ಪುತ್ತೂರು: ಬೆಂಗಳೂರಿನಿಂದ ಪುತ್ತೂರಿಗೆ ಆಗಮಿಸಿದ್ದ ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
ಪುತ್ತೂರು ತಾಲೂಕಿನ ಈಶ್ವರಮಂಗಲದ ಮುಗಿಳಿ ಎಂಬಲ್ಲಿನ ನಿವಾಸಿ ಮಹಮ್ಮದ್ ಮುಗುಳಿ ಎಂಬವರ ಪುತ್ರ ಉಮ್ಮರ್ ಸಿ.ಎಚ್ (28) ಹೃದಯಾಘಾತಕ್ಕೆ ಬಲಿಯಾದ ಯುವಕನಾಗಿದ್ದಾನೆ.
ಬೆಂಗಳೂರಿನಲ್ಲಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಉಮ್ಮರ್ ಅವರು ನಿನ್ನೆ ರಾತ್ರಿ ಅಲ್ಲಿಂದ ಹೊರಟು ಇಂದು ಬೆಳಗ್ಗೆ ಊರಿಗೆ ತಲುಪಿದ್ದರು.
ಮನೆಯಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಯಿತು.
ಆದರೆ ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಮೃತರು ತಂದೆ, ತಾಯಿ, ಓರ್ವ ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.