ಇಂದು ಒಂದೇ ದಿನ 215 ಮಂದಿ ಗುಣಮುಖರಾಗಿ ಡಿಸ್ಚಾರ್ಜ್…
ಉಡುಪಿ: ಉಡಪಿ ಜಿಲ್ಲೆಯಲ್ಲಿ ಇಂದು 45 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 947ಕ್ಕೆ ಏರಿಕೆಯಾಗಿದೆ.
ಕಳೆದೆರಡು ವಾರಗಳಲ್ಲಿ ಭಾರಿ ಸಂಖ್ಯೆಯಲ್ಲಿ ಮೇಲೇರಿದ್ದ ಕೊರೊನಾ ಸೋಂಕು ಸದ್ಯಕ್ಕೆ ತಗ್ಗುತ್ತಾ ಬರುತ್ತಿದೆ.
ಭಾನುವಾರ ಜಿಲ್ಲೆಯಲ್ಲಿ 13 ಜನರಿಗೆ ಕೋವಿಡ್ 19 ಸೋಂಕು ದೃಢವಾಗಿತ್ತು. ಆದರೆ ಇಂದು ಮತ್ತೆ 45 ಜನರಿಗೆ ಕಾಣಿಸಿಕೊಂಡಿದೆ.
ಮಹಾರಾಷ್ಟ್ರ ಸೇರಿದಂತೆ ಅನ್ಯರಾಜ್ಯಗಳಿಂದ ಬಂದು ಕ್ವಾರಂಟೈನ್ ನಲ್ಲಿದ್ದ ಜನರಿಗೆ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿತ್ತು.
ಉಡುಪಿ ಜಿಲ್ಲೆಗೆ ಎಂಟು ಸಾವಿರಕ್ಕೂ ಹೆಚ್ಚು ಮಂದಿ ಮಹಾರಾಷ್ಟ್ರದಿಂದ ಆಗಮಿಸಿದ್ದರು. ಇವರಲ್ಲಿ ಬಹುತೇಕ ಗಂಟಲು ದ್ರವ ಪರೀಕ್ಷೆ ವರದಿ ಜಿಲ್ಲಾಡಳಿತದ ಕೈ ಸೇರಿದೆ.
ಹೀಗಾಗಿ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ ಎನ್ನಲಾಗಿದೆ.
ಜಿಲ್ಲೆಯ ಇಂದಿನ ಎಲ್ಲಾ 45 ಪ್ರಕರಣಗಳು ಕೂಡಾ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದವರಾಗಿದ್ಧಾರೆ. ಒಂದು ವರ್ಷದ ಹೆಣ್ಣು ಮಗು ಸೇರಿದಂತೆ ಮೂವರು ಮಕ್ಕಳಿಗೆ ಕೋವಿಡ್ ಸೋಂಕು ತಾಗಿದೆ.
ಜಿಲ್ಲೆಯಲ್ಲಿ ಇಂದಿನ 45 ಸೋಂಕಿತರ ಕಾರಣದಿಂದ ಒಟ್ಟು ಸೋಂಕಿತರ ಸಂಖ್ಯೆ 947ಕ್ಕೆ ಏರಿಕೆಯಾಗಿದೆ.
ಸೋಂಕಿತರ ಸಂಖ್ಯೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ.
ಇನ್ನೊಂದೆಡೆ ಒಂದು ಸಂತೋಷದ ಸುದ್ದಿ ಅಂದರೆ ಇಂದು ಒಂದೇ ದಿನ 215 ಮಂದಿ ಕೊರೊನಾ ಸೊಂಕಿನಿಂದ ಗುಣಮುರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 318ಕ್ಕೆ ಏರಿಕೆಯಾಗಿದೆ.
ಉಡುಪಿಯಲ್ಲಿ ಸದ್ಯ 628 ಸಕ್ರಿಯ ಕೊರೊನಾ ಪ್ರಕರಣಗಳಿದ್ದು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.