ಮಂಗಳೂರು: ಕರಾವಳಿಯಾದ್ಯಂತ ಹಿಜಾಬ್ ವಿವಾದ, ಗೊಂದಲಗಳ ನಡುವೆ ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭಗೊಂಡಿದ್ದು 29,712 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾವಣಿ ಮಾಡಿಕೊಂಡಿದ್ದಾರೆ.
ತಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಬಾರದು ಎಂದು ಹೈಕೋರ್ಟ್‌ಗೆ ಅರ್ಜಿ ಹಾಕಿದ್ದ ವಿದ್ಯಾರ್ಥಿನಿಯರಿಗೆ ತೀರ್ಪು ವ್ಯತಿರಿಕ್ತವಾಗಿ ಬಂದ ಕಾರಣ ಶಾಲಾ ಕಾಲೇಜುಗಳಲ್ಲಿ ವಿವಾದ ಮತ್ತೆ ಮುಂದುವರಿದಿತ್ತು.
ಈ ನಡುವೆ ಹಿಜಾಬ್ ಧರಿಸಿ ಪರೀಕ್ಷೆಗೆ ಅವಕಾಶ ಇಲ್ಲ ಎಂದು ರಾಜ್ಯ ಸರಕಾರವೂ ಸ್ಪಷ್ಟ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದು, ಪರೀಕ್ಷೆ ಬರೆಯುವ ಸಿದ್ಧತೆಯಲ್ಲಿ ತೊಡಗಿಸಿದ್ದಾರೆ.
ರಾಜ್ಯದಲ್ಲಿ 8 ಲಕ್ಷದ 73 ಸಾವಿರದ 846 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಬೆಳ್ತಂಗಡಿಯಲ್ಲಿ 14 ಕೇಂದ್ರಗಳಲ್ಲಿ 205 ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.
ಮಂಗಳೂರು ಉತ್ತರದ 20 ಕೇಂದ್ರಗಳ 281 ಕೊಠಡಿಗಳಲ್ಲಿ 98 ಶಾಲಾ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯಲಿದ್ದಾರೆ. ಇನ್ನು ಇತ್ತ ಉಡುಪಿಯಲ್ಲಿ 14022 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಒಟ್ಟು 56 ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಸಾವಿರದ ಇನ್ನೂರಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ. ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಪರೀಕ್ಷೆ ನಡೆಸಲು ಇಲಾಖೆ ತಯಾರಿ ನಡೆಸಿದೆ.
ವಿದ್ಯಾರ್ಥಿಗಳಿಗೆ ಶಿಕ್ಷಣ ಮುಖ್ಯ ಎಂದು ಧರ್ಮಗುರುಗಳು ಸೂಚನೆ ನೀಡಿದ್ದು, ಪರೀಕ್ಷೆಯನ್ನು ಬರೆಯುವಂತೆ ತಿಳಿಸಿದ್ದಾರೆ. ಉಡುಪಿಯಲ್ಲಿ 7229 ಬಾಲಕರು, 6793 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ.