ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಶ್ಲೀಲ ವಿಡಿಯೋ ಹರಿಬಿಟ್ಟವರನ್ನು ಎಸ್ಐಟಿ ಬಂಧಿಸಿದೆ. ಹೈಕೋರ್ಟ್ಗೆ ಬಂದಿದ್ದ ನವೀನ್ ಗೌಡ, ಚೇತನ್ನನ್ನು ಎಸ್ಐಟಿ ಮಂಗಳವಾರ (ಮೇ 28) ಬಂಧಿಸಿದೆ.
ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು ನವೀನ್ ಗೌಡ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಇದು ಭಾರೀ ಚರ್ಚೆಗೆ ಹುಟ್ಟು ಹಾಕಿತ್ತು.
ಆತ ಪ್ರಜ್ವಲ್ ರೇವಣ್ಣ ವೀಡಿಯೋ ನೋಡಲು ಈ ವಾಟ್ಸಾಪ್ ಚಾನಲ್ ಫಾಲೋ ಮಾಡಿ ಎಂದು ಫೇಸ್ಬುಕ್ನಲ್ಲಿ ಮೊದಲ ಪೋಸ್ಟ್ ಮಾಡಿದ್ದ. ನಂತರ ಸ್ವಲ್ಪ ಹೊತ್ತಿನಲ್ಲೇ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೊ ಬಿಡುಗಡೆಗೆ ಕ್ಷಣ ಗಣನೆ ಎಂದು ಮತ್ತೊಂದು ಪೋಸ್ಟ್ ಹಾಕಿದ್ದ. ಇದನ್ನು ಗಮನಿಸಿದ್ದ ಜೆಡಿಎಸ್, ಪೋಸ್ಟ್ ಅನ್ನು ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ದೂರು ನೀಡಿತ್ತು.
ಅತ್ತ ಪ್ರಕರಣ ದಾಖಲಾಗುತ್ತಿದ್ದಂತೆಯೇ ನವೀನ್ ಗೌಡ ಫೇಸ್ ಬುಕ್ ಅಕೌಂಟ್ ಡಿಲೀಟ್ ಮಾಡಿಕೊಂಡಿದ್ದ. ಈ ಸಂಬಂಧ ಎಸ್ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದ್ರೆ, ನವೀನ್ ಗೌಡ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ.
ಈ ಇಬ್ಬರು ಆರೋಪಿಗಳು ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಹೈಕೋರ್ಟ್ ಕಡೆ ಬಂದಿದ್ದ ವೇಳೆಯೇ ಆರೋಪಿಗಳನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇನ್ನು ಪ್ರಕರಣದ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ವಿದೇಶ ಸೇರಿದ್ದಾರೆ. ಸೋಮವಾರ(ಮೇ 27) ವೀಡಿಯೋ ಹರಿಬಿಟ್ಟು, ಮೇ 31 ರಂದು ಎಸ್ ಐ ಟಿ ಮುಂದೆ ಹಾಜಾರಾಗುವುದಾಗಿ ತಿಳಿಸಿದ್ದರು.