಿವಾಸಿ ಕನ್ನಡಿಗರು ದುಂಡು ಮೇಜಿನ ಎದುರು ಒಂದಾಗಿ ಕುಳಿತುಕೊಳ್ಳುವ ಸಂದರ್ಭ ಸೃಷ್ಟಿಯಾಗಿದೆ.

    ಈ ಒಗ್ಗಟ್ಟು ಅನಿವಾಸಿ ಕನ್ನಡಿಗರ ತಲೆತಲಾಂತರ ಸಮಸ್ಯೆಗಳ ಶಾಶ್ವತ ಪರಿಹಾರದತ್ತವೂ ಮುನ್ನಡೆಯಲಿ.

    ಮರುಭೂಮಿಯ ಜೀವನ ಹಲವು ಅನುಭವದ ಪಾಠವನ್ನು ಕಲಿಸಿಕೊಟ್ಟಿದೆ.

    ವಿಮಾನವನ್ನು ಗಗನದೆತ್ತರಕ್ಕೆ ಹಾರಿಸಿದವರಿಗೆ ಈ ಜವಾಬ್ಧಾರಿಯು ಅದಕ್ಕಿಂತ ದೊಡ್ಡ ಭಾರವೆನಿಸದು.

    ಅನಿವಾಸಿ ಕನ್ನಡಿಗರ ಬದುಕು ಭವಿಷ್ಯದ ಕುರಿತ ಚರ್ಚೆಗೆ ಕೋವಿಡ್-19 ಮುನ್ನುಡಿ ಬರೆಯಲಿ ಎಂದು ಹಾರೈಸೋಣ…

    ಬರಹ: ಫಯಾಝ್ ಎನ್.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಬಸ್‌ ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ..! ಧರ್ಮದೇಟು ತಿಂದ ಮುಸ್ಲಿಂ ಯುವಕ..!

    Published

    on

    ಮಂಗಳೂರು ( ಸುಳ್ಯ ) : ಬೆಂಗಳೂರಿನಿಂದ ಸುಬ್ರಹ್ಮಣ್ಯ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಯುವಕನೊಬ್ಬ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾನೆ. ಈ ವಿಚಾರ ತಿಳಿದ ವಿದ್ಯಾರ್ಥಿನಿಯ ಸಹಪಾಠಿಗಳು ಯುವಕನನ್ನು ಹಿಡಿದು ಹಲ್ಲೆ ನಡೆಸಿದ ಘಟನೆ ಸುಳ್ಯದಲ್ಲಿ ನಡೆದಿದೆ.

    ಸುಬ್ರಹ್ಮಣ್ಯ ಸಮೀಪದ ಬಿಸಲೆ ಘಾಟ್‌ ಬಳಿ ವಿದ್ಯಾರ್ಥಿನಿ ಬೆಂಗಳೂರಿನಿಂದ ಬಂದಿದ್ದ ಬಸ್ ಹತ್ತಿದ್ದಳು. ಈ ವೇಳೆ ಯುವಕೊನೊಬ್ಬ ಕುಳಿತಿದ್ದ ಸೀಟ್‌ ಪಕ್ಕದ ಸೀಟ್ ಖಾಲಿ ಇದ್ದ ಕಾರಣ ಆಕೆ ಆತನ ಪಕ್ಕದಲ್ಲೇ ಕುಳಿತಿದ್ದಾಳೆ. ಆದ್ರೆ ವಿದ್ಯಾರ್ಥಿನಿ ಪಕ್ಕದಲ್ಲಿ ಕುಳಿತ ಸ್ವಲ್ಪ ಸಮಯದಲ್ಲೇ ಯುವಕ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದಾನೆ. ಈ ವಿಚಾರವನ್ನು ಬಸ್ ನಿರ್ವಾಹಕನಿಗೆ ತಿಳಿಸಿದಾಗ ನಿರ್ವಾಹಕ ಹಾಗೂ ಬಸ್‌ ಪ್ರಯಾಣಿಕರು ಆರೋಪಿ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ವಿದ್ಯಾರ್ಥಿನಿ ಈ ವಿಚಾರವನ್ನು ಸುಳ್ಯದ ತನ್ನ ಕಾಲೇಜು ಸಹಪಾಠಿಗಳ ಗಮನಕ್ಕೂ ತಂದಿದ್ದಾಳೆ. ಈ ನಡುವೆ ಯುವಕ ಸುಬ್ರಹ್ಮಣ್ಯದಲ್ಲಿ ಬಸ್‌ನಿಂದ ಇಳಿದು ಬೇರೆ ಬಸ್ ಮೂಲಕ ಸುಳ್ಯದತ್ತ ಪ್ರಯಾಣ ಮಾಡಿದ್ದಾನೆ. ಬೆಂಗಳೂರಿನ ಬಸ್‌ನಲ್ಲಿ ಪ್ರಯಾಣಿಸಿ ಸುಳ್ಯ ತಲುಪಿದ್ದ ವಿದ್ಯಾರ್ಥಿನಿ ಈ ವಿಚಾರವನ್ನು ತನ್ನ ಸಹಪಾಠಿಗಳಿಗೆ ತಿಳಿಸಿದ್ದಾಳೆ. ತಕ್ಷಣ ಸುಳ್ಯದ ಪೈಚಾರು ಎಂಬಲ್ಲಿಗೆ ಕಾರಿನಲ್ಲಿ ತೆರಳಿದ ವಿದ್ಯಾರ್ಥಿಗಳು ಅಲ್ಲಿ ಯುವಕ ಪ್ರಯಾಣಿಸುತ್ತಿದ್ದ ಬಸ್‌ನಿಂದ ಆತನನ್ನು ಇಳಿಸಿದ್ದಾರೆ. ಬಳಿಕ ಆತನನ್ನು ಕಾರಿನಲ್ಲಿ ಸುಳ್ಯ ಬಸ್ ನಿಲ್ದಾಣಕ್ಕೆ ಕರೆತಂದು ಬಸ್ ನಿಲ್ದಾಣದಲ್ಲಿ ಹಿಗ್ಗಾ ಮುಗ್ಗ ಥಳಿಸಿದ್ದಾರೆ.

    ವಿದ್ಯಾರ್ಥಿಗೆ ಕಿರುಕುಳ ನೀಡಿದ ಯುವಕ ಕೇರಳ ಮೂಲದವನಾಗಿದ್ದು, ಆತನ ಹೆಸರು ನಿಯಾಜ್‌ ಎಂದು ಗೊತ್ತಾಗಿದೆ. ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿಗಳಿಂದ ಹಲ್ಲೆಗೊಳಗಾದ ನಿಯಾಜ್‌ನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಕೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ.

    Continue Reading

    BIG BOSS

    Bigg Boss Kannada 11: ದೊಡ್ಮನೆಯಲ್ಲಿ ಸ್ವರ್ಗ, ನರಕ ಎನ್ನುವ ಎರಡು ಥೀಮ್

    Published

    on

    ‘ಬಿಗ್ ಬಾಸ್ ಕನ್ನಡ 11’ಕ್ಕೆ ಕೌಂಟ್ ಡೌನ್ ಶುರುವಾಗಿದೆ. ದೊಡ್ಮನೆ 2ನೇ ಪ್ರೋಮೋ ರಿಲೀಸ್ ಆಗಿ ಮೆಚ್ಚುಗೆ ಗಳಿಸಿತ್ತು. ಈ ಬಾರಿ ಬಿಗ್ ಬಾಸ್‌ನಲ್ಲಿ ಸ್ವರ್ಗ ಮತ್ತು ನರಕ ಎಂದು ಥೀಮ್ ಇರಲಿದೆ ಎಂದು ಸುದೀಪ್‌ ಇಂಟರೆಸ್ಟಿಂಗ್ ಮಾಹಿತಿ  ತಿಳಿಸಿದ್ದಾರೆ.

    ನಾವು ಮಾಡಿ ಕಳುಹಿಸಲಿಲ್ಲ ಅಂದರೆ ಒಳಗೆ ಹೋಗಿರುವ ಸ್ಪರ್ಧಿಗಳೇ ಟೀಮ್ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡುವಾಗಲೇ 2 ತಂಡ ಮಾಡುವುದೇ ಈ ಸೀಸನ್‌ನ ಸ್ಪೆಷಾಲಿಟಿ ಎಂದು ಸುದೀಪ್ ತಿಳಿಸಿದರು.

    ಕಳೆದ ಬಾರಿ ಬಿಗ್ ಬಾಸ್ ಸೀಸನ್ 10 ಪ್ರಾರಂಭವಾದ ವೇಳೆ, ಸ್ಪರ್ಧಿಗಳಿಗೆ ಸಮರ್ಥರು ಮತ್ತು ಅಸಮರ್ಥರು ಎಂದು ಪರಿಗಣಿಸಿ ತಂಡಗಳಾಗಿ ವಿಂಗಡಿಸಿದ್ದರು. ಅದರಂತೆಯೇ ಈ ಬಾರಿಯು ಕೂಡ ಹೊಸ ರೀತಿಯಲ್ಲಿ ಸ್ವರ್ಗ ಮತ್ತು ನರಕ ಎಂದು ಎರಡು ತಂಡ ಮಾಡಿ ಸ್ಪರ್ಧಿಗಳನ್ನು ಕಳುಹಿಸಲಾಗುತ್ತದೆ.

    ಸುದೀಪ್ ನಿರೂಪಣೆಯಲ್ಲಿ ಇದೇ ಸೆ.29ಕ್ಕೆ ಬಿಗ್ ಬಾಸ್ ಗ್ರ್ಯಾಂಡ್ ಆಗಿ ಲಾಂಚ್ ಆಗುತ್ತಿದೆ. ಪ್ರತಿದಿನ ರಾತ್ರಿ 9:30ಕ್ಕೆ ಶೋ ಪ್ರಸಾರವಾಗಲಿದೆ.

    Continue Reading

    BANTWAL

    ವಗ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಬಸ್; ಹಲವರಿಗೆ ಗಾಯ

    Published

    on

    ಬಂಟ್ವಾಳ ತಾಲೂಕಿನ ವಗ್ಗದ ಸಮೀಪ ಕೊಪ್ಪಳ ಎಂಬಲ್ಲಿ ಸರ್ಕಾರಿ ಬಸ್‌ ಉರುಳಿ ಬಿದ್ದಿದ್ದು, ಹಲವರು ಗಾಯಗೊಂಡಿದ್ದಾರೆ.

    ಧರ್ಮಸ್ಥಳ ಮಂಗಳೂರು ನಡುವೆ ಸಂಚರಿಸುವ ಸರ್ಕಾರಿ ಬಸ್ ಇದಾಗಿದ್ದು, ಕೊಪ್ಪಳ ಎಂಬಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ರಸ್ತೆಯ ಪಕ್ಕದ ಗುಂಡಿಗೆ ಬಸ್ ಉರುಳಿ ಬಿದ್ದಿದ್ದು ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿದೆ. ತಕ್ಷಣ ಸ್ಥಳೀಯ ಯುವಕರು ಸೇರಿ ಬಸ್‌ ಒಳಗಿದ್ದ ಪ್ರಯಾಣಿಕರನ್ನು ಬಸ್‌ ನಿಂದ ಹೊರ ತೆಗೆದಿದ್ದಾರೆ.

    ಗಾಯಾಳುಗಳನ್ನು ಖಾಸಗಿ ವಾಹನಗಳ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. ಬಸ್ ಬರುತ್ತಿರುವ ವೇಳೆ ಬೈಕ್‌ ಒಂದು ಅಡ್ಡ ಬಂದಿದ್ದು ಈ ವೇಳೆ ಬಸ್ ನಿಯಂತ್ರಿಸುವ ವೇಳೆ ರಸ್ತೆಯಿಂದ ಪಕ್ಕಕ್ಕೆ ಉರುಳಿದೆ ಎಂದು ಬಸ್ ಚಾಲಕ ಮಾಹಿತಿ ನೀಡಿದ್ದಾರೆ . ಆದರೆ ಸ್ಥಳಿಯರು ಇದನ್ನು ನಿರಾಕರಿಸಿದ್ದು ಬಸ್ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ.

    ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿದ್ದು, ಮಾಹಿತಿ ಪಡೆದುಕೊಂಡು ಘಟನೆಗೆ ಕಾರಣ ಏನು ಎಂಬ ಬಗ್ಗೆ ವಿಚಾರಣೆ ಮುಂದುವರೆಸಿದ್ದಾರೆ.

    Continue Reading

    LATEST NEWS

    Trending