Connect with us

FILM

ಅತ್ತ ಜನ ಸೇವೆ…ಇತ್ತ ಕಮಲಿ(ಭಾವನಾ) ಹಿಂದೆ….’ಲಕ್ಷ್ಮೀ ನಿವಾಸ’ ದಲ್ಲಿ ಮೋಡಿ ಮಾಡುತ್ತಿದ್ದಾರೆ ಸಿದ್ದೇಗೌಡ್ರು; ಇವರ ಬಗ್ಗೆ ನಿಮಗೆ ಗೊತ್ತಾ!?

Published

on

ಸದ್ಯ ಕಿರುತೆರೆಯಲ್ಲಿ ‘ಲಕ್ಷ್ಮೀ ನಿವಾಸ’ ಬಹಳ ಸದ್ದು ಮಾಡುತ್ತಿದೆ. ಧಾರಾವಾಹಿಯ ಕಥಾಹಂದರ ದಿನದಿಂದ ದಿನಕ್ಕೆ ಕೌತುಕತೆಯನ್ನು ಹುಟ್ಟಿಸುತ್ತಾ ಸಾಗುತ್ತಿದೆ. ಹಾಗಾಗಿ ಸಹಜವಾಗಿ ಲಕ್ಷ್ಮೀ ನಿವಾಸದತ್ತ ಎಲ್ಲರೂ ಚಿತ್ತ ನೆಟ್ಟಿದ್ದಾರೆ.

ಈ ಧಾರಾವಾಹಿಯ ಪಾತ್ರಗಳನ್ನು ಎಲ್ಲಾ ಕಲಾವಿದರು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗವನ್ನು ಅವರೆಲ್ಲ ಹೊಂದಿದ್ದಾರೆ. ಅವರಲ್ಲಿ ಸಿದ್ದೇಗೌಡ್ರೂ ಒಬ್ಬರು.

ಅಲ್ಲಕನ್ಲಾ…ಎನ್ನುತ್ತಲೇ ಫೇಮಸ್ ಡಿಜೆ :

ಗ್ರಾಮೀಣ ಭಾಷೆಯ ಸೊಗಡು ಸಿದ್ಧೇಗೌಡ್ರ ಮಾತಲ್ಲಿ ಕೇಳುವುದು ಚೆಂದ. ಪಟ ಪಟ ಮಾತ್, ಫೈಟ್, ತರಲೆ, ತರಾಟೆ ಎಲ್ಲದರಲ್ಲೂ ಗೌಡ್ರು ಹವಾ ಮಾಡಗವ್ರೇ ಸ್ವಾಮಿ…ಹೌದು! ಸಿದ್ದೇಗೌಡ್ರು ಪಾತ್ರವೇ ಅಂತದ್ದು, ಅವರು ರಾಜಕಾರಣಿಯ ಪುತ್ರ. ಮಗ ತನ್ನದೇ ಹಾದಿಯಲ್ಲಿ ಸಾಗಬೇಕೆಂಬ ಹೆಬ್ಬಯಕೆ ತಂದೆಯದ್ದು. ಅಂತೆಯೇ ಜನ ಸೇವೆಯೇ ಈ ನಾಯಕನ ಆಸಕ್ತಿ. ಸದ್ಯ ಲವರ್ ಬಾಯ್ ಕೂಡಾ. ಉತ್ತಮ ನಟನಾ ಕೌಶಲ್ಯದಿಂದ ಮೆರೆಯುತ್ತಿರುವ ಗೌಡ್ರು ನಿಜ ಜೀವನದಲ್ಲಿ ‘ಡಿಜೆ’ ಅಂತಲೇ ಖ್ಯಾತಿಗಳಿಸಿದ್ದಾರೆ.

ಡಿ ಜೆ ಅಲಿಯಾಸ್ ಧನಂಜಯ:

ಬಣ್ಣದ ಲೋಕದಲ್ಲಿ ಧನಂಜಯ ಹೆಸರು ಫೇಮಸ್…ಅವ್ರೇ ಡಾಲಿ ಧನಂಜಯ್. ಕಿರುತೆರೆಯಲ್ಲಿ ಈ ಗೌಡ್ರು ಪ್ರಸಿದ್ಧರಾಗುತ್ತಿದ್ದಾರೆ. ಅವರ ನಿಜ ನಾಮಧೇಯ ಧನಂಜಯ್. ಇವ್ರನ್ನ ಡಿಜೆ ಅಂತ ಕರೆಯುತ್ತಾರಂತೆ ಎಲ್ಲರೂ. ಅಂದ್ಹಾಗೆ ಇವರು ಡ್ಯಾನ್ಸರ್ ಕೂಡಾ ಹೌದು! ಡಬ್ಬಿಂಗ್ ಆರ್ಟಿಸ್ಟ್ ಕೂಡ ಆಗಿ ಕೆಲಸ ಮಾಡಿದ್ದಾರೆ.

ಮೊದಲ ಧಾರಾವಾಹಿ:

ಅಂದಹಾಗೆ, ಧನಂಜಯ್ ಗಿದು ಮೊದಲ ಧಾರಾವಾಹಿ. ಹಾಗಂತ ಇವರಿಗೆ ಬಣ್ಣದ ಲೋಕ ಹೊಸತಲ್ಲ. ಈಗಾಗಲೇ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಹಾಗೇ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. ‘ಜಿಲ್ ಜಿಲ್’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ‘ವಾಸಂತಿ ನಲಿದಾಗ’ ಸಿನಿಮಾದಲ್ಲಿ ನಮ್ ಗೌಡ್ರು ವಿಲನ್ ಆಗಿ ಮಿಂಚಿದ್ದಾರೆ. ‘ಥಗ್ಸ್ ಆಫ್ ರಾಮಗಡ’, ‘ಖಾಸಗಿ ಪುಟಗಳು’ ಸಿನಿಮಾಗಳಲ್ಲಿ ಪಾತ್ರವಾಗಿದ್ದಾರೆ.

ಕಮ್ಲಿ ಹಿಂದೆ ಗೌಡ್ರು :


ಸದ್ಯ ‘ಲಕ್ಷ್ಮೀ ನಿವಾಸ’ದಲ್ಲಿ ‘ಕಮ್ಲಿ’ ಎನ್ನುತ್ತಾ ಭಾವನಾ(ದಿಶಾ ಮದನ್) ಹಿಂದೆ ಬಿದ್ದಿದ್ದಾರೆ. ಇವ್ರ ನಟನೆಗೆ ಹೆಂಗಳೆಯರು ಫಿದಾ ಆಗಿರೋದು ಸುಳ್ಳಲ್ಲ. ಈಗಾಗಲೇ ಫ್ಯಾನ್ ಪೇಜ್ ಗಳೂ ಹುಟ್ಟಿಕೊಂಡಿವೆ. ಇನ್ನು, ಮದುವೆ ಬೇಡವೆಂದುಕೊಂಡಿರುವ, ಸಮಯದ ಕೈಗೊಂಬೆಯಾಗಿರುವ ಭಾವನಾ ಮನ ಗೆದ್ದು ಗೌಡ್ರು ಮದುವೆಯಾಗೋದು ಯಾವಾಗ ಎಂದು ಪ್ರೇಕ್ಷಕ ಮಹಾಶಯರು ಕಾಯುತ್ತಿದ್ದಾರೆ.

DAKSHINA KANNADA

ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ‘ಬಿಗ್‌ ಬಾಸ್’ ರೂಪೇಶ್ ಶೆಟ್ಟಿ

Published

on

ಮಂಗಳೂರು : ಬಿಗ್‌ಬಾಸ್ ಮುಖೇನ ರಾಜ್ಯದಲ್ಲಿ ಹೆಸರು ಪಡೆದಿರುವ ಕರಾವಳಿಯಲ್ಲಿ ಸ್ಟಾರ್ ರೂಪೇಶ್ ಶೆಟ್ಟಿ. ತುಳುನಾಡಿನ ಹುಲಿವೇಷ ಕುಣಿತವನ್ನು ಬಿಗ್‌ಬಾಸ್ ನಲ್ಲಿ ಪರಿಚಯಿಸಿದ್ದು ಅಲ್ಲದೆ ವೇಷದಾರಿಗಳ ಜೊತೆ ಹೆಜ್ಜೆ ಕೂಡಾ ಹಾಕಿದ್ದಾರೆ.  ಅಲ್ಲದೇ ರೂಪೇಶ್ ಶೆಟ್ಟಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ವಿನ್ನರ್ ಕೂಡ ಹೌದು. ತುಳು ಸಿನಿಮಾದಲ್ಲಿ ಮಿಂಚಿದ್ದ ರೂಪೇಶ್ ಶೆಟ್ಟಿಗೆ ಬಿಗ್ ಬಾಸ್ ಬಳಿಕ ಕನ್ನಡ ಚಿತ್ರರಂಗದಲ್ಲೂ ಅವಕಾಶ ಸಿಕ್ಕಿತ್ತು. ಇದೀಗ ತಮಿಳು ಚಿತ್ರರಂಗಕ್ಕೂ ರೂಪೇಶ್ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.

ಅಮೃತ ಸಾರಥಿ ಎಂಬುವವರು ನಿರ್ದೇಶನ ಮಾಡುತ್ತಿರುವ ತಮಿಳು ಚಿತ್ರದಲ್ಲಿ ರೂಪೇಶ್ ಶೆಟ್ಟಿ ನಟಿಸುತ್ತಿದ್ದಾರೆ. ಯೋಗಿ ಬಾಬು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಪ್ರಮೋದ್ ಶೆಟ್ಟಿ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋದು ವಿಶೇಷ. ‘ಸನ್ನಿಧಾನಂ PO’ ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ರೂಪೇಶ್ ಶೆಟ್ಟಿ, “ನನ್ನ ಮೊದಲ ತಮಿಳು ಚಿತ್ರ ಸನ್ನಿಧಾನಮ್ PO ಇದರ ಶೂಟಿಂಗ್ ನಿಮ್ಮೆಲ್ಲರ ಆಶೀರ್ವಾದದಿಂದ ಭರದಿಂದ ಸಾಗುತ್ತಿದೆ. ಯೋಗಿ ಬಾಬು ಅವರ ಜತೆ ನಟಿಸುವುದೇ ನನ್ನ ಪಾಲಿನ ಅದೃಷ್ಟ. ನನ್ನ ಸಿನಿ ಪಯಣ ಈ ರೀತಿಯಾಗಿ ಸಾಗಲು ನೀವೇ ಮೊದಲ ಕಾರಣ. ನಿಮ್ಮ ಪ್ರೀತಿ ಪ್ರೋತ್ಸಾಹ ಎಂದೂ ಹೀಗೆ ಇರಲಿ. ದೇವರಿಗೆ ಧನ್ಯವಾದಗಳು” ಎಂದು ಅವರು ಬರೆದುಕೊಂಡಿದ್ದಾರೆ.

2023ರ ನವೆಂಬರ್ ತಿಂಗಳಲ್ಲಿ ಸಿನಿಮಾ ಘೋಷಿಸಲಾಗಿದೆ. ಈ ಚಿತ್ರದ ಮೂರನೇ ಹಂತದ ಶೂಟಿಂಗ್ ಈಗ ನಡೆಯುತ್ತಿದೆ. ಈ ಸಿನಿಮಾ ರಿಲೀಸ್ ದಿನಾಂಕವನ್ನು ರೂಪೇಶ್ ಶೆಟ್ಟಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ರೂಪೇಶ್ ಶೆಟ್ಟಿ ಅವರು ತುಳು ಸಿನಿಮಾಗಳಿಂದ ಬಣ್ಣದ ಬದುಕು ಆರಂಭಿಸಿದರು. 2015ರಲ್ಲಿ ರಿಲೀಸ್ ಆದ ‘ಐಸ್​ ಕ್ರೀಮ್’ ಹೆಸರಿನ ತುಳು ಚಿತ್ರದ ಮೂಲಕ ಅವರು ಹೀರೋ ಆದರು. 2023ರಲ್ಲಿ ಅವರ ನಟನೆಯ ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ರಿಲೀಸ್ ಆಯಿತು. ಅವರು ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ ಹಾಗೂ ‘ಬಿಗ್ ಬಾಸ್ ಕನ್ನಡ ಸೀಸನ್ 9’ ವಿನ್ನರ್ ಆಗಿದ್ದಾರೆ.

Continue Reading

FILM

ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ‘ಸ್ಯಾಂಡಲ್ ವುಡ್ ಸಲಗ’

Published

on

ಬೈಂದೂರು : ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ರಾಜಕೀಯ ಮುಖಂಡರು, ನಟ ನಟಿಯರು ಭೇಟಿ ನೀಡುತ್ತಿರುತ್ತಾರೆ. ಇದೀಗ ದುನಿಯಾ ವಿಜಯ್ ಅವರು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಶ್ರೀ ಮೂಕಾಂಬಿಕೆ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ತಮ್ಮ ಸ್ನೇಹಿತರೊಂದಿಗೆ ದುನಿಯಾ ವಿಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭ ಅವರ ಅಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಂಡರು.

ಕಾಲ್ನಡಿಗೆಯಲ್ಲಿ ನಂಜನಗೂಡು ಕ್ಷೇತ್ರಕ್ಕೆ ಹೋಗಿದ್ದ ನಟ:

ದುನಿಯಾ ವಿಜಿ ಇತ್ತೀಚೆಗೆ ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ಹೊರಟು ನಂಜನಗೂಡಿನ ನಂಜುಂಡೇಶ್ವರ ದರ್ಶನ ಪಡೆದಿದ್ದರು. ಸತತ ಐದು ದಿನಗಳ ಕಾಲ ತಮ್ಮ ಸಂಗಡಿಗರ ಜೊತೆ ನಡೆದುಕೊಂಡೇ ನಂಜನಗೂಡು ತಲುಪಿದ್ದರು. ಹಗಲು ರಾತ್ರಿ ಲೆಕ್ಕಿಸದೇ ಪಾದಯಾತ್ರೆ ಮಾಡಿದ್ದರು.

ಸಿನಿಮಾಗಳಲ್ಲಿ ಬ್ಯುಸಿ :

ದುನಿಯಾ ವಿಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ನಟನೆಯ ಜೊತೆಗೆ ನಿರ್ದೇಶಕನ ಕ್ಯಾಪ್ ಕೂಡ ಅವರು ಹಾಕಿದ್ದಾರೆ.’ಸಲಗ’ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದ ಅವರು, ‘ಭೀಮ’ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ನಿಖಿಲ್ ಕುಮಾರ್ ಸಿನಿಮಾದಲ್ಲೂ ದುನಿಯಾ ವಿಜಯ್ ನಟಿಸುತ್ತಿದ್ದಾರೆ.

ಇದನ್ನೂ ಓದಿ : ಬಿಗ್ ಬಾಸ್ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ನಮ್ರತಾ ಗೌಡ!

ಚಿತ್ರರಂಗಕ್ಕೆ ವಿಜಿ ಮಗಳು ಎಂಟ್ರಿ :

ದುನಿಯಾ ವಿಜಯ್ ತಮ್ಮ ಮಗ ಸಾಮ್ರಾಟ್ ನನ್ನು ಈಗಾಗಲೇ ಭೀಮ ಚಿತ್ರದ ಮೂಲಕ ಪರಿಚಯಿಸುವ ತಯಾರಿಯಲ್ಲಿದ್ದಾರೆ. ಇದೀಗ ಮಗಳನ್ನೂ ಚಿತ್ರರಂಗಕ್ಕೆ ಕರೆತರುತ್ತಿದ್ದಾರೆ. ಕಾಟೇರ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಹೊಸ ಸಿನಿಮಾದಲ್ಲಿ ತಂದೆ – ಮಗಳು ಇಬ್ಬರೂ ಕಾಣಿಸಿಕೊಳ್ಳುತ್ತಿದ್ದಾರೆ.


‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಚಿತ್ರದಲ್ಲಿ ಜೊತೆಯಾಗಿದ್ದ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಮತ್ತೆ ಈ ಚಿತ್ರದ ಮೂಲಕ ಒಂದಾಗುತ್ತಿದ್ದಾರೆ. ಇದರಲ್ಲಿ ವಿಜಿ ಮಗಳು ಮೋನಿಕಾ/ರಿತನ್ಯಾ ನಟಿಸುತ್ತಿದ್ದಾರೆ. ಇದು ದುನಿಯಾ ವಿಜಯ್ ಅವರ 29 ನೇ ಸಿನಿಮಾ.

Continue Reading

FILM

ಬಿಗ್ ಬಾಸ್ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ನಮ್ರತಾ ಗೌಡ!

Published

on

ಬೆಂಗಳೂರು : ಬಿಗ್ ಬಾಸ್ ಕನ್ನಡ ಕಿರುತೆರೆಯಲ್ಲಿ ಬಹಳ ಸದ್ದು ಮಾಡುವ ಅತಿದೊಡ್ಡ ರಿಯಾಲಿಟಿ ಶೋ. ಹಿರಿತೆರೆ, ಕಿರುತೆರೆ, ಸಾಮಾನ್ಯ ವ್ಯಕ್ತಿ, ಸಾಧಕ ಶೋನಲ್ಲಿ ಭಾಗಿಯಾಗ್ತಾನೆ. ಈ ಶೋ ಯಾವಾಗಲೂ ಸದ್ದು ಮಾಡುತ್ತಿರುತ್ತದೆ. ಸ್ಪರ್ಧಿಗಳೂ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ, ನಟಿ ನಮ್ರತಾ ಗೌಡ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.

ಪ್ಲ್ಯಾನ್ ಪ್ರಕಾರ ನಡೆಯುತ್ತಿಲ್ಲ:

ನಮ್ರತಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ. ನಾಗಿಣಿ ಎಂದಾಕ್ಷಣ ತಟ್ಟನೆ ನೆನಪಾಗುವ ಹೆಸರು. ಕನ್ನಡ ಕಿರುತೆರೆಯಲ್ಲಿ ಖ್ಯಾತರಾದವರು. ನಾಗಿಣಿ ಮುಗಿಯುತ್ತಿದ್ದಂತೆ ಬಿಗ್ ಬಾಸ್ ನತ್ತ ಲಗ್ಗೆ ಇಟ್ಟರು. ಬಿಗ್ ಬಾಸ್​ ನಲ್ಲಿ ಇದ್ದಾಗ ವಿನಯ್ ಗೌಡ, ನಮ್ರತಾ, ರಕ್ಷಕ್ ಬುಲೆಟ್, ಈಶಾನಿ, ಮೈಕಲ್ ಅಜಯ್ ಜೊತೆಯಾಗಿ ಇರುತ್ತಿದ್ದರು.

ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಹೊರಗೆ ಪ್ರತಿ ವಾರ ಸಿಗೋಣ, ಪಾರ್ಟಿ ಮಾಡೋಣ ಎಂದೆಲ್ಲ ಪ್ಲ್ಯಾನ್ ಮಾಡಿದ್ದರು. ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಆರಂಭದಲ್ಲಿ ಕೆಲವು ಬಾರಿ ಇವರು ಭೇಟಿ ಆಗಿದ್ದು ಇದೆ. ಈಗ ಆ ರೀತಿಯ ಭೇಟಿಗಳು ನಿರಂತರವಾಗಿ ನಡೆಯುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಅತ್ತೆ – ಅಳಿಯ ಲವ್; ಹೆಂಡತಿಯನ್ನೇ ತ್ಯಾಗ ಮಾಡಿದ ಪತಿ! ಏನಿದು ಕಥೆ?

ದಿನವೂ ಸಿಗಬೇಕು ಇಲ್ಲವಾದರೆ ವಾರಕ್ಕೆ ಒಮ್ಮೆ ಆದರೂ ಸಿಗಬೇಕು ಎಂದು ಬಿಗ್ ಬಾಸ್​​ನಲ್ಲಿ ಪ್ಲ್ಯಾನ್ ಮಾಡಿದ್ದೀವಿ. ಆದರೆ, ಅದೆಲ್ಲ ನಡೆಯುತ್ತಿಲ್ಲ. ನನ್ನ ಸರ್ಕಲ್​ನಲ್ಲಿ ಇರುವವರನ್ನು ನನ್ನ ಬರ್ತ್ ಡೇ ಕರೆದಿದ್ದೆ. ನಾನು ರೆಗ್ಯುಲರ್ ಆಗಿ ಯಾರ ಜೊತೆಗೂ ಕಂಟ್ಯಾಕ್ಟ್ ಇಲ್ಲ. ವಿನಯ್, ಈಶಾನಿ ಜೊತೆ ಆಗಾಗ ಕಾಲ್​ನಲ್ಲಿ ಮಾತನಾಡುತ್ತೇನೆ. ರಕ್ಷಕ್, ಕಾರ್ತಿಕ್ ಹಾಗೂ ಇತರರು ಈವೆಂಟ್​ನಲ್ಲಿ ಮಾತಾಡ್ತೀನಿ ಎಂದಿದ್ದಾರೆ.

ಕಾರು ಖರೀದಿಸಿದ ನಟಿ : 

ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಮ್ರತಾ ಗೌಡ, ಅಂದು ನಮ್ರತಾ ಗೌಡ ಅವರು ಹೊಸ ಕಾರೊಂದನ್ನು ಖರೀದಿಸಿದ್ದರು. ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರನ್ನು ನಮ್ರತಾ ಗೌಡ ಖರೀದಿಸಿದ್ದರು. ಈ ಕಾರಿನ ಬೆಲೆ 8 ರಿಂದ 9 ಲಕ್ಷ ರೂ. ಆಗಿದೆ. ಕಾರು ಕೊಂಡ ಸಂಭ್ರಮವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅವರ ಅಭಿಮಾನಿಗಳು ಶುಭಹಾರೈಸಿದ್ದರು.

Continue Reading

LATEST NEWS

Trending