ಮಂಗಳೂರು: ಮಂಗಳೂರಿನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರು ಬಂದು ಕುಳಿತಿದ್ದರು. ಇನ್ನೇನು ಟೇಕ್‌ಆಫ್ ಆಗಲು ರನ್‌ವೇ ಕಡೆ ವಿಮಾನ ಹೊರಡುತ್ತಿದ್ದಂತೆ ವಿಮಾನದ ಸಿಬ್ಬಂದಿಯನ್ನು ಕರೆದು “ವಿಮಾನದಲ್ಲಿ ಬಾಂಬ್ ಇಡಲಾಗಿದೆ” ಎಂಬ ಮಾಹಿತಿಯನ್ನು ರವಾನಿಸಿದ್ದಾನೆ.
ಅಲರ್ಟ್ ಆದ ಸಿಬ್ಬಂದಿ ಭದ್ರತಾ ಪಡೆಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಎಚ್ಚೆತ್ತ ಭದ್ರತಾ ಪಡೆ ಇನ್ನೇನು ಟೇಕಾಫ್ ಆಗಲಿದ್ದ ವಿಮಾನವನ್ನು ತಡೆದು ನಿಲ್ಲಿಸಿದ್ದಾರೆ.
ಇದಾದ ನಂತರ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಒಯ್ದ ಭದ್ರತಾ ಸಿಬ್ಬಂದಿ ವಿಮಾನದೊಳಗೆ ನುಗ್ಗಿ ನೇರವಾಗಿ ಒಬ್ಬ ಯುವಕನ ಬಳಿ ಬಂದು ಮೊಬೈಲ್ ಕಸಿದಿದ್ದಾರೆ.
ಮೊಬೈಲ್ ಕಸಿದಿದ್ದನ್ನು ನೋಡಿ ಗಲಿಬಿಲಿಗೊಂಡ ಆ ಯುವಕ ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾನೆ. ಆಗ ಸಿಬ್ಬಂದಿ ಮೊಬೈಲ್ ಲಾಕ್ ತೆಗೆದು ವಾಟ್ಸಪ್ ಸಂದೇಶಗಳನ್ನು ತೋರಿಸುವಂತೆ ಸೂಚಿಸಿದ್ದಾರೆ. ಆತ ತೆಗೆದು ತೋರಿಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಏನಾಗಿತ್ತು?
ಮುಂಬೈಗೆ ತೆರಳುತ್ತಿದ್ದ ಒಬ್ಬ ಯುವಕ ಹಾಗೂ ಬೆಂಗಳೂರಿಗೆ ತೆರಳುತ್ತಿದ್ದ ಯುವತಿ ಮಂಗಳೂರಿನ ಏರ್‌ಪೋರ್ಟ್‌ನಲ್ಲಿ ಮುಖಾಮುಖಿಯಾಗಿದ್ದಾರೆ. ಅವರೂ ಇಬ್ಬರೂ ಮೊದಲಿನಿಂದಲೇ ಸ್ನೇಹಿತರಾಗಿದ್ದರು.
ಮುಂಬೈಗೆ ತೆರಳುತ್ತಿದ್ದ ವಿಮಾನ ಮೊದಲು ಹೊರಟಿದ್ದರಿಂದ ಯುವಕ ವಿಮಾನ ಏರಿದ್ದಾನೆ. ಯುವತಿ ಬೇರೆ ವಿಮಾನಕ್ಕಾಗಿ ನಿಲ್ದಾಣದಲ್ಲೇ ಕಾಯುತ್ತಿದ್ದರು. ಆಗ ಒಬ್ಬರಿಗೊಬ್ಬರು ವಾಟ್ಸಪ್ ಮೂಲಕ ಸಂದೇಶ ಕಳುಹಿಸುತ್ತಿದ್ದರು.
ಯಾವ ಕಡೆಗೆ ಹೊರಟ್ಟಿದ್ದೀ ಎಂದು ಸ್ನೇಹಿತನನ್ನು ವಾಟ್ಸಪ್ ಮೂಲಕ ಮುಂಬೈಯನ್ನು “ಬಾಂಬ್” ಎಂದು ಶಾರ್ಟ್‌ಕಟ್‌ನಲ್ಲಿ ಮೆಸೇಜ್ ಮಾಡಿದ್ದಾನೆ. ಇದನ್ನು ಆತನ ಪಕ್ಕದ ಸೀಟಿನಲ್ಲಿದ್ದ ಪ್ರಯಾಣಿಕ ಇಣುಕಿ ನೋಡಿದ್ದ. “ಬಾಂಬ್” ಪದವನ್ನು ತಪ್ಪಾಗಿ ತಪ್ಪಾಗಿ ಅರ್ಥೈಸಿಕೊಂಡು ವಿಮಾನದ ಸಿಬ್ಬಂದಿಗೆ ವಿಮಾನಕ್ಕೆ ಬೆದರಿಕೆ ಇದೆ ಎಂದು ಮಾಹಿತಿ ನೀಡಿದ್ದರು. ಕೆಲಕಾಲ ಗೊಂದಲದ ವಾತಾವರಣವನ್ನು ಸೃಷ್ಟಿಯಾಯಿತು.
ತಪಾಸಣೆ ವೇಳೆ ವಿಮಾನದಲ್ಲಿ ಯಾವುದೇ ಅಪಾಯಕಾರಿ ವಸ್ತು ಪತ್ತೆಯಾಗಿರಲಿಲ್ಲ. ಪ್ರಯಾಣಿಕರ ಬ್ಯಾಗ್‌ಗಳನ್ನು ಕೂಡಾ ಪರಿಶೀಲಿಸಿದ್ದರು. ವಿಮಾನವನ್ನು ಮರಳಿ ನಿಲ್ದಾಣಕ್ಕೆ ತಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಯಿತು.
ಬೆಳಿಗ್ಗೆ 11ಕ್ಕೆ ಮುಂಬೈಗೆ ಹೊರಡಬೇಕಿದ್ದ ವಿಮಾನಯಾನವು ಸಂಜೆ 5ಕ್ಕೆ ಹೊರಟಿತು. ವಿಮಾನದಲ್ಲಿ 186 ಪ್ರಯಾಣಿಕರಿದ್ದರು. ಪ್ರಯಾಣವು 6 ಗಂಟೆ ವಿಳಂಬವಾಗಿದ್ದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿದರು ಎಂದು ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.
‘ಪ್ರಯಾಣಿಕನಿಗೆ ಆತನ ಗೆಳತಿ ಕಳುಹಿಸಿದ್ದ ಸಂದೇಶವನ್ನು ಇಣುಕಿದ್ದ ಸಹ ಪ್ರಯಾಣಿಕ, ಅದನ್ನು ತಪ್ಪಾಗಿ ಅರ್ಥೈಸಿದ್ದರಿಂದ ವಿಮಾನನಿಲ್ದಾಣದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಈ ಬಗ್ಗೆ ಯಾರೂ ದೂರು ನೀಡಿಲ್ಲ’ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.