ಕೇರಳ : ಒಮ್ಮೊಮ್ಮೆ ಅದೃಷ್ಟ ಎಂಬುದು ಹೇಗೆಲ್ಲಾ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈಗಂತು ಇಂಟರ್‌ನೆಟ್ ಎಂಬುದು ಶಕ್ತಿಯುತ ಮಾಧ್ಯಮವಾಗಿ ರೂಪುಗೊಂಡಿದೆ.
ಹೀಗಾಗಿ, ಒಂದೇ ಒಂದು ಫೋಟೋ, ವಿಡಿಯೋ ಒಬ್ಬರ ಬಾಳನ್ನೇ ಬದಲಾಯಿಸಬಹುದು, ಇಂಟರ್‌ನೆಟ್ ಸ್ಟಾರ್‌ಗಳಾಗಿ ಮಿಂಚುವಂತೆ ಮಾಡಬಹುದು. ಇದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ರಾಜಸ್ಥಾನದ ಹುಡುಗಿ ಕೇರಳದಲ್ಲಿ ರೂಪದರ್ಶಿಯಾಗಿ ಮಿಂಚುತ್ತಿರುವ ಫೋಟೋವೊಂದು ಈಗ ವೈರಲ್ ಆಗುತ್ತಿದೆ.
ಈ ಹುಡುಗಿ ಈಗ ಸಖತ್ ಖ್ಯಾತಿ ಗಳಿಸಿದ್ದು, ಈಕೆ ಮಾಡೆಲ್ ಆಗಿ ಬದಲಾದ ಕಥೆ ಈಗ ಎಲ್ಲರ ಗಮನ ಸೆಳೆದಿದೆ. ಛಾಯಾಗ್ರಾಹಕರೊಬ್ಬರ ಪ್ರತಿಭೆ, ಸೃಜನಶೀಲತೆ ಈಕೆಯ ಬದುಕನ್ನೇ ಬದಲಾಯಿಸಿದೆ.
ಮೊನ್ನೆ ಮೊನ್ನೆವರೆಗೆ ಜನನಿಬಿಡ ಪ್ರದೇಶಗಳಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ಈ ಹುಡುಗಿ ಈಗ ಫೋಟೋಶೂಟ್‌ನಲ್ಲಿ ಮಾಡೆಲ್ ಆಗಿ ಮಿಂಚಿದ್ದಾರೆ.
ಫೋಟೋಗ್ರಾಫರ್ ಒಬ್ಬರ ಸ್ಟೈಲೀಶ್ ಫೋಟೋಶೂಟ್‌ನಿಂದಾಗಿ ಇಂಟರ್‌ನೆಟ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ರಾಜಸ್ಥಾನಿ ಮೂಲದ ಕುಟುಂಬಕ್ಕೆ ಸೇರಿದ ಕಿಸ್ಬು ಈ ಸ್ಫೂರ್ತಿದಾಯಕ ಕಥೆಯ ನಾಯಕಿ. ಕೇರಳದಲ್ಲಿ ಈಕೆ ಬಲೂನ್ ಮಾರುತ್ತಿದ್ದರು.
ಈಕೆಯನ್ನು ಕೇರಳದ ಅಂದಲೂರು ಕಾವು ಉತ್ಸವದಲ್ಲಿ ಪಯ್ಯನ್ನೂರು ಮೂಲದ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್ ಎಂಬವರು ಗುರುತಿಸಿದ್ದರು.
ಜತೆಗೆ, ಈಕೆಯ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿ ಕಿಸ್ಬು ಮತ್ತು ಆಕೆಯ ತಾಯಿಗೆ ತೋರಿಸಿದ್ದರು. ಈ ಫೋಟೋವನ್ನು ಕಂಡು ಇವರಿಬ್ಬರು ಬಲು ಖುಷಿಪಟ್ಟಿದ್ದರು.
ಜತೆಗೆ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅರ್ಜುನ್ ಈ ಫೋಟೋವನ್ನು ಹಂಚಿಕೊಂಡಿದ್ದರು.
ಇದಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದ್ದಂತೆಯೇ ಅರ್ಜುನ್ ಸ್ನೇಹಿತ ಕೂಡಾ ಇವರ ಫೋಟೋ ಕ್ಲಿಕ್ಕಿಸಿದ್ದು, ಈ ಫೋಟೋಗಳಿಗೂ ಉತ್ತಮ ಪ್ರತಿಕ್ರಿಯೆಯೇ ಸಿಕ್ಕಿತ್ತು.
ಜತೆಗೆ, ಹಲವರು ಮೇಕ್ ಓವರ್ ಫೋಟೋಶೂಟ್‌ಗಾಗಿ ಕಿಸ್ಬು ಅವರ ಕುಟುಂಬವನ್ನು ಸಂಪರ್ಕಿಸಿದ್ದರು.
ಸ್ಟೈಲಿಸ್ಟ್ ರೆಮ್ಯಾ ಸಹಾಯದಿಂದ ಅರ್ಜುನ್ ಕಿಸ್ಬು ಅವರ ಸುಂದರವಾದ ಚಿತ್ರಗಳನ್ನು ಚಿತ್ರೀಕರಿಸಿದ್ದಾರೆ.