ಲಾಸ್ ಏಂಜಲೀಸ್: ಚಂದ್ರನಲ್ಲಿಗೆ ಮಾನವ ಸಹಿತ ಮೊದಲ ಪಯಣ ಕೈಗೊಂಡ 1969ರ ಅಪೋಲೋ- 11 ಮಿಷನ್ನಲ್ಲಿ ಹೋಗಿಬಂದಿರುವ ಬಜ್ ಅಲ್ಡ್ರಿನ್ 93ನೇ ಜನ್ಮದಿನದಂದೇ ನಾಲ್ಕನೇ ವಿವಾಹವಾಗಿದ್ದಾರೆ.
ಪತ್ನಿ ಡಾ. ಆಂಕಾ ಫೌರ್ ಅವರ ಚಿತ್ರವನ್ನು ಬಜ್ ಶನಿವಾರ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಬಹುಕಾಲದ ಗೆಳತಿ ಅಂಕಾ ಫೌರ್ ಜತೆಗೆ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿ ನಡೆದ ಸಣ್ಣ ಸಮಾರಂಭದಲ್ಲಿ ವಿವಾಹ ಆಗಿರುವುದಾಗಿ ಬರೆದಿದ್ದಾರೆ.
ಈ ಪೋಸ್ಟ್ ಗೆ 22 ಸಾವಿರ ಮೆಚ್ಚುಗೆಗಳು ವ್ಯಕ್ತವಾಗಿದ್ದು, 10.80 ಲಕ್ಷ ಜನರು ಪೋಸ್ಟ್ ವೀಕ್ಷಿಸಿದ್ದಾರೆ.
ಅಭಿನಂದನೆಯ ಸುರಿಮಳೆಯೇ ಹರಿದುಬಂದಿದೆ.ಬಜ್ ಈ ಹಿಂದೆ ಮೂರು ಸಲ ವಿವಾಹವಾಗಿದ್ದು, ಮೂವರು ಪತ್ನಿಯರಿಗೂ ವಿಚ್ಛೇದನ ನೀಡಿದ್ದಾರೆ.
ಅಪೋಲೋ-11 ನೌಕೆಯಲ್ಲಿ ಚಂದ್ರನಂಗಳಕ್ಕೆ ಕಾಲಿಟ್ಟ ಮೂವರ ಪೈಕಿ ಬಜ್ ಮಾತ್ರ ಈಗ ಬದುಕಿದ್ದಾರೆ.
ಚಂದ್ರನಲ್ಲಿ ನೀಲ್ ಆರ್ಮ್ಸ್ಟ್ರಾಂಗ್ ಇಳಿದ 19 ನಿಮಿಷದ ನಂತರ ಬಜ್ ಇಳಿದಿದ್ದರು. ನೌಕೆಯ ಪೈಲಟ್ ಆಗಿದ್ದವರು ಮೈಕಲ್ ಕಾಲಿನ್ಸ್ ಆಗಿದ್ದಾರೆ.