ಬೆಂಗಳೂರು: ‘ಕಾಂತಾರ’ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಡಿನ ಜನರ ಸಹಾಯಕ್ಕಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವೀಡಿಯೋ ಹಂಚಿಕೊಂಡು ಅವರು, ಕಾಂತಾರ ಸಿನಿಮಾದ ನಂತರ ಕಾಡಂಚಿನ ಜನರು ಮತ್ತು ಕಾಡಿನ ಜೊತೆ ಸಮಯ ಕಳೆಯುತ್ತಾ, ಅರಣ್ಯ ಇಲಾಖೆಯವರ ಜೊತೆ ಬರೆಯುತ್ತಾ, ಇಲ್ಲಿನ ಜನರ ಸಮಸ್ಯೆಗಳನ್ನು ಕೇಳುತ್ತಾ ಒಂದಷ್ಟು ಜರ್ನಿ ಮಾಡಿದೆ. ಕೃಷಿಕರಿಗೆ ಕಾಡಾನೆ ಸಮಸ್ಯೆ ಇದೆ. ಕಾಡ್ಗಿಚ್ಚಿನ ಸಂದರ್ಭದಲ್ಲಿ ವಾಚರ್ಗಳು ಸಾಕಷ್ಟು ರಿಸ್ಕ್ ತೆಗೆದುಕೊಂಡು ಕಾಡನ್ನು ಉಳಿಸುತ್ತಿದ್ದಾರೆ.
ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರ ಜೊತೆಗೆ ಒಂದಷ್ಟು ಚರ್ಚೆ ಮಾಡಿದ್ದೆ’. ‘ಆಗಬೇಕಾದ ಕೆಲಸ ಸಾಕಷ್ಟು ಇವೆ. ಅರಣ್ಯ ಇಲಾಖೆಯಲ್ಲಿ ಉದ್ಯೋಗ ಭರ್ತಿ ಆಗಬೇಕು. ವಾಚರ್ಗಳ ನೇಮಕಾತಿ ಆಗಬೇಕು. ಆ ರೀತಿ 20 ಅಂಶಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿಗಳಿಗೆ ನೀಡಿದ್ದೇವೆ. ಅವರು ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಕೂಡ ಇತ್ತೀಚಿನ ದಿನಗಳಲ್ಲಿ ಕಾಡಿಗೆ ಹೋಗಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರುವಂತೆ ಆದೇಶ ನೀಡುವುದಾಗಿ ಅವರು ತಿಳಿಸಿದ್ದಾರೆ. ಇಂಥ ಮುಖ್ಯಮಂತ್ರಿಗಳನ್ನು ಪಡೆದಿದ್ದಕ್ಕೆ ನಾವೆಲ್ಲ ಧನ್ಯ. ಈ ರೀತಿಯ ಚಿಕ್ಕ ಸಮಸ್ಯೆಗಳನ್ನೂ ಕೂಡ ಗಮನಿಸಿ ಅದಕ್ಕೆ ಪರಿಹಾರ ಸಿಗುವ ರೀತಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.