Thursday, April 22, 2021

ಪುಣ್ಯಭೂಮಿ ದಕ್ಷಿಣ ಕನ್ನಡದಿಂದ ಕಾಂಗ್ರೆಸ್ ಅನ್ನು ಕೇಡರ್ ಪಕ್ಷ ಮಾಡುವ ಕಾಯಕಲ್ಪ ಆರಂಭ :  ಡಿ.ಕೆ. ಶಿವಕುಮಾರ್

ಪುಣ್ಯಭೂಮಿ ದಕ್ಷಿಣ ಕನ್ನಡದಿಂದ ಕಾಂಗ್ರೆಸ್ ಅನ್ನು ಕೇಡರ್ ಪಕ್ಷ ಮಾಡುವ ಕಾಯಕಲ್ಪ ಆರಂಭ :  ಡಿ.ಕೆ. ಶಿವಕುಮಾರ್

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆ ಈ ದೇಶಕ್ಕೆ ಸಂಸ್ಕೃತಿ ಕೊಟ್ಟ ಪವಿತ್ರ ಭೂಮಿ. ಪಕ್ಷವನ್ನು ಮಾಸ್ ಬೇಸ್ ನಿಂದ ಕೇಡರ್ ಬೇಸ್ ಪಕ್ಷವಾಗಿ ಪರಿವರ್ತಿಸುವ ಕಾಯಕಲ್ಪವನ್ನು ಇಲ್ಲಿಂದ ಆರಂಭಿಸುತ್ತಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಬಂಟ್ವಾಳದಲ್ಲಿ ಬುಧವಾರ ನಡೆದ ಮೈಸೂರು ವಿಭಾಗದ ವಿವಿಧ ಜಿಲ್ಲೆಗಳ ಮುಖಂಡರ ಜತೆ ಸಮಾಲೋಚನೆ ಹಾಗೂ ಸಂಕಲ್ಪ ಸಭೆಯಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದರು

‘ದಕ್ಷಿಣ ಕನ್ನಡ ಜಿಲ್ಲೆ ದೇಶಕ್ಕೆ ವಿದ್ಯಾದಾನ, ಆರ್ಥಿಕ ಶಕ್ತಿ ಕೊಟ್ಟ ಭೂಮಿ. ಈ ಭೂಮಿಯನ್ನು ಈಗ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ.

ಈ ಭೂಮಿಯಲ್ಲಿ ಮತದಾರರು ಯಾರಿಗೆ ಬೆಂಬಲ ನೀಡುತ್ತಾರೋ ಅವರ ಸರ್ಕಾರ ಬಂದಿರೋದನ್ನು ನಾವು ಇತಿಹಾಸದಲ್ಲಿ ನೋಡಿದ್ದೇವೆ. ಈ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗುತ್ತಿದೆ.’

‘ಇಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದರೂ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಇಲ್ಲಿಗೆ ಬಂದಿದ್ದೇನೆ.

ಕಾರ್ಯಕರ್ತರ ಧ್ವನಿ ಅಧ್ಯಕ್ಷರ ಧ್ವನಿಯಾಗಬೇಕು. ಹೀಗಾಗಿ ಮೈಸೂರು ವಿಭಾಗದ ನಾನಾ ಜಿಲ್ಲೆಗಳ ಎಲ್ಲ ಅಧ್ಯಕ್ಷರು, ಸೋತ ಅಭ್ಯರ್ಥಿಗಳನ್ನು ಆಹ್ವಾನಿಸಿ, ಸ್ಥಳೀಯ ಸಮಸ್ಯೆಗಳೇನಿವೆ? ಎಂಬುದನ್ನು ಆಲಿಸುತ್ತಿದ್ದೇವೆ.

ನಾವದನ್ನು ಜನರ ಮುಂದೆ ಇಡುತ್ತೇವೆ. ಸ್ಥಳೀಯ ಸಮಸ್ಯೆ ಜತೆಗೆ ಸಂಘಟನೆ ವಿಚಾರವಾಗಿ ಪ್ರತಿಯೊಬ್ಬ ಬ್ಲಾಕ್ ಅಧ್ಯಕ್ಷರೂ ಇಂದು ಮಾತನಾಡಲಿದ್ದಾರೆ.

ಪಕ್ಷವನ್ನು ಮಾಸ್ ಬೇಸ್ ನಿಂದ ಕೇಡರ್ ಬೇಸ್ ಆಗಿ ಪರಿವರ್ತಿಸುತ್ತೇವೆ ಎಂದು ಪ್ರತಿಜ್ಞಾ ದಿನ ತಿಳಿಸಿದ್ದೇವೆ. ಈಗ ಆ ಸಂಕಲ್ಪವನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಅನುಷ್ಠಾನಕ್ಕೆ ತರುತ್ತಿದ್ದೇವೆ.’

ಗೋಹತ್ಯೆ ನಿಷೇಧ ಕಾಯ್ದೆ ಬದಲಾವಣೆ ಅಗತ್ಯವಿರಲಿಲ್ಲ:

‘ಗೋಹತ್ಯೆ ನಿಷೇಧ ಕಾನೂನು ದೇಶದಲ್ಲಿ ಈಗಾಗಲೇ ಜಾರಿಯಲ್ಲಿತ್ತು. ಅದನ್ನು ಬದಲಿಸುವ ಅಗತ್ಯ ಇರಲಿಲ್ಲ.

ರಾಜಕಾರಣಕ್ಕಾಗಿ ಇದನ್ನು ಹೊಸದಾಗಿ ತರುತ್ತಿದ್ದಾರೆ. ನಾವೆಲ್ಲ ಗೋಮಾತೆಗೆ ಗೌರವ ನೀಡುತ್ತೇವೆ. ಅದು ನಮ್ಮ ಸಂಸ್ಕೃತಿ. ಆದರೆ ಆಡಳಿತ ಪಕ್ಷದವರು ರಾಜಕಾರಣಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ.

ಸಿದ್ದರಾಮಯ್ಯ ಅವರು ಅವರ ವೈಯಕ್ತಿಕ ಅಭ್ಯಾಸಗಳ ಬಗ್ಗೆ ಮಾತನಾಡಿದ್ದಾರೆ. ಈ ಕಾನೂನು ಮೊದಲೇ ಜಾರಿಯಲ್ಲಿತ್ತು ಎಂದು ಅವರೇ ಹೇಳಿದ್ದಾರೆ.

ಗೋ ಸಂರಕ್ಷಣೆ ಮಾಡುವುದಾದರೆ, ಮೊದಲು ಗೋಮಾಂಸ ರಫ್ತು ನಿಷೇಧಿಸಿ. ರೈತರಿಗೆ ಪ್ರತಿ ಹಸು ಸಾಕಲು 25 ಸಾವಿರದಿಂದ 50 ಸಾವಿರ ರುಪಾಯಿ ಪ್ರೋತ್ಸಾಹ ಧನ ನೀಡಲಿ. ಇದು ಒಂದು ವರ್ಗದ ವಿಚಾರವಲ್ಲ.

ರೈತರು ಎಲ್ಲ ಸಮುದಾಯದವರು. ಎಲ್ಲ ವರ್ಗದವರೂ ಹಸು ಸಾಕುತ್ತಾರೆ. ಹೀಗಾಗಿ ಎಲ್ಲರಿಗೂ ಸರ್ಕಾರ ಪರಿಹಾರ ನೀಡಬೇಕು. ಇಲ್ಲವಾದರೆ ಆ ಹಸುವಿಗೆ ಇರುವ ಬೆಲೆಯನ್ನು ಕೊಟ್ಟು ಅದನ್ನು ಕರೆದುಕೊಂಡು ಹೋಗಿ ಅವರ ಮನೆಯಲ್ಲಿ ಕಟ್ಟಿಕೊಳ್ಳಲಿ. ಎಂದರು.

ಸಂಕಲ್ಪ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಭಾಷಣದ ಸಾರಾಂಶ…

* ನಿಮ್ಮೆಲ್ಲರ ಬಯಕೆಯಂತೆ ನನಗೆ ಪಕ್ಷದ ಅಧ್ಯಕ್ಷ ಜವಾಬ್ದಾರಿ ವಹಿಸಿದ್ದಾರೆ. ಇದು ಹುದ್ದೆಯಲ್ಲ, ಅಧಿಕಾರವಲ್ಲ, ಬದಲಿಗೆ ಜವಾಬ್ದಾರಿ ಎಂದು ಹೇಳಿದ್ದೇನೆ. ಕೊರೋನಾ ಸಂದರ್ಭದಲ್ಲಿ ನೀವೆಲ್ಲ ಸೇರಿ ಮಾನವೀಯತೆಯಿಂದ ಆಡಳಿತ ಪಕ್ಷಕ್ಕಿಂತ ಹೆಚ್ಚಿನ ಕೆಲಸ ಮಾಡಿದ್ದೀರಿ. ಸೋನಿಯಾ ಗಾಂಧಿ ಅವರು ನಮಗೆ ಪತ್ರ ಬರೆದಿದ್ದು, ಬೇರೆ ರಾಜ್ಯಗಳಿಗಿಂತ ಉತ್ತಮ ಕಾರ್ಯ ಮಾಡಿದ್ದೀರಿ ಎಂದು ಅಭಿನಂದಿಸಿದ್ದಾರೆ.

* 28 ರಂದು ಪಕ್ಷದ ಸಂಸ್ಥಾಪನಾ ದಿನದಂದು ಈ ಸಭೆ ಬಗ್ಗೆ ಘೋಷಣೆ ಮಾಡಿದ್ದೇವು. ನಾವು ಕಾಂಗ್ರೆಸ್ ಪಕ್ಷವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂಬುದನ್ನು ಚರ್ಚಿಸಿದ್ದೇವೆ. ಅನೇಕ ನಾಯಕರು ಸಲಹೆ ನೀಡಿದ್ದಾರೆ. ಕೋರ್ ಕಮಿಟಿ ಮಾಡಲು ಸಲಹೆ ನೀಡಿದ್ದಾರೆ.

* ಇಲ್ಲಿರುವವರು ಹತ್ತಾರು ವರ್ಷಗಳಿಂದ ಪದಾಧಿಕಾರಿಗಳಾಗಿದ್ದೀರಿ. ಕೆಲವರು ಸಕ್ರಿಯರಾಗಿದ್ದೀರಿ. ಇನ್ನೂ ಕೆಲವರು ಸಭೆ ಸಮಯದಲ್ಲಿ ಮಾತ್ರ ಹಾಜರಾಗುತ್ತೀರಿ. ಜಿಲ್ಲಾ ಹಾಗೂ ಗ್ರಾಮಮಟ್ಟದ ಕಾರ್ಯಕ್ರಮದಲ್ಲಿ ಏನೇನಾಗುತ್ತಿದೆ ಎಂಬ ವರದಿ ನಮಗೆ ನಿರಂತರ ಬರುತ್ತಿದೆ.

* ಈ ವರ್ಷ ಹೋರಾಟದ, ಸಂಘಟನೆ ವರ್ಷ ಅಂತಾ ಈಗಾಗಲೇ ನಾವು ಘೋಷಿಸಿದ್ದೇವೆ. ರಾಜ್ಯ ಮಟ್ಟದ ಸಮಸ್ಯೆಗಳು ನಮಗೆ ಗೊತ್ತಿವೆ. ಅದರ ಬಗ್ಗೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಆದರೆ ಇಲ್ಲಿ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಬೇಕಿದೆ. ನಿನ್ನೆ ನೀವೆಲ್ಲಾ ಗಮನಿಸಿದ್ದೀರಿ. ಬೆಂಗಳೂರಿನಲ್ಲಿ ಹಲವು ನಾಯಕರೆಲ್ಲ ಸೇರಿ, ಅಲ್ಲಿನ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟ ಮಾಡಿದ್ದೇವೆ. ಅದೇ ರೀತಿ ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ನಿಮ್ಮದೇ ಆದ ಸಮಸ್ಯೆಗಳನ್ನು ಗುರುತಿಸಿ ಹೋರಾಟ ಮಾಡಬೇಕಿದೆ. ಚಿಕ್ಕಮಗಳೂರು, ಉಡುಪಿ, ಮೈಸೂರು ವಿಚಾರಗಳು ಬೇರೆ-ಬೇರೆ ಇರುತ್ತವೆ. ಶಾಸಕರ ವಿಚಾರ ಬೇರೆ ಇರುತ್ತೆ. ಇದಕ್ಕನುಗುಣವಾಗಿ ಸಂಘಟನೆ ಮಾಡಲು ಇಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿರುವ ಅಧ್ಯಕ್ಷರುಗಳು ನಿಮ್ಮ ವಿಚಾರ ತಿಳಿಸಲು ಅವಕಾಶ ಮಾಡಿಕೊಡಲಾಗುತ್ತದೆ. ನಿಮ್ಮ ನಾಯಕತ್ವವನ್ನು ನಾವು ಪರೀಕ್ಷೆ ಮಾಡುತ್ತಿದ್ದೇವೆ. ಇದು ದೆಹಲಿಯಿಂದ ಬಂದಿರುವ ಆದೇಶ.

* ಪ್ರತಿ ಬ್ಲಾಕ್ ಅಧ್ಯಕ್ಷರಿಗೆ ಈಗ ಮೂರು ನಿಮಿಷ ಕಾಲಾವಕಾಶ ನೀಡುತ್ತೇವೆ. ನೀವು ನಿಮ್ಮ ಕ್ಷೇತ್ರದ ವಿಚಾರ ತಿಳಿಸಿ. ನಿಮ್ಮ ದೂರುಗಳಿದ್ದರೆ ಅವುಗಳನ್ನು ಆಮೇಲೆ ನನ್ನ ಬಳಿ ಅಥವಾ ಕಾರ್ಯಾಧ್ಯಕ್ಷರ ಬಳಿ ಮಾತನಾಡಿ.

* ಈ ವರ್ಷ 100 ರಿಂದ 150 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲು ನಿರ್ಧರಿಸಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಮಾಸ್ ಬೇಸ್ ನಿಂದ ಕೇಡರ್ ಬೇಸ್ ಮಾಡಬೇಕು ಅಂತಾ ಹೇಳಿದ್ದೇವೆ. ಹೈಕಮಾಂಡ್ ಮೊದಲು ಪಂಚಾಯ್ತಿ ಹಾಗೂ ವಾರ್ಡ್ ಮಟ್ಟದ ಸಮಿತಿ ಮಾಡಬೇಕು ಎಂದು ಸೂಚಿಸಿದೆ.

* ಎಲ್ಲ ಪಂಚಾಯ್ತಿಗೂ ಪಕ್ಷದಿಂದ ಅರ್ಜಿ ಪುಸ್ತಕ ನೀಡುತ್ತಿದ್ದು, ಅವುಗಳನ್ನು ತುಂಬಿ ಮತ್ತೆ ಪಕ್ಷಕ್ಕೆ ಸಲ್ಲಿಸಬೇಕು. ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ನೀಡುತ್ತೇವೆ. ಶಾಸಕರ ಮನೆಯಲ್ಲೋ, ನಾಯಕರ ಮನೆಯಲ್ಲೋ ಕೂತುಕೊಂಡು ಇದನ್ನು ತುಂಬಬೇಡಿ. ಆಯಾ ಪಂಚಾಯ್ತಿಗೆ ಹೋಗಿ ಅಲ್ಲೇ ಇದನ್ನು ತುಂಬಬೇಕು. ಈ ಬಗ್ಗೆ ನಾವು ಮಾಹಿತಿ ಪಡೆಯುತ್ತೇವೆ.

* ಪ್ರಜಾಪ್ರತಿನಿಧಿ ಎಂಬ ಬೂತ್ ಮಟ್ಟದ ಸಮಿತಿ ರಚನೆಗೂ ನಾವು ಮುಂದಾಗಿದ್ದೇವೆ. ನಾನು ಈ ಹಿಂದೆ ಹೇಳಿದ್ದೇನೆ. ಕಾರ್ಯಕರ್ತರ ಧ್ವನಿ ಕೆಪಿಸಿಸಿ ಅಧ್ಯಕ್ಷರ ಧ್ವನಿಯಾಗಬೇಕು. ಆ ನಿಟ್ಟಿನಲ್ಲಿ ಪಕ್ಷ ಕಟ್ಟಲು ನಾವು ಸಜ್ಜಾಗಬೇಕು. ಇದಕ್ಕೆ ನಿಮ್ಮ ಸಹಕಾರ ಬೇಕು.

* ರಾಜಕಾರಣದ ಯುದ್ಧ ಸಂದರ್ಭದಲ್ಲಿ ಶಸ್ತ್ರಾಭ್ಯಾಸ ಮಾಡುವುದಲ್ಲ. ಪೂರ್ವ ಸಿದ್ಧತೆ ಬೇಕು. ಅದು ವ್ಯವಸಾಯ ಇದ್ದ ಹಾಗೆ. ವ್ಯವಸಾಯದಲ್ಲಿ ಮಳೆ ಬಂದಾಗ ಹೊಲ ಉತ್ತು, ಬೀಜ ಬಿತ್ತಿ, ಗೊಬ್ಬರ ಹಾಕಿ, ಕಳೆ ಕಿತ್ತು ಆಮೇಲೆ ಬೆಳೆ ಕಟಾವು ಮಾಡಲಾಗುತ್ತದೆ. ಹಾಗೆ ಈಗಿನಿಂದಲೇ ಪಂಚಾಯ್ತಿ ಮಟ್ಟದಿಂದ ಸಂಸತ್ತಿನವರೆಗೂ ಪಕ್ಷ ಕಟ್ಟಬೇಕು. ನಾವು ಮೊದಲು ಕಾರ್ಯಕರ್ತರು. ಆಮೇಲೆ ನಾಯಕರು. ಅದಕ್ಕಾಗಿ ನಾವು ಕೆಳಗೆ ಕೂತು, ಮಾತನಾಡುವವರು ವೇದಿಕೆ ಮೇಲೆ ಬರಲು ಅವಕಾಶ ಮಾಡಿಕೊಡಲಾಗಿದೆ. ದೆಹಲಿ ನಾಯಕರೊಂದಿಗೆ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ.

* ಬೇರೆ ಪಕ್ಷಗಳ ವಿಚಾರ ಬೇರೆ ಸಮಯದಲ್ಲಿ ಚರ್ಚೆ ಮಾಡೋಣ. ಈಗ ನಮ್ಮ ಗಮನ ಪಕ್ಷ ಸಂಘಟನೆ ಮಾಡುವುದರ ಬಗ್ಗೆ ಇರಲಿ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯಕರ್ತರು ಶಕ್ತಿ ಮೀರಿ ಕೆಲಸ ಮಾಡಿದ್ದು, ನಮಗೆ ಸಮಾಧಾನಕರ ಫಲಿತಾಂಶ ಬಂದಿದೆ. ಬಿಜೆಪಿಯವರು ತಾವೇ ಗೆದ್ದಿರುವಂತೆ ನಂಬರ್ ಕೊಟ್ಟುಕೊಳ್ಳುತ್ತಿದ್ದಾರೆ. ನಾನು ಜಿಲ್ಲಾ ಕಾಂಗ್ರೆಸ್ ನಿಂದ ಮಾಹಿತಿ ಪಡೆದು, ನಮ್ಮ ಪಕ್ಷ ಎಷ್ಟು ಪಂಚಾಯಿತಿಗಳಲ್ಲಿ ಗೆದ್ದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಿಖರವಾಗಿ ತಿಳಿಸುತ್ತೇನೆ.

* ಸ್ಥಳೀಯವಾಗಿ ಯಾವುದೇ ಕಾರ್ಯಕ್ರಮ ಮಾಡಿದರೂ ನಾವು ಜನರಿಗೆ ಭಾವನಾತ್ಮಕವಾಗಿ ಹತ್ತಿರವಾಗಬೇಕು. ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು.

* ನಮ್ಮ ಪಕ್ಷದಿಂದ ದೂರ ಹೋದವರನ್ನು ಮತ್ತೆ ಪಕ್ಷಕ್ಕೆ ಸೆಳೆಯಲು ಕಾರ್ಯಕ್ರಮ ರೂಪಿಸಬೇಕು. ಕಾಂಗ್ರೆಸ್ ಎಲ್ಲ ವರ್ಗಕ್ಕೂ ಸೇರಿದ ಆಸ್ತಿ. ಹೀಗಾಗಿ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಮುಂದಿನ ಪಂಚಾಯ್ತಿ, ಬೂತ್ ಹಾಗೂ ಬ್ಲಾಕ್ ಸಮಿತಿಯಲ್ಲಿ ಅವಕಾಶ ನೀಡಬೇಕು. ಎಲ್ಲ ಸಮಾಜವನ್ನೂ ಪ್ರತಿನಿಧಿಸಬೇಕು. ಈ ನಿಟ್ಟಿನಲ್ಲಿ ಹೊಸ ಸಮಿತಿಗಳನ್ನು ರಚನೆ ಮಾಡಿ. ಸಾಮಾಜಿಕ ಜಾಲತಾಣ ಬಹಳ ಮುಖ್ಯವಾಗಿದ್ದು, ಎಲ್ಲ ಸಮಿತಿಗಳು ಇದಕ್ಕೆ ಆದ್ಯತೆ ನೀಡಬೇಕು.

* ನೀವು ಪಕ್ಷಕ್ಕೆ ಸಮಯ ನೀಡಿ, ಪ್ರತಿ ಪಂಚಾಯ್ತಿಗೆ ಹೋಗಿ ಕೆಲಸ ಮಾಡುವ ತಾಳ್ಮೆ, ಆಸಕ್ತಿ ಇರಬೇಕು. ಅದು ಸಾಧ್ಯವಾಗದಿದ್ದರೆ ಬೇರೆಯವರಿಗೆ ಅವಕಾಶ ಮಾಡಿಕೊಡಿ.

* ನಮಗೆ ಪಕ್ಷ ಸಂಘಟನೆ ಬಹಳ ಮುಖ್ಯ. ಮಹಾತ್ಮ ಗಾಂಧೀಜಿ ಅವರು ಒಂದು ಕಡೆ ಹೇಳಿದ್ದಾರೆ. ಒಬ್ಬ ವ್ಯಕ್ತಿ ಹಿಂದೆ ಎಷ್ಟು ಜನ ಇದ್ದಾರೆ ಎಂಬುದಕ್ಕಿಂತ ಆ ವ್ಯಕ್ತಿ ಎಷ್ಟು ಜನ ನಾಯಕರನ್ನು ಬೆಳೆಸುತ್ತಾನೆ ಎಂಬುದು ಮುಖ್ಯ ಎಂದು. ಆ ರೀತಿ ನಾವು ಪ್ರತಿ ಬೂತ್ ಮಟ್ಟದಲ್ಲೂ ನಾಯಕರನ್ನು ಬೆಳೆಸಬೇಕಿದೆ. ಪ್ರತಿ ಬೂತ್ ಮಟ್ಟದಲ್ಲೂ ಸಾಮಾಜಿಕ ಜಾಲತಾಣ ವ್ಯಕ್ತಿ ನಿರ್ಮಾಣ ಮಾಡಬೇಕು. ಪ್ರತಿ ಬೂತ್ ನಲ್ಲಿ ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರನ್ನು ನಾವು ಒಳಗೊಳ್ಳಬೇಕು. ನಾವು ಎಷ್ಟೇ ದೊಡ್ಡ ನಾಯಕರಾದರೂ ನಾವು ಬೂತ್ ಮಟ್ಟದಿಂದ ಪ್ರತಿನಿಧಿಸಬೇಕು.

* ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬಂತೆ ನಾವು ಒಂದು ಸಮಿತಿಯಲ್ಲಿದ್ದವರಿಗೆ ಮತ್ತೊಂದು ಸಮಿತಿಯಲ್ಲಿ ಜವಾಬ್ದಾರಿ ನೀಡುವುದಿಲ್ಲ. ಈ ಬಗ್ಗೆ ಮಾರ್ಗದರ್ಶನಗಳನ್ನು ನಿಮಗೆ ಕಳುಹಿಸಿಕೊಡುತ್ತೇವೆ. ಪಕ್ಷದ ಸಿದ್ಧಾಂತ ಹಾಗೂ ಗುರಿಯನ್ನು ನಾವು ಯಾವಾಗ ಮರೆಯುತ್ತೇವೋ ಆಗ ನಾವು ಸೋಲನುಭವಿಸುತ್ತೇವೆ ಎಂದು ಪಂಡಿತ್ ಜವಾಹರಲಾಲ್ ನೆಹರು ಅವರು ಹೇಳಿದ್ದಾರೆ. ಏನೇ ಒತ್ತಡ ಇದ್ದರೂ ನಾವು ನಮ್ಮ ಸಿದ್ಧಾಂತ ಬಿಡಬಾರದು. ಕಾಂಗ್ರೆಸ್ ಪಕ್ಷಕ್ಕೆ ಸಿದ್ಧಾಂತವೇ ಅಡಿಪಾಯ.

* ಅವಕಾಶಗಳು ನಿಮ್ಮ ಮನೆ ಬಾಗಿಲಿಗೆ ಹುಡುಕಿಕೊಂಡು ಬರುವುದಿಲ್ಲ. ನೀವೇ ಅವಕಾಶ ಸೃಷ್ಟಿ ಮಾಡಿಕೊಂಡು ಮುಂದೆ ಸಾಗಬೇಕು ಎಂದು ಇಂದಿರಾಗಾಂಧಿ ಅವರು ಹೇಳಿದ್ದಾರೆ. ಅದೇ ರೀತಿ ಈ ವರ್ಷದಲ್ಲಿ ನಾವು ಹೋರಾಟ ಮಾಡಬೇಕು.

* ಸಿದ್ದರಾಮಯ್ಯನವರು, ಎಸ್.ಆರ್ ಪಾಟೀಲ್ ಅವರು, ಬೇರೆ ನಾಯಕರು ಎಲ್ಲಿಗೆ ಬರಬೇಕೋ ಅಲ್ಲಿಗೆ ಬರುತ್ತಾರೆ. ಮೊದಲ ಹಂತದಲ್ಲಿ, ನಾವು ಎಲ್ಲಿ ಸೋತಿದ್ದೇವೋ, ಎಲ್ಲಿ ನಮಗೆ ಶಾಸಕರಿಲ್ಲವೋ ಆ ಕ್ಷೇತ್ರದತ್ತ ಗಮನ ಹರಿಸುತ್ತಿದ್ದೇವೆ.

* ನಿಮ್ಮ ಸಂಘಟನೆಯಿಂದ ನಿಮ್ಮ ನಾಯಕತ್ವದ ಗುಣ ತೀರ್ಮಾನವಾಗುತ್ತದೆ. ಹೊಸಮುಖಗಳಿಗೆ ಅವಕಾಶ ಸಿಗಬೇಕು ಎಂಬುದು ದೆಹಲಿಯ ಸಂದೇಶವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನೀವೆಲ್ಲ ಹೋರಾಟಕ್ಕೆ ಸಜ್ಜಾಗಬೇಕು.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...