ಮಂಗಳೂರು: ‘ಬಿಜೆಪಿಯವರದ್ದು ಬಾಯಲ್ಲಿ ಸ್ವದೇಶಿ ಮಂತ್ರ, ಕಾರ್ಯ ಅನುಷ್ಠಾನ ಮಾಡುವಾಗ ವಿದೇಶಿ ತಂತ್ರ. ಸ್ಪಷ್ಟತೆ ಇಲ್ಲದ ತೀರ್ಮಾನ ದೇಶಕ್ಕೆ ಅವಮಾನ. ಅಷ್ಟೇ ಅಲ್ಲದೆ ಭಾರತ ದೇಶದ ರಾಷ್ಟ್ರಧ್ವಜಕ್ಕೆ ತಿದ್ದುಪಡಿ ತಂದು ಖಾದಿ ಬದಲು ಪಾಲಿಸ್ಟರ್ ಬಟ್ಟೆ ಉಪಯೋಗ ಮಾಡಬಹುದೆಂಬ ಕೇಂದ್ರದ ತೀರ್ಮಾನವು ಭಾರತ ದೇಶದ ಸ್ವಾತಂತ್ರ್ಯೋತ್ಸವದ ಚಳುವಳಿಗೆ ಮಾಡಿದ ಅವಮಾನ. ದೇಶದ ಮೂಲ ತಾಯಿಬೇರು ಖಾದಿ’ ಎಂದು ವಿರೋಧ ಪಕ್ಷ ಉಪನಾಯಕ ಯು.ಟಿ.ಖಾದರ್ ದೂರಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಭಾರತದ ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವಕ್ಕೆ ಇಡೀ ದೇಶವೇ ಸಜ್ಜಾಗುತ್ತಿದೆ. ಸರಕಾರ ಹರ್ ಘರ್ ತಿರಂಗಾ ಎನ್ನುವ ಅಭಿಯಾನದ ಮೂಲಕ ಪ್ರತಿಯೊಬ್ಬರೂ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಬೇಕೆಂದು ಸೂಚನೆ ನೀಡಿದೆ.
ಸ್ವರಾಜ್ ಮತ್ತು ಸ್ವದೇಶಿ ಹೋರಾಟದ ಸ್ವಾಭಿಮಾನದ ಪ್ರತೀಕವೂ ಹೌದು. ಚರಕ ಕೇವಲ ಒಂದು ಸಿಂಬಲ್ ಅಲ್ಲ, ದೊಡ್ಡ ರಾಜ ಆಡಳಿತವನ್ನು ಕಿತ್ತೆಸೆದ ಸಂಕೇತವಾಗಿದೆ. ಯಾವುದೇ ಸರ್ಕಾರ ಬಂದರೂ ಖಾದಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿತ್ತು.
ಈ ಅಮೃತ ಮಹೋತ್ಸವದ ಸಂದರ್ಭ ಎಲ್ಲರೂ ಖಾದಿ ತೊಡಬೇಕೆಂಬ ದೊಡ್ಡ ಮಟ್ಟದ ಸಂದೇಶವನ್ನು ಸರ್ಕಾರ ದೇಶಕ್ಕೆ ಕೊಡಬೇಕಿತ್ತು. ಆದರೆ ಅದನ್ನು ಮಾಡಲಿಲ್ಲ.
ಅಷ್ಟೇ ಅಲ್ಲ ನಮ್ಮಲ್ಲಿ ಖಾದಿಗೆ ಮಹತ್ವ ಕಡಿಮೆ ಆಗಿದೆ. ಮೋದಿ ಅವರು ಎಪ್ಪತೈದರ ಸಂಭ್ರಮಕ್ಕೆ ಎಲ್ಲರಿಗೂ ಖಾದಿ ಧರಿಸುವಂತೆ ಕರೆ ನೀಡಬೇಕಿತ್ತು ಎಂದರು. ಮೋದಿ ಅವರು ರಾಷ್ಟ್ರ ದ್ವಜವನ್ನೇ ಪಾಲಿಸ್ಟರ್ ಬಟ್ಟೆಗೆ ಬದಲಾಯಿಸಿದ್ದಾರೆ. ಮಾತಾಡೋದು ಸ್ವದೇಶಿ, ಆದ್ರೆ ಕೆಲಸ ಮಾಡುವಾಗ ಎಲ್ಲಾ ವಿದೇಶಿ ಆಗಿದೆ.
ವಿದೇಶದಿಂದ ಆಮದು ಮಾಡಿದ ಪಾಲಿಸ್ಟರ್ ಬಟ್ಟೆಯಲ್ಲಿ ದ್ವಜ ತಯಾರಿಸಲಾಗಿದೆ. ಚೈನಾದಿಂದಲೂ ಅಮದಿಗೆ ಅವಕಾಶ ನೀಡಲಾಗಿದೆ. ಇದು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತದೆ ಅಷ್ಟೇ ಎಂದು ಖಾದರ್ ಕಿಡಿಕಾರಿದ್ದಾರೆ.
ಇನ್ನು ಮನೆಗಳಲ್ಲೂ ರಾಷ್ಟ್ರಧ್ವಜ ಹಾರಿಸುವುದಕ್ಕೆ ಸರ್ಕಾರ ಸರಿಯಾದ ಮಾಹಿತಿ ನೀಡಬೇಕು ಮತ್ತು ದ್ವಜಗಳನ್ನು ಪೂರೈಸಬೇಕು ಎಂದ ಅವರು ಪ್ರತಿ ಮನೆಗೆ ಹಾಕುವಷ್ಟು ರಾಷ್ಟ್ರ ದ್ವಜ ಮಾರುಕಟ್ಟೆಯಲ್ಲಿ ಇಲ್ಲ.
ಮಾರುಕಟ್ಟೆಯಲ್ಲಿ ಸಿಗುವ ಧ್ವಜದಲ್ಲಿ ಹಲವು ನೂನ್ಯತೆಗಳಿವೆ. ಘೋಷಣೆ ಮಾಡಿದ್ರೆ ಸಾಲದು ಸರಿಯಾಗಿ ಅನುಷ್ಠಾನ ಮಾಡಬೇಕು ಎಂದರು.