ಶಿವಮೊಗ್ಗದ ತುಂಗಾ ನದಿ ತೀರದಲ್ಲಿನ ಬ್ಲಾಸ್ಟ್ ಸಂಬಂಧಿಸಿದಂತೆ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ NIA ಅಧಿಕಾರಿಗಳು ತೀವ್ರಗೊಳಿಸಿದ್ದು, ಇದೀಗ ಮಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.
ಮಂಗಳೂರು : ಶಿವಮೊಗ್ಗದ ತುಂಗಾ ನದಿ ತೀರದಲ್ಲಿನ ಬ್ಲಾಸ್ಟ್ ಸಂಬಂಧಿಸಿದಂತೆ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ NIA ಅಧಿಕಾರಿಗಳು ತೀವ್ರಗೊಳಿಸಿದ್ದು, ಇದೀಗ ಮಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ.
ನಗರ ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಬ್ಬುಕಟ್ಟೆಯ ಮಝೀನ್ ಅಬ್ದುಲ್ ರೆಹಮಾನ್ ಬಂಧಿತ ಆರೋಪಿಯಾಗಿದ್ದಾನೆ.
ಮಝೀನ್ ಜೊತೆಗೆ ದಾವಣಗೆರೆಯ ಹೊನ್ನಾಳಿಯಲ್ಲಿ ನದೀಮ್ ಅಹ್ಮದ್ ಎಂಬಾತನನ್ನು ಕೂಡಾ ಎನ್‌ಐಎ ಬಂಧಿಸಿದೆ.
ಶಿವಮೊಗ್ಗದ ಆರೋಪಿ ಮಾಜ್ ಮುನೀರ್ ಜೊತೆ ಮಝಿನ್ ಅಬ್ದುಲ್ ರಹಮಾನ್ ಗೆ ನಂಟು ಇರುವುದು ದೃಢಪಟ್ಟಿದೆ.
ತನ್ನ ಉಗ್ರ ಕೃತ್ಯಗಳಿಗೆ ಮಝೀನ್ನನ್ನು ಮಾಜ್ ಮುನೀರ್ ನೇಮಿಸಿಕೊಂಡಿದ್ದ. ಇನ್ನೊಬ್ಬ ಆರೋಪಿ ಸೈಯದ್ ಯಾಸಿನ್ ಜೊತೆ ದಾವಣಗೆರೆಯ ನದೀಮ್ ಗೆ ನಂಟು ಇರುವುದು ಕೂಡಾ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧನಕ್ಕೆ ಒಳಗಾಗಿರುವ ಸೈಯದ್ ಯಾಸಿನ್, ಮಾಜ್ ಮುನೀರ್, ಶಾರೀಕ್ ಅಹ್ಮದ್ ಶಿಮೊಗ್ಗದ ಅಕ್ಷರ ಕಾಲೇಜಿನಲ್ಲಿ ಒಟ್ಟಿಗೆ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದ್ದರು.
ಬಳಿಕ ಯಾಸಿನ್ ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ಓದಿದ್ದರೆ ಮುನೀರ್ ಮಂಗಳೂರಿನ ಮುಡಿಪು ಸಮೀಪದ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಟೆಕ್ ಓದುತ್ತಿದ್ದ.
ತೀರ್ಥಹಳ್ಳಿ ಮೂಲದ ಶಾರೀಕ್ ಮಹ್ಮದ್ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು.
ಈ ಮೂವರು ಶಿವಮೊಗ್ಗವನ್ನು ಕೇಂದ್ರ ಸ್ಥಳವನ್ನಾಗಿಸಿಕೊಂಡು ಮಂಗಳೂರು ಸೇರಿದಂತೆ ವಿವಿಧೆಡೆ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಮೂವರೂ ಬಾಂಬ್ ತಯಾರಿಸುವ ಬಗ್ಗೆ ತರಬೇತಿ ಪಡೆದಿದ್ದರು.
ವಿದೇಶಿ ಉಗ್ರ ಸಂಘಟನೆಯ ಸದಸ್ಯರ ಜೊತೆ ಇವರು ಸಂವಹನ ನಡೆಸುತ್ತಿದ್ದರು ಎಂಬುದರ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದೆ ಎನ್ನಲಾಗುತ್ತಿದೆ.
ಶಿವಮೊಗ್ಗದ ಸಿದ್ದೇಶ್ವರ ನಗರ ನಿವಾಸಿಯಾದ ಸೈಯದ್ ಯಾಸಿನ್ ಜೆಎನ್‌ಎನ್‌ಸಿ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿದ್ದ.
ಈತ ತನ್ನ ನಿವಾಸದಿಂದ 3-4 ಕಿ.ಮೀ ದೂರದಲ್ಲಿರುವ ಪುರಲೆ ಸಮೀಪದ ತುಂಗಾ ನದಿ ತೀರವನ್ನು ಆತನ ಕಾರ್ಯ ಚಟುವಟಿಕೆ ಸ್ಥಾನ ಮಾಡಿಕೊಂಡಿದ್ದ.
ತುಂಗಾನದಿ ತೀರದಲ್ಲಿ ಪ್ರಯೋಗಿಕವಾಗಿ ಸ್ಫೋಟಕವನ್ನು ಸ್ಫೋಟಿಸುತ್ತಿದ್ದ ಎಂಬ ಮಾಹಿತಿ ಬಹಿರಂಗವಾಗಿತ್ತು. ಈ ಕಾರಣಕ್ಕೆ ಪೊಲೀಸರು ಹಾಗೂ ವಿಧಿ ವಿಜ್ಞಾನ ತಂಡ ಯಾಸಿನ್‌ನನ್ನು ಸ್ಥಳಕ್ಕೆ ಕರೆತಂದು ಮಹಜರು ನಡೆಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮಂಗಳೂರಿನ ಪಿಎ ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ರೆಶಾನ್ ತಾಜುದ್ದೀನ್ ಶೇಖ್ ಎಂಬಾತನನ್ನು ಉಡುಪಿ ಜಿಲ್ಲೆಯ ವಾರಂಬಳ್ಳಿ ನಿವಾಸಿ ರೆಶಾನ್ ತಾಜುದ್ದೀನ್ ಶೇಖ್ ನನ್ನು ಬಂಧಿಸಲಾಗಿತ್ತು.
ಇಸ್ಲಾಮಿಕ್ ಸ್ಟೇಟ್‌ನ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು ಕ್ರಿಪ್ಟೋ-ವ್ಯಾಲೆಟ್‌ಗಳ ಮೂಲಕ ಇವರೆಲ್ಲರೂ ಹಣ ಪಡೆಯುತ್ತಿದ್ದ ಆರೋಪ ದೃಢವಾಗಿದೆ.