ನವದೆಹಲಿ: ಇನ್ನು ಮುಂದೆ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ್‌ನಲ್ಲಿ ದೊಡ್ಡ ಸ್ವರದಲ್ಲಿ ಮಾತನಾಡುವುದನ್ನು ಮತ್ತು ಲೌಡ್‌ಸ್ಪೀಕರ್ ಇಟ್ಟು ಸಾಂಗ್ ಕೇಳುವುದನ್ನು ನಿಷೇಧಿಸಿ ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ.
ರೈಲು ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುಖಕರ ಪ್ರಯಾಣದ ಅನುಭವ ನೀಡುವ ಉದ್ದೇಶದಿಂದ ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕ ಸ್ನೇಹಿ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಏರುಧ್ವನಿಯಲ್ಲಿ ಮಾತನಾಡುವುದು, ಸಂಗೀತವನ್ನು ದೊಡ್ಡದಾದ ವಾಲ್ಯೂಮ್‌ನಲ್ಲಿ ಆಲಿಸುವುದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ರೈಲ್ವೇ ಇಲಾಖೆ ನೂತನ ಪ್ರಕಟಣೆ ಹೊರಡಿಸಿದೆ.
ರಾತ್ರಿ 10 ಗಂಟೆಯ ನಂತರದ ಪ್ರಯಾಣಕ್ಕೆ ಈ ಮಾರ್ಗಸೂಚಿಗಳು ಅನ್ವಯವಾಗುತ್ತವೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಒಂಟಿ ಮಹಿಳಾ ಪ್ರಯಾಣಿಕರಿಗೆ ರೈಲ್ವೆ ಸಿಬಂದಿ ಅಗತ್ಯ ನೆರವು ಕಲ್ಪಿಸಬೇಕು.
ಅಲ್ಲದೆ ವಲಯ ಮಟ್ಟದಲ್ಲಿ ನೂತನ ಮಾರ್ಗಸೂಚಿಗಳ ಕುರಿತು ಪ್ರಯಾಣಿಕರಿಗೆ ಜಾಗೃತಿ ಮೂಡಿಸಬೇಕು. ಟಿಕೆಟ್ ಪರಿಶೀಲಕರು ಮತ್ತು ಇತರ ಸಿಬಂದಿ ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ಒದಗಿಸಬೇಕು ಎಂದು ತಿಳಿಸಲಾಗಿದೆ.
ಅಷ್ಟೇ ಅಲ್ಲದೆ ಈ ನಿಯಮವನ್ನು ಉಲ್ಲಂಘಿಸಿದರೆ ರೈಲ್ವೇ ಸಿಬಂದಿ ಗಮನಕ್ಕೆ ತರಬಹುದು. ಸಮಸ್ಯೆ ನಿವಾರಣೆಯ ಜವಾಬ್ದಾರಿ ರೈಲು ಸಿಬ್ಬಂದಿಯದ್ದಾಗಿರುತ್ತದೆ.
ತಪಾಸಣೆ ಸಿಬಂದಿ, ಆರ್‌ಪಿಎಫ್, ಎಲೆಕ್ಟ್ರಿಷಿಯನ್, ಅಡುಗೆ ಮತ್ತು ನಿರ್ವಹಣೆ ಸಿಬ್ಬಂದಿ ಪರಿಹರಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಇಲಾಖೆ ತಿಳಿಸಿದೆ.