ಉಳ್ಳಾಲ: ಸಮುದ್ರಕ್ಕೆ ಸ್ನಾನಕ್ಕಿಳಿದ ಉಳ್ಳಾಲದ ಇಬ್ಬರು ಯುವಕರು ಓಮನ್‌ನಲ್ಲಿ ನೀರುಪಾಲಾದ ಘಟನೆ ನಡೆದಿದೆ. ಇದರಲ್ಲಿ ಓರ್ವನ ಮೃತದೇಹ ಪತ್ತೆಯಾಗಿ, ಇನ್ನೋರ್ವ ಕಣ್ಮರೆಯಾಗಿದ್ದಾನೆ.
ಉಳ್ಳಾಲದ ಅಳೇಕಲ ನಿವಾಸಿ ರಿಝ್ವಾನ್ (25), ಕೋಟೆಪುರ ನಿವಾಸಿ ಝಮೀರ್ (25) ಸಮುದ್ರಪಾಲಾದ ಯುವಕರಾಗಿದ್ದು, ಈ ಪೈಕಿ ಝಮೀರ್‌ರ ಮೃತದೇಹ ಪತ್ತೆಯಾಗಿದೆ.
ಎರಡು ವರ್ಷಗಳ ಹಿಂದೆ ಉಳ್ಳಾಲದಿಂದ ಒಮನ್‌ಗೆ ಉದ್ಯೋಗಕ್ಕೆಂದು ತೆರಳಿದ್ದ ಇವರಿಬ್ಬರು ಒಮನ್‌ನಲ್ಲಿ ಫಿಶ್‌ಮಿಲ್ ಕಂಪೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ಇವರು ಒಮನ್‌ನ ದುಖ್ಮ್ ಎಂಬ ಕಡಲತೀರಕ್ಕೆ ಶುಕ್ರವಾರ ಸಂಜೆ ವೇಳೆ ವಿಹಾರಕ್ಕೆ ತೆರಳಿದ್ದರೆನ್ನಲಾಗಿದೆ. ಈ ವೇಳೆ ಸಮುದ್ರಕ್ಕಿಳಿದ ರಿಝ್ವಾನ್ ನೀರಿನಲ್ಲಿ ಮುಳುಗಿದ್ದಾರೆ. ಅವರನ್ನು ರಕ್ಷಿಸಲು ಸಮುದ್ರಕ್ಕಿಳಿದ ಝಮೀರ್ ಕೂಡಾ ಮುಳುಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಿಝ್ವಾನ್ ಗಾಗಿ ಹುಡುಕಾಟ ಮುಂದುವರಿದಿದೆ.
ಮೃತ ಝಮೀರ್‌ಗೆ ಈಗಾಗಲೇ ಮದುವೆ ನಿಶ್ವಯವಾಗಿತ್ತು. ಕೆಲವೇ ದಿನಗಳಲ್ಲಿ ಆತ ತಾಯ್ನಾಡಿಗೆ ಮರಳುವ ಸಿದ್ಧತೆಯಲ್ಲಿದ್ದ ಎಂದು ತಿಳಿದುಬಂದಿದೆ.