ಮಂಗಳೂರು: ತನ್ನದೇ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದ ಮಾಲೀಕನಿಗೆ ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ಫೋಕ್ಸೊ ನ್ಯಾಯಾಲಯ 11 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಬಜ್ಪೆಯ ಕಂದಾವರ ನಿವಾಸಿ ಅಬ್ದುಲ್ ಲತೀಫ್(41) ಎಂಬಾತ ಶಿಕ್ಷೆಗೊಳಗಾದ ಅಪರಾಧಿ.
ಈತ ಬಜ್ಪೆಯ ಕೈಕಂಬದಲ್ಲಿ ಫಾತಿಮಾ ಡ್ರೆಸ್ ಕಲೆಕ್ಷನ್ ಎಂಬ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದ.
2017ರಲ್ಲಿ ಈತ ತನ್ನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಗೆ ಅಮಲು ಪದಾರ್ಥ ಮಿಶ್ರಿತ ಜ್ಯೂಸ್ ನೀಡಿ ಅತ್ಯಾಚಾರ ಎಸಗಿದ್ದನು. ನಂತರ ಎಲ್ಲವನ್ನೂ ವಿಡಿಯೋ ಮಾಡಿದ್ದೇನೆ. ಹೇಳಿದರೆ ಅದನ್ನು ವೈರಲ್ ಮಾಡುವುದಾಗಿಯೂ, ನಾನು ಹೇಳಿದಂತೆ ಮುಂದೆಯೂ ಕೇಳಬೇಕು ಎಂದು ಬೆದರಿಕೆ ಹಾಕಿದ್ದ. ಈ ವಿಚಾರವನ್ನು ಬಾಲಕಿ ಮನೆಯವರಲ್ಲಿ ತಿಳಿಸಿದ್ದು, ಬಳಿಕ ಬಜ್ಪೆ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.
ಪೊಲೀಸರು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದಾಗ ಅಬ್ದುಲ್ ಲತೀಫ್ ಮಗುವಿನ ತಂದೆ ಎಂಬುದು ದೃಢ ಪಟ್ಟಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ – 2 ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಎಂ. ರಾಧಾಕೃಷ್ಣ ಅವರು ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿದರು.
ಈ ಪ್ರಕರಣದಲ್ಲಿ ಆರೋಪಿಯು ಪೊಲೀಸರ ಕೈಗೆ ಸಿಗದೇ ಸುಮಾರು ಎರಡು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಆದರೆ ಆ ಬಳಿಕ ಪೊಲೀಸರು ಆರೋಪಿಯನ್ನು ಗದಗ ಜಿಲ್ಲೆಯಲ್ಲಿ ಬಂಧಿಸಿದ್ದರು.
ಈ ಪ್ರಕರಣದ ತನಿಖೆ ನಡೆಸಿದ ಬಜ್ಪೆ ಠಾಣೆಯ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಕೆ.ಆರ್. ನಾಯ್ಕ್ ಅವರು ನ್ಯಾಯಾಲಯಕ್ಕೆ ದೋಪಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಆರೋಪಿಗೆ ಸಹಕರಿಸಿದ ಆರೋಪದಲ್ಲಿ ಬಟ್ಟೆ ಅಂಗಡಿಯ ಗೀತಾ ಎಂಬಾಕೆಯ ಮೇಲೆಯೂ ಪ್ರಕರಣ ದಾಖಲಾಗಿತ್ತು. ಆದರೆ ಸಾಕ್ಷ್ಯಾಧಾರದ ಕೊರತೆಯಿಂದ ಆಕೆಯನ್ನು ನ್ಯಾಯಾಧೀಶರು ಪ್ರಕರಣದಿಂದ ಬಿಡುಗಡೆಗೊಳಿಸಿದ್ದಾರೆ.