BELTHANGADY
ಬಂಗಾರಪಲ್ಕೆ ಜಲಪಾತದಲ್ಲಿ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಸನತ್ ಶೆಟ್ಟಿ ದೇಹಕ್ಕಾಗಿ 7 ನೇ ದಿನವೂ ಮುಂದುವರೆದ ಕಾರ್ಯಾಚರಣೆ..!
ಬಂಗಾರಪಲ್ಕೆ ಜಲಪಾತದಲ್ಲಿ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಸನತ್ ಶೆಟ್ಟಿ ದೇಹಕ್ಕಾಗಿ 7 ನೇ ದಿನವೂ ಮುಂದುವರೆದ ಕಾರ್ಯಾಚರಣೆ..!
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದಲ್ಲಿ ಜ. 25ರಂದು ಗುಡ್ಡ ಕುಸಿತಗೊಂಡು ಮಣ್ಣಿನಡಿ ಸಿಲುಕಿದ ಸನತ್ ಶೆಟ್ಟಿ ಅವರ ದೇಹಕ್ಕಾಗಿ ನಡೆಸುತ್ತಿರುವ ಶೋಧ ಕಾರ್ಯ 7 ನೇ ದಿನವಾದ ಇಂದು ಕೂಡ ಮಂದುವೆರೆದಿದ್ದು ಯಾವುದೇ ಕುರುಹು ಲಭ್ಯವಾಗಿಲ್ಲ.
ದೇಹವು ಕೆಳಸ್ಥರದ ಬಂಡೆಗಳಡಿ ಸಿಲುಕಿರುವ ಸಾಧ್ಯತೆ ಇದೆಯಂದು ಅಲ್ಲಿಂದ ಸಂಪೂರ್ಣ ಮಣ್ಣು ತೆರವುಗೊಳಿಸಿದರೂ ಪ್ರಯೋಜನವಾಗಿಲ್ಲ.
ಇಂದು ಮೇಲ್ಭಾಗದಲ್ಲಿರುವ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಬಂಡೆ ತೆರವಿಗೆ ಕ್ರಷರ್ ಬಳಸಿದ್ದು, ಜೆಸಿಬಿ ಮೊದಲಾದ ಯಂತ್ರೋಪಕರಣ ಬಳಸಲು ಸಾಧ್ಯವಾಗದೇ ಇರುವುದರಿಂದ ರಭಸದಲ್ಲಿ ನೀರು ಹಾಯಿಸಿ ಮಣ್ಣು ಕರಗಿಸುವ ಪ್ರಯತ್ನ ಸಾಗಿದೆ.
ಎರಡು ದಿನಗಳ ಹಿಂದೆ ಕಾರ್ಯಾಚರಣೆಯಲ್ಲಿ ತೊಡಗಿದ್ದವರು ಮಣ್ಣಿನಡಿಯಿಂದ ಕೊಳೆತ ವಾಸನೆ ಬರುತ್ತಿದೆ ಎಂದು ತಿಳಿಸಿದ್ದರೂ ದೇಹ ಪತ್ತೆಯಾಗದಿರುವುದು ಕಳವಳಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಹತ್ತಾರು ಯುವಕರು, ಉಪನಿರೀಕ್ಷಕ ನಂದಕುಮಾರ್ ಎಂ.ಎಂ. ಸ್ಥಳದಲ್ಲಿ ಮೊಕ್ಕಂ ಹೂಡಿ ಪ್ರತಿನಿತ್ಯ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ನೆರವು ನೀಡುತ್ತಿದ್ದಾರೆ.
ಈ ಮಧ್ಯೆ ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಟ್ರೆಕಿಂಗ್, ಮೋಜು ಮಸ್ತಿ ವಿಚಾರವಾಗಿ ದೂರುಗಳು ಬಂದಲ್ಲಿ ಅಂತವರ ವಿರುದ್ದ ಕಠಿಣ ಕ್ರಮಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ.
ಅರಣ್ಯ ಪ್ರದೇಶವನ್ನು ಕೇಂದ್ರೀಕರಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಅಕ್ರಮ ಹೋಂಸ್ಟೇಗಳ ಕುರಿತು ತನಿಖೆ ಆರಂಭಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹೇಳಿದ್ದಾರೆ.
BELTHANGADY
Belthangady: ರಸ್ತೆ ಪಕ್ಕದ ಗೂಡಂಗಡಿಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು..!
ಬೆಳ್ತಂಗಡಿ: ಬೆಳ್ತಂಗಡಿ ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ಕಿಡಿಗೇಡಿಗಳು ರಾತ್ರಿಯ ವೇಳೆ ಧ್ವಂಸಗೊಳಿಸಿದ ಘಟನೆ ಸಂಭವಿಸಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಕೊಕ್ಕಡ ಗ್ರಾಮದ ಮಲ್ಲಿಗೆಮಜಲು ನಿವಾಸಿ ಅಬ್ದುಲ್ ಅಝೀಝ್ ಎಂಬವರು ತಮ್ಮ ಜೀವನೋಪಾಯಕ್ಕಾಗಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಗೂಡಂಗಡಿಯನ್ನು ಹಾಕಿ ವ್ಯಾಪಾರ ನಡೆಸುತ್ತಿದ್ದರು.
ಕಳೆದ ಮೂರು ವರ್ಷಗಳಿಂದ ಈ ಗೂಡಂಗಡಿ ಕಾರ್ಯ ನಿರ್ವಹಿಸುತ್ತಿತ್ತು. ರಸ್ತೆ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಗೂಡಂಗಡಿಯನ್ನು ನಿರ್ಮಿಸಲಾಗಿತ್ತು. ಎಂದಿನಂತೆ ಶುಕ್ರವಾರ ರಾತ್ರಿಯ ವೇಳೆ ಅಂಗಡಿಯನ್ನು ಮುಚ್ಚಿ ಹೋಗಿದ್ದ ಅಬ್ದುಲ್ ಅಝೀಝ್ ಶನಿವಾರ ಬೆಳಗ್ಗೆ ಬಂದು ನೋಡಿದಾಗ ಅಂಗಡಿಯನ್ನು ಧ್ವಂಸಗೊಳಿಸಿರುವುದು ಕಂಡು ಬಂದಿದೆ. ಅಂಗಡಿಯಲ್ಲಿದ್ದ ವಸ್ತುಗಳೆಲ್ಲವನ್ನು ಹೊರಗೆಳೆದು ನಾಶಗೊಳಿಸಲಾಗಿದೆ. ತಂಪು ಪಾನೀಯಗಳ ಬಾಟ್ಲಿಗಳನ್ನು ಒಡೆದು ಹಾಕಲಾಗಿದೆ. ಅಂಗಡಿಯನ್ನು ಬಹುತೇಕ ಧ್ವಂಸಗೊಳಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.
BELTHANGADY
Belthangady: ಕಾರಿನ ಮೇಲೆ ಕಾಡಾನೆ ದಾಳಿ- 6 ಮಂದಿಗೆ ಗಾಯ..!
ಬೆಳ್ತಂಗಡಿ: ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿ ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ ಎಂಬಲ್ಲಿ ನಡೆದಿದ್ದು, ಅಲ್ಟೋ ಕಾರಿನ ಮೇಲೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಆರು ಮಂದಿಗೆ ಗಾಯವಾಗಿದೆ.
ಈ ಘಟನೆ ನೆರಿಯಾದ ಪೋಸ್ಟ್ ಆಫೀಸ್ ಬಳಿ ನಡೆದಿದೆ. ನೆರಿಯಾ ಗ್ರಾಮ ಕಾಡಿನ ಅಂಚಿನಲ್ಲಿರೋ ಕಾರಣ ಕಾಡಾನೆ ಆತಂಕ ಹೆಚ್ಚಾಗಿದೆ. ಕಾಡಾನೆ ದಾಳಿಯಿಂದ ಕಾರಿಗೆ ಹಾನಿಯಾಗಿದ್ದು, ಗಾಯಗೊಂಡವರಿಗೆ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
BELTHANGADY
Belthangady: ಮನೆಯ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರು ಕಳವು- ನಾಲ್ವರು ಅರೆಸ್ಟ್..!
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ಮನೆಯ ಶೆಡ್‌ನಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರನ್ನು ಕಳ್ಳತನ ಮಾಡಿದ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಿನ್ನಿಗೋಳಿಯ ತಾಳಿಪಾಡಿ ಗ್ರಾಮದ ಉಮಾ ಅಜಯ್ ಶೆಟ್ಟಿ(32), ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಗಾಣದಬೆಟ್ಟು ನಿವಾಸಿ ಸೂರಜ್ ಶೆಟ್ಟಿ(23), ಇಳಂತಿಲ ಗ್ರಾಮದ ಎನ್ಮಾಡಿ ನಿವಾಸಿ ಮಂಜುನಾಥ ಪೂಜಾರಿ (30) ಮತ್ತು ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಪರೆಕಲ್ ನಿವಾಸಿ ಕಿಶೋರ್ ಟಿ.(32) ಬಂಧಿತ ಆರೋಪಿಗಳು.
ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ನ. 9 ರಂದು ರಾತ್ರಿ 10 ಗಂಟೆ ವೇಳೆಗೆ ಇಸಾಕ್ ಅವರ ಅಕ್ಕನ ಮಗ ನೌಫಾಲ್ ತನ್ನ ಕಾರ್‌ಶೆಡ್ಡಿನಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರನ್ನು ಗೆಳೆಯ ಸೈಫುದ್ದಿನ್‌ನ ಸ್ನೇಹಿತ ಸೂರಜ್ ಶೆಟ್ಟಿ ಮತ್ತು ಅಜಯ್ ಶೆಟ್ಟಿ ಅವರು ಬಾಡಿಗೆಗೆ ನೀಡುವಂತೆ ಕೇಳಿದ್ದರು. ಆದರೆ ಕಾರನ್ನು ನೀಡದ ಕಾರಣ ಅವರೇ ಕಳವು ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಬೆಳ್ತಂಗಡಿ ಪೊಲೀಸ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಅನಿಲ್ ಕುಮಾರ್ ಡಿ. ಮತ್ತು ಸಬ್ ಇನ್‌ಸ್ಪೆಕ್ಟರ್ ಸಮರ್ಥ ರವೀಂದ್ರ ಗಾಣಿಗೇರ, ಎಎಸ್‌ಐಗಳಾದ ಸಾಮ್ಯುವೆಲ್ ಮತ್ತು ಪೌಲೋಸ್ ಹಾಗೂ ಸಿಬಂದಿ ರಾಜೇಶ್ ಎನ್., ಪ್ರಶಾಂತ್, ಮಂಜುನಾಥ್, ಮಲ್ಲಿಕಾರ್ಜುನ್ ಅವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.