ಸಿಎಫ್ ಐ ನಾಯಕರ ಮೇಲೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ ಆರೋಪ; ಪೊಲೀಸರ ವಿರುದ್ಧ ಸಂಘಟನೆ ಪ್ರತಿಭಟನೆ .!
ಮಂಗಳೂರು:ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವ ಸಲುವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ರಾಜ್ಯಾದ್ಯಂತ ಝೀರೋ ಡ್ರಾಪೌಟ್ ಅಭಿಯಾನ ಮುಗಿಸಿ ವಾಪಾಸ್ ಆಗುತ್ತಿದ್ದ ಸಂದರ್ಭ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಗಾಂಜಾ ವ್ಯಸನಿಗಳು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಜೊತೆಗೆ ಸ್ಥಳಕ್ಕಾಗಮಿಸಿದ ಉಳ್ಳಾಲ ಪೋಲಿಸರು ಹಲ್ಲೆಗೊಳಗಾದವರನ್ನೇ ಬಂಧಿಸಿ, ಠಾಣೆಗೆ ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಧಾರ್ಮಿಕ ನಿಂದನೆ ನಡೆಸಿ, ಮಾರ್ಮಾಂಗಕ್ಕೆ ತಮ್ಮ ಬೂಟುಗಳಿಂದ ಒದ್ದು ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪೊಲೀಸ್ ಇಲಾಖೆಯ ಮೇಲೆ ಆರೋಪ ಮಾಡಿದೆ.
ಠಾಣೆಯಲ್ಲಿ ಹಲ್ಲೆ ನಡೆಸಿದ ಪೋಲಿಸರ ನಡೆಯ ಕುರಿತು ತೀವ್ರ ಅಸಮಾಧಾನವುಂಟಾಗಿದ್ದು, ಉನ್ನತ ಮಟ್ಟದ ಅಧಿಕಾರಿಗಳು ಇದರ ಬಗ್ಗೆ ಶೀಘ್ರ ಸೂಕ್ತ ಕ್ರಮ ಕೈಗೊಂಡು ಹಲ್ಲೆ ನಡೆಸಿದ ನಿಜವಾದ ಗಾಂಜಾ ವ್ಯಸನಿಗಳನ್ನು ಬಂಧಿಸಿ, ದರ್ಪ ಮೆರೆದ ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾ ಮಾಡಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಸಾಧಿಕ್ ಜಾರತ್ತಾರು ಒತ್ತಾಯಿಸಿದ್ದಾರೆ.
ಸಧ್ಯ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನಾಯಕರ ಮೇಲೆ ಉಳ್ಳಾಲ ಪೋಲಿಸರ ಮಾರಣಾಂತಿಕ ಹಲ್ಲೆ ಖಂಡಿಸಿ ಹಾಗೂ ಪೋಲಿಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇಂದು ಮಂಗಳೂರಿನ ಜ್ಯೋತಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಿದೆ.