ನಿಸರ್ಗ ಚಂಡಮಾರುತದ ಎಫೆಕ್ಟ್: ಅರಬ್ಬಿ ಸಮುದ್ರದಲ್ಲಿ ದಡಕ್ಕೆ ಅಪ್ಪಳಿಸುತ್ತಿರುವ ರಕ್ಕಸ ಗಾತ್ರದ ಅಲೆಗಳು..!
ಮಂಗಳೂರು: ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಗೆ ಬುಧವಾರ ನಿಸರ್ಗ ಚಂಡಮಾರುತ ಆಪ್ಪಳಿಸುವ ಭೀತಿ ಹಿನ್ನಲೆಯಲ್ಲಿ ಕರ್ನಾಟಕದ ಕರಾವಳಿಯಲ್ಲೂ ಆತಂಕ ಶುರುವಾಗಿದೆ.
ಅರಬ್ಬೀ ಸಮುದ್ರದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದ್ದು, ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.
ಮುಂದಿನ 48 ಗಂಟೆಗಳಲ್ಲಿ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಈಗಾಗಲೇ ಪಾಲ್ಘರ್, ಮುಂಬೈ ಭಾಗದಲ್ಲಿ ಭಾರೀ ಮಳೆ ಆಗುತ್ತಿದೆ. ಚಂಡಮಾರುತ ಲಗ್ಗೆ ಇಟ್ಟ ನಂತರ ಮಳೆ ಹೆಚ್ಚುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕೊರೊನಾ ವೈರಸ್ ತತ್ತರಿಸಿರುವ ಮಹಾರಾಷ್ಟ್ರಕ್ಕೆ ಇಂದು ನಿಸರ್ಗ ಚಂಡಮಾರುತ ಬಂದಪ್ಪಳಿಸಲಿದೆ.
100-110 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಈ ಹಿನ್ನಲೆಯಲ್ಲಿ ಹೆಚ್ಚಿನ ಮುಂಜಾಗೃತೆ ಕೈಗೊಳ್ಳಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕಾರ್ಯಪ್ರವೃತ್ತವಾಗಿದೆ.
ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ 40 ಎನ್.ಡಿ.ಆರ್.ಎಫ್ ತಂಡ ನಿಯೋಜನೆ ಮಾಡಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಕರಾವಳಿ ಅಂಚಿನಲ್ಲಿರುವ ಕೆಲವರನ್ನು ಸ್ಥಳಾಂತರ ಮಾಡುವ ಬಗ್ಗೆಯೂ ಎನ್.ಡಿ.ಆರ್.ಎಫ್ ಚಿಂತನೆ ನಡೆಸಿದೆ.
ಮುಂಬೈ ಹೊರತಾಗಿ ಪುಣೆ ಭಾಗದಲ್ಲೂ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಚಂಡಮಾರುತದ ಹೊಡೆತಕ್ಕೆ ಸಿಲುಕಿ ಗುಜರಾತ್ ನಲುಗುವ ಸಾಧ್ಯತೆ ಇದೆ.
ಹೀಗಾಗಿ, ಕರಾವಳಿ ಭಾಗದಲ್ಲಿರುವ 78 ಸಾವಿರ ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ.
ಮಹಾರಾಷ್ಟ್ರಕ್ಕೆ ಅಪ್ಪಳಿಸುವ ಚಂಡಮಾರುತದ ಎಫೆಕ್ಟ್ ಕರ್ನಾಟಕದ ಮೇಲೂ ಉಂಟಾಗಲಿದೆ.
ಕಾರವಾರ, ಕುಮಟಾ, ಉಡಪಿ, ಮಂಗಳೂರು ಭಾಗದಲ್ಲಿ ನಿಸರ್ಗ ಚಂಡಮಾರುತದ ಎಫೆಕ್ಟ್ ಕೊಂಚ ಪ್ರಮಾಣದಲ್ಲಿ ಇರಲಿದೆ.
ಇನ್ನು, ಕರಾವಳಿ ಭಾಗದಲ್ಲಿ ಭಾರೀ ಮಳೆ ಆಗುತ್ತಿದ್ದು, ಈ ಮಳೆ ಮುಂದುವರಿಯಲಿದೆ.