ಉಡುಪಿ : ಗಾಂಜಾ ಮತ್ತು ಇತರ ಮಾದಕ ದ್ರವ್ಯಗಳನ್ನು ಸೇವಿಸಿ ದರೋಡೆಗೆ ಸಂಚು ರೂಪಿಸಿದ್ದ ನಾಲ್ಕು ಮಂದಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಅವರಿಂದ ಮಚ್ಚು, ಚೂರಿ, ಕಬ್ಬಿಣದ ಸುತ್ತಿಗೆ, ಮರದ ಸೋಂಟೆ, 5 ಮೊಬೈಲ್ ಫೋನ್ ಸೆಟ್, 25,000 ರೂಪಾಯಿ ಮೌಲ್ಯದ 6 ಗ್ರಾಂ ಎಂಡಿಎಂಎ ಮತ್ತು 110 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ.
ಕಾಪು ತಾಲೂಕು ಮಲ್ಲಾರು ಗ್ರಾಮದ ಕೋಟೆ ರಸ್ತೆಯ ನಿವಾಸಿ 27 ವರ್ಷ ಪ್ರಾಯದ ಮುಝಾಮಿಲ್, ಉದ್ಯಾವರ ಸಂಪಿಗೆ ನಗರದ 25 ವರ್ಷ ಪ್ರಾಯದ ಮೊಹಮ್ಮದ್ ಅನಾಸ್ ಸಾಹೇಬ್, ಶಿವಳ್ಳಿ ವಿ.ಪಿ. ನಗರದ 26 ವರ್ಷ ಪ್ರಾಯದ ಮಹಮ್ಮದ್ ರಫೀಕ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಬಾರೆಕಾಡು ನಿವಾಸಿ 18 ವರ್ಷ ಪ್ರಾಯದ ನಿಹಾಲ್ ಬಂಧಿತ ಅರೋಪಿಗಳು.
ಈ ಆರೋಪಿಗಳು ಉಡುಪಿಯ ಮಣಿಪಾಲದ ವಿ.ಪಿ. ನಗರದ ಮನೆಯೊಂದರಲ್ಲಿ ಗಾಂಜಾ ಮತ್ತು ಮಾದಕ ದ್ರವ್ಯಗಳನ್ನು ಮನೆಯಲ್ಲಿ ಇರಿಸಿಕೊಂಡು ಅದನ್ನು ಸೇವಿಸಿ ಮಾರಕಾಯುಧಗಳೊಂದಿಗೆ ದರೋಡೆಗೆ ಸಂಚು ರೂಪಿಸಿದ್ದಾರೆ ಎನ್ನುವ ಖಚಿತ ಮಾಹಿತಿ ಲಭಿಸಿದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಸಂಭಾವ್ಯ ದರೋಡೆ ಕೃತ್ಯವನ್ನು ತಪ್ಪಿಸಿದ್ದಾರೆ.
ಉಡುಪಿ ಜಿಲ್ಲಾ ಎಸ್ಪಿ ಅಕ್ಷಯ್ ಮಚೀಂದ್ರ ಹಾಕೆ ಅವರ ಮಾರ್ಗದರ್ಶನದಲ್ಲಿ ಅಡೀಶನಲ್ ಎಸ್ಪಿ ಸಿದ್ಧಲಿಂಗಪ್ಪ ಟಿ. ಅವರು ತಮ್ಮ ತಂಡದ ಸದಸ್ಯರಾದ ಡಿವೈಎಸ್ಪಿ ದಿನಕರ ಕೆ.ಪಿ., ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ. ಮತ್ತು ಇತರರು ಈ ಕಾರ್ಯಾಚರಣೆ ನಡೆಸಿದರು.