ಫೇಸ್ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿ:20ಲಕ್ಷರೂ.ಗೂ ಅಧಿಕ ದುಡ್ಡು ಎಗರಿಸಿ ವಂಚಿಸಿದ ನಕಲಿ ಅಂಚೆ ಅಧಿಕಾರಿ..!
ಚಿತ್ರದುರ್ಗ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಮದುವೆ ಪ್ರಸ್ತಾಪ, ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿ
ಮೂಲತಃ ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಕುರುಬನಹಳ್ಳಿ ನಿವಾಸಿ ಪರಮೇಶ್ವರ ಆಲಿಯಾಸ್ ಪರಂ (೨೩)ನನ್ನು ಮಂಗಳೂರು ಪೊಲೀಸರು ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಬಳಿ ಬಂಧಿಸಿದ್ದಾರೆ.
ಮ್ಯಾಟ್ರಿಮೋನಿಯಲ್ಲ್ಲಿ ಆರೋಪಿ ತಾನು ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ಎಂಬುದಾಗಿ ಬಿಂಬಿಸಿದ್ದ. ಬಳಿಕ ಗೋವಾದ ನಿವಾಸಿ ಹನುಮಪ್ಪ ಬಿಸಳ್ಳಿ ಎಂಬವರ ಪುತ್ರಿಗೆ ವಾಟ್ಸಾಪ್‌ನಲ್ಲಿ ಅಂಚೆ ಇಲಾಖೆಗೆ ಸಂಬಂಧಿಸಿದಂತೆ ತನಗೆ ರಾಜ್ಯೋತ್ಸವ ಮತ್ತು ಮೇಘದೂತ ಪ್ರಶಸ್ತಿ ಬಂದಿರುವ ದೃಶ್ಯಾವಳಿಗಳನ್ನು ಕಳುಹಿಸಿದ್ದ.
ತನ್ನ ಮಗಳಿಗೆ ನೆಂಟಸ್ಥಿಕೆ ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯ ಬಗ್ಗೆ ಹನುಮಪ್ಪ ಮಂಗಳೂರಿನ ಅಂಚೆ ಇಲಾಖೆಯಲ್ಲಿ ವಿಚಾರಿಸಿದಾಗ ಆತ ವಂಚಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಬಳಿಕ ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಹರ್ಷ ಡಿಸೆಂಬರ್ ೨ರಂದು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಡಿಸೆಂಬರ್ ೨೦ರಂದು ಆರೋಪಿಯು ಮಂಗಳೂರು ನಗರದ ಸಶಸ್ತ್ರ ಮೀಸಲು ಪಡೆಯ ಇಬ್ಬರು ಸಿಬ್ಬಂದಿಗೆ ಅಂಚೆ ಇಲಾಖೆಯಲ್ಲಿನ ಗ್ರೇಡ್-೧, ಗ್ರೇಡ್-೨ ಹುದ್ದೆ ಖಾಲಿ ಇರುವುದಾಗಿ ತಿಳಿಸಿದ್ದ.
ಈ ಸಿಬ್ಬಂದಿಗೆ ಈತ ಪೂಜಾ ಸಿಎನ್ ಎಂಬ ನಕಲಿ ಫೇಸ್ಬುಕ್ ಖಾತೆ ಮೂಲಕ ಪರಿಚಯವಾಗಿದ್ದ. ಬಳಿಕ ಮೆಸೆಂಜರ್, ವಾಟ್ಸಾಪ್‌ನಲ್ಲಿ ಚಾಟ್ ಮಾಡಿ ಇಬ್ಬರಿಂದಲೂ ಆರು ಲಕ್ಷ ರೂಪಾಯಿ ನಗದು ಪಡೆದು ವಂಚಿಸಿದ್ದ.
ಎರಡೂ ಪ್ರಕರಣಗಳನ್ನು ತನಿಖೆ ನಡೆಸಿ ಈತನನ್ನು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇದುವರೆಗೆ ಫೇಸ್ಬುಕ್‌ನಲ್ಲಿ ಸುಮಾರು ೨೦ ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾನೆ.
ಬೇರೆ ಬೇರೆ ಹೆಸರಿನಿಂದ ಖಾತೆ ತೆರೆದಿದ್ದು, ಅಂಚೆ, ಪೊಲೀಸ್, ಅರಣ್ಯ, ಕೆಪಿಟಿಸಿಎಲ್, ಶಿಕ್ಷಣ ಇಲಾಖೆ ಸಹಿತ ಇತರ ಸರಕಾರಿ ಇಲಾಖೆಗಳ ಉತ್ತಮ ದರ್ಜೆಯ ಅಧಿಕಾರಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸಿದ್ದ.
ಅಧಿಕಾರಿಗಳ ಜೊತೆಗಿನ ಫೇಸ್ಬುಕ್ ಸ್ನೇಹವನ್ನು ಪ್ರಭಾವದಂತೆ ದುರ್ಬಳಕೆ ಮಾಡಿಕೊಂಡಿದ್ದಾನೆ. ಈತ ಒಟ್ಟು ೧೩ ಮಂದಿಯನ್ನು ವಂಚಿಸಿದ್ದಾನೆ.
ಸುಮಾರು ೧೫ರಿಂದ ೨೦ ಲಕ್ಷ ರೂಪಾಯಿ ಟೋಪಿ ಹಾಕಿದ್ದಾನೆ. ಸುಮಾರು ೭೫ ಜನರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.