ಉಡುಪಿ: ಬಿಜೆಪಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿದ್ದ ಆರೋಪಿಗೆ ಎರಡನೇ ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಿದೆ.
ಇತ್ತೀಚೆಗೆ ಯಶ್‌ಪಾಲ್ ಸುವರ್ಣ ಅವರನ್ನು ಹತ್ಯೆ ಮಾಡಿದವರಿಗೆ 10 ಲಕ್ಷ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿ ಬೆದರಿಕೆ ಒಡ್ಡಿದ್ದ ವಿಚಾರವಾಗಿ
ಕಾಪು ವಿಧಾನಸಭಾ ಕ್ಷೇತ್ರದ ಯುವಮೋರ್ಚಾದ ಅಧ್ಯಕ್ಷ ಉದ್ಯಾವರದ ಸಚಿನ್ ಸುವರ್ಣ ಈ ಫೇಸ್‌ಬುಕ್ ಪೇಜ್ ವಿರುದ್ಧ ಜೂ.8 ರಂದು ಕಾಪು ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಕಾಪು ಪೊಲೀಸರ ವಿಶೇಷ ತಂಡ ಜೂ. 18ರಂದು ಆರೋಪಿಯನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಆರೋಪಿಯ ವಿರುದ್ಧ ದಾಖಲಾಗಿರುವ ಪ್ರಕರಣ ಕಾನೂನಿನ ಪ್ರಕಾರ ಮಾನ್ಯತೆಯನ್ನೇ ಪಡೆಯುತ್ತಿಲ್ಲ. ಕಾಪು ಪೊಲೀಸರು ಅಧಿಕಾರ ದುರುಪಯೋಗ ಮಾಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಆರೋಪಿ ಪರ ವಕೀಲರು ವಾದಿಸಿ ಜಾಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದರು.
ಇದನ್ನು ಮಾನ್ಯ ಮಾಡಿದ ನ್ಯಾಯಾಲಯ ತಲಾ 2 ಜಾಮೀನು ಮತ್ತು ರೂ.50 ಸಾವಿರ ಬಾಂಡ್‌ನ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಆರೋಪಿ ಪರವಾಗಿ ಯುವ ವಕೀಲ ಅಸದುಲ್ಲಾ ಕಟಪಾಡಿ ವಾದಿಸಿದ್ದರು.