ಲಂಡನ್: ಸೂರ್ಯ ಮುಳುಗದ ದೇಶ ಬ್ರಿಟನ್ ರಾಣಿ ಎಲಿಜಬೆತ್ II ಅವರು ದೀರ್ಘಕಾಲದ ಅನಾರೋಗ್ಯದಿಂದ ನಿನ್ನೆ ರಾತ್ರಿ ನಿಧನರಾದರು.
ಇದೀಗ ರಾಣಿಯ ಹಿರಿಯ ಮಗ, ವೇಲ್ಸ್ನ ರಾಜಕುಮಾರ 73 ಹರೆಯದ ಚಾರ್ಲ್ಸ್ ಅವರು ತಕ್ಷಣದಿಂದಲೇ ಅನ್ವಯವಾಗುವಂತೆ ರಾಜನಾಗಿ ಕರ್ತವ್ಯ ನಿಭಾಯಿಸುವರು.
ರಾಣಿ ಎಲಿಜಬೆತ್ ಅವರ 96 ವರ್ಷಗಳ ಜೀವಿತಾವಧಿಯಲ್ಲಿ ಅನೇಕ ಪ್ರಥಮಗಳ ಒಡತಿಯಾಗಿದ್ದರು. ಜೊತೆಗೆ ಹಲವು ವಿಶೇಷತೆಗಳನ್ನು ಅವರು ಹೊಂದಿದ್ದರು.
ಎಲಿಜಬೆತ್ ಬಗ್ಗೆ ಅತೀ ಹೆಚ್ಚು ಸರ್ಚ್
ರಾಣಿ ಎಲಿಜಬೆತ್ ನಿಧರಾದಾಗಿನಿಂದ ಆಕೆಯ ಬಗ್ಗೆ ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಮಾಡಿದ್ದಾರೆ. ಕಾರಣ ಆಕೆಯಲ್ಲಿ ಹಲವು ವಿಶೇಷತೆಗಳಿದ್ದವು. ಆಕೆಯ ಹವ್ಯಾಸ, ರಾಜಮನೆತನ ಸೇರಿದಂತೆ ಹಲವು ವಿಷಯಗಳನ್ನು ಸರ್ಚ್ ಮಾಡಿದ್ದಾರೆ. ‘ರಾಣಿ ಎಲಿಜಬೆತ್ II’ ಎಂಬ ಪದ ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಅತೀ ಹೆಚ್ಚು ಸರ್ಚ್ ಆಗಿದೆ.
ವರ್ಷದಲ್ಲಿ ಎರಡು ಬಾರಿ ಬರ್ತ್‌ಡೇ ಆಚರಿಸುತ್ತಿದ್ದ ರಾಣಿ ಎಲಿಜಬೆತ್
ಬ್ರಿಟನ್ ರಾಣಿ ಎಲಿಜಬೆತ್ ಅವರು ವರ್ಷಕ್ಕೆ ಎರಡು ಬಾರಿ ಅಂದರೆ ಏಪ್ರಿಲ್ 21 ಮತ್ತು ಜೂನ್ 11ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಒಂದು ಅವರ ಅಧಿಕೃತ ಜನ್ಮದಿನ. ಅಂದು ಕುಟುಂಬಸ್ಥರೊಂದಿಗೆ ಕಾಲ ಕಳೆಯುತ್ತಿದ್ದರು. ಮತ್ತೊಂದು ಪ್ರಜೆಗಳಿಗಾಗಿ ಮೀಸಲಾಗಿರುವ ಹುಟ್ಟು ಹಬ್ಬ.
ಬ್ರಿಟೀಷರ ಅತ್ಯಂತ ಸುಧೀರ್ಘ ಅವಧಿಯ ರಾಣಿ
ಎಲಿಜಬೆತ್ II ಸುಧೀರ್ಘ ಆಡಳಿತ ನಡೆಸುವ ಮೂಲಕ ತನ್ನ ಅಜ್ಜಿ ವಿಕ್ಟೋರಿಯಾ ಹೆಸರಲ್ಲಿದ್ದ ದಾಖಲೆಯನ್ನೂ ಮುರಿದಿದ್ದರು.
ಪಾಸ್ಪೋರ್ಟು-ಡ್ರೈವಿಂಗ್ ಲೈಸೆನ್ಸ್ ಇಲ್ಲ
ಬ್ರಿಟನ್ನ ಯಾವುದೇ ರಸ್ತೆಯಲ್ಲಿ ವಾಹನ ಪರವಾನಗಿ ಇಲ್ಲದೆ ಚಲಾಯಿಸಲು ಅನುಮತಿ ಪಡೆದ ಏಕೈಕ ವ್ಯಕ್ತಿ ಕೂಡ ರಾಣಿ ಎಲಿಜಬೆತ್. ಮತ್ತೊಂದು ವಿಶೇಷತೆ ಅಂದರೆ ಇವರು ಪಾಸ್ಪೋರ್ಟ್ ಇಲ್ಲದೆ ಈ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಪ್ರಯಾಣಿಸಬಹುದಾಗಿತ್ತು.
ರಾಜಮನೆತನದ ಪ್ರತಿಯೊಬ್ಬರಿಗೂ ಪಾಸ್‌ಪೋರ್ಟ್ ಅಗತ್ಯವಿದೆ. ಆದರೆ ಇವರಿಗೆ ಮಾತ್ರ ಪಾಸ್‌ಪೋರ್ಟ್ ಅಗತ್ಯವಿಲ್ಲ. ಕಾರಣ ಪ್ರತಿಯೊಂದು ಪಾಸ್‌ಪೋರ್ಟ್ ಅನ್ನು ರಾಣಿಯ ಹೆಸರಿನಲ್ಲಿ ನೀಡಲ್ಪಡುತ್ತಿತ್ತು.
ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಮೊದಲ ಮತ್ತು ಏಕೈಕ ಮಹಿಳೆ
ರಾಣಿ ಎಲಿಜಬೆತ್ ಬ್ರಿಟಿಷ್ ರಾಜಮನೆತನದ ಇತಿಹಾಸದಲ್ಲಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಮೊದಲ ಮತ್ತು ಏಕೈಕ ಮಹಿಳೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಈಕೆಗೆ 18 ವರ್ಷ ವಯಸ್ಸಾಗಿತ್ತು. ಈ ವೇಳೆ ರಾಣಿ ಎಲಿಜಬೆತ್ II ಮೆಕ್ಯಾನಿಕ್ ಮತ್ತು ಟ್ರಕ್ ಡ್ರೈವರ್ ಆಗಿ ಸೇವೆ ಸಲ್ಲಿಸಿದ್ದರು.
ಭಾರತಕ್ಕೆ ಮೂರು ಬಾರಿ ಭೇಟಿ ಮಾಡಿದ್ದ ರಾಣಿ ಎಲಿಜಬೆತ್
ರಾಣಿ ತನ್ನ ಆಳ್ವಿಕೆಯಲ್ಲಿ 100ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿದ್ದರು. ಭಾರತಕ್ಕೂ ಮೂರು ಬಾರಿ ಭೇಟಿ ನೀಡಿದ್ದರು. 1961, 1983, 1997ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಇದರ ಜೊತೆಗೆ ಫ್ರಾನ್ಸ್‌ಗೆ 13 ಬಾರಿ ಮತ್ತು ಕೆನಡಾಕ್ಕೆ 22 ಬಾರಿ ಭೇಟಿ ನೀಡಿದ್ದರು.
ವಿಶೇಷ ಧಿರಿಸಿನಿಂದಲೇ ಆಕರ್ಷವಾಗಿ ಕಾಣುತ್ತಿದ್ದರು
ಕೋಟು, ಟೋಪಿ ಅವರ ಹೆಗ್ಗುರುತಿನ ಧಿರಿಸಾಗಿತ್ತು. ಉಡುಪಿನ ವಿನ್ಯಾಸಕ್ಕೆ ವಿಶೇಷ ಗಮನ ನೀಡುತ್ತಿದ್ದ ಅವರು, ‘ವಿಭಿನ್ನ ಉಡುಪು ಧರಿಸುವುದು ನನ್ನ ಜನರಿಗಾಗಿಯಷ್ಟೇ ಅಲ್ಲ, ಮುಂದಿನ ಪೀಳಿಗೆಗೂ ಕೂಡಾ’ ಎಂದು ಹೇಳಿದ್ದರು. ಮಾಧ್ಯಮಗಳ ಎದುರು ಬರುವಾಗ ಝಗಮಗಿಸುವ, ಆಕರ್ಷಕ ಉಡುಪು ಧರಿವುದನ್ನು ಮರೆಯುತ್ತಿರಲಿಲ್ಲ. ಸಮೂಹದಲ್ಲಿ ಪ್ರತ್ಯೇಕವಾಗಿಯೇ ಕಾಣಲು ಬಯಸುತ್ತಿದ್ದರು.