ಆರೋಪಿಗಳ ಕಾರು ಮಾರಾಟ ಮಾಡಿದ ಆರೋಪ: ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು..!
ಮಂಗಳೂರು: ಆರೋಪಿಗಳ ಜಾಗ್ವಾರ್ ಕಾರನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್ಐ ಆಗಿರುವ, ಮಂಗಳೂರಿನಲ್ಲಿ ಹಿಂದೆ ಸಿಸಿಬಿ ಎಸ್ಐ ಆಗಿದ್ದ ಕಬ್ಬಾಳ್ ರಾಜ್ ಮತ್ತು ಮಂಗಳೂರಿನ ನಾರ್ಕೊಟಿಕ್ ಠಾಣಾ ಇನ್ಸ್ಪೆಕ್ಟರ್ ರಾಮಕೃಷ್ಣ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳಾಗಿದ್ದಾರೆ.
ಪ್ರಕರಣದಲ್ಲಿ ಕಬ್ಬಾಳ್ ರಾಜ್ ನೇರವಾಗಿ ಶಾಮೀಲಾದ ಆರೋಪದಲ್ಲಿದ್ದರೆ, ರಾಮಕೃಷ್ಣ ಅವರು ಪ್ರಕರಣ ಗಂಭೀರವಾಗಿ ತನಿಖೆ ಮಾಡಿ ಮೇಲಾಧಿಕಾರಿಗಳಿಗೆ ವರದಿ ನೀಡದ್ದ ಆರೋಪದ ಎದುರಿಸುತ್ತಿದ್ದಾರೆ.
ಕಬ್ಬಾಳ್ ರಾಜ್ ಅವರು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಪದಕ ಪಡೆದುಕೊಂಡಿದ್ದರು.
ಮಂಗಳೂರಿನಲ್ಲಿ ನಡೆದ ಬಿಲ್ಡರ್ ಗಳ ವಂಚನೆ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ದುಬಾರಿ ಜಾಗ್ವಾರ್ ಕಾರನ್ನು, ಮಂಗಳೂರು ಸಿಸಿಬಿಯಲ್ಲಿ ಎಸ್ಐ ಆಗಿದ್ದ ಕಬ್ಬಾಳ್ ರಾಜ್ ಮತ್ತು ಇತರರು ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ಬಳಿಕ ಎಡಿಜಿಪಿ ಪ್ರತಾಪ್ ರೆಡ್ಡಿ, ಮಂಗಳೂರು ಪೊಲೀಸ್ ಕಮೀಷನರ್ ಅವರಲ್ಲಿ ತನಿಖೆ ಮಾಡಿ ವರದಿ ನೀಡಲು ಸೂಚಿಸಿದ್ದರು.
ಅವರು ನೀಡಿದ ವರದಿ ಬಳಿಕಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು.
ಸಿಐಡಿ ಅಧಿಕಾರಿಗಳು ನೀಡಿದ ವರದಿಯ ಹಿನ್ನೆಲೆಯಲ್ಲಿ ಪ್ರಸ್ತುತ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ..?
ರಮ್ಯಾ ಎಂಬ ಮಹಿಳೆ ನಾಲ್ಕು ಲಕ್ಷ ರೂಪಾಯಿ ವಂಚನೆಯಾಗಿರುವ ಕುರಿತು ಕೇರಳ ಮೂಲದ ಕನ್ ಸ್ಟ್ರಕ್ಷನ್ ಕಂಪೆನಿ ವಿರುದ್ದ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆಗೆ ಇಳಿದ ಸಿಸಿಬಿ ಪಿಎಸ್ ಐ ಕಬ್ಬಾಳ್ ರಾಜ್ ನೇತೃತ್ವದ 9 ಮಂದಿ ಅಧಿಕಾರಿಗಳ ತಂಡ ಆರೋಪಿಗಳಿಗೆ ಸೇರಿದ ಬ್ಯಾಂಕ್ ಖಾತೆಯನ್ನು ಸೀಝ್ ಮಾಡಿತ್ತು.

ನಂತರದಲ್ಲಿ ಆರೋಪಿಗಳಿಗೆ ಸೇರಿದ ಪೋರ್ಷ್ ಕಾರನ್ನು ಬೆಳ್ತಂಗಡಿ, ಬಿಎಂಡಬ್ಲ್ಯೂ ಕಾರನ್ನು ಕಂಕನಾಡಿ ಹಾಗೂ ಜಗ್ವಾರ್ ಕಾರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿತ್ತು.
ಆದರೆ ಕಾರನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳನ್ನು ಕಾರಿನ ಕೀಯನ್ನು ತನಿಖಾಧಿಕಾರಿ ರಾಮಕೃಷ್ಣ ಅವರ ಮುಂದೆ ಹಾಜರು ಪಡಿಸಿರಲಿಲ್ಲ. ಅಲ್ಲದೇ ಐಶಾರಾಮಿ ಕಾರನ್ನು ಕಳೆದ ಅಕ್ಟೊಬರ್ ವರೆಗೂ ಸ್ವಂತಃಕ್ಕೆ ಬಳಕೆ ಮಾಡಿಕೊಂಡಿದ್ದರು.
ಅಷ್ಟೇ ಅಲ್ಲದೇ ಸುಮಾರು 80 ಲಕ್ಷ ಬೆಲೆ ಬಾಳುವ ಜಾಗ್ವಾರ್ ಕಾರನ್ನು ಬೆಂಗಳೂರು ಮೂಲದ ತೇಜ್ ಬಹದ್ದೂರ್ ಸಿಂಗ್ ಎಂಬವರಿಗೆ ಸುಮಾರು 18 ಲಕ್ಷ ರೂಪಾಯಿಗೆ ಮಧ್ಯವರ್ತಿ ದಿವ್ಯದರ್ಶನ್ ಎಂಬಾತನ ಮೂಲಕ ಮಾರಾಟ ಮಾಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರು ನಗರ ವ್ಯಾಪ್ತಿಯ ಕೇಸುಗಳ ಕಡತ ಪರಿಶೀಲನೆಯ ವೇಳೆಯಲ್ಲಿ ಈ ವಿಷಯ ಬಯಲಿಗೆ ಬಂದಿತ್ತು.
ಕಾರುಗಳ ಬಗ್ಗೆ ಮಾಹಿತಿ ಕೇಳಿದಾಗ ಪೋರ್ಷ್ ಹಾಗು ಬಿಎಂಡಬ್ಲ್ಯು ಕಾರು ಮಂಗಳೂರಲ್ಲಿ ಪತ್ತೆಯಾಗಿತ್ತು. ಆದರೆ ಜಾಗ್ವಾರ್ ಕಾರು ನಾಪತ್ತೆಯಾಗಿದ್ದು, ಈ ಬಗ್ಗೆ ತನಿಖೆಗೆ ಮುಂದಾಗುತ್ತಿದ್ದಂತೆಯೇ ಕಾರು ಮಾರಾಟ ವಾಗಿರುವುದು ಬೆಳಕಿಗೆ ಬಂದಿತ್ತು.
ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ತನಿಖಾಧಿಕಾರಿ ರಾಮಕೃಷ್ಣ, ಪಿಎಸ್ಐ ಕಬ್ಬಾಳ್ ರಾಜ್ ಸೇರಿದಂತೆ ನಾಲ್ವರು ಪೊಲೀಸರು ಹಾಗೂ ಮಧ್ಯವರ್ತಿಯ ವಿರುದ್ದ ವರದಿ ಸಲ್ಲಿಕೆಯಾಗಿದ್ದು, ಸಿಐಡಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.