ಮಂಗಳೂರು: ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇದೆ. ಈಗಾಗಲೇ ಪಕ್ಷಗಳ ಮಧ್ಯೆ ಯುದ್ದಕ್ಕೆ ಕೌಂಟ್‌ಡೌನ್ ಆರಂಭವಾಗಿದೆ.
ಈ ಮಧ್ಯೆ ಕರಾವಳಿಯ ಹಾಲಿ ಎಂಟು ಶಾಸಕರ ಮಧ್ಯೆ ನಡೆಯುವ ಬಿಗ್ ಫೈಟ್‌ಗೆ ಅಖಾಡ ಸಿದ್ದವಾಗಿದೆ.
ನಾವು ಹೇಳುತ್ತಿರುವುದು ರಿಯಲ್ ಫೈಟ್ ಅಲ್ಲ ಬದಲಾಗಿ ಕ್ರಿಕೆಟ್ ಪಂದ್ಯದ ಮೂಲಕ ಟ್ರೋಪಿಗಾಗಿ ಹಣಾಹಣಿ ನಡೆಯಲಿದೆ.
ಸಂಕಲ್ಪ ಫೌಂಡೇಶನ್ ಆಶ್ರಯದಡಿ ಮೇ 28, 29ರಂದು ಮಂಗಳೂರು ನಗರ ಹೊರವಲಯದ ಅಡ್ಯಾರ್‌ನ ಸಹ್ಯಾದ್ರಿ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ.
ಡಾ. ಭರತ್ ಶೆಟ್ಟಿ ನೇತೃತ್ವದ ಉತ್ತರ ತಂಡ, ಡಿ. ವೇದವ್ಯಾಸ ಕಾಮತ್ ನೇತೃತ್ವದ ದಕ್ಷಿಣ ತಂಡ,
ಯು.ಟಿ. ಖಾದರ್ ನೇತೃತ್ವದ ಮಂಗಳೂರು ತಂಡ, ಹರೀಶ್ ಪೂಂಜ ನೇತೃತ್ವದ ಬೆಳ್ತಂಗಡಿ ತಂಡ, ಅಂಗಾರ ನೇತೃತ್ವದ ಸುಳ್ಯ ತಂಡ,
ಉಮಾನಾಥ್ ಕೋಟ್ಯಾನ್ ನೇತೃತ್ವದ ಮೂಡುಬಿದಿರೆ ತಂಡ, ಸಂಜೀವ ಮಠಂದೂರು ನೇತೃತ್ವದ ಪುತ್ತೂರು ತಂಡಗಳ ಮಧ್ಯೆ ಹಣಾಹಣೆ ನಡೆಯಲಿದೆ. ತಂಡಗಳ ಹೆಸರು ಶೀಘ್ರದಲ್ಲೇ ಪ್ರಕಟವಾಗಲಿದೆ.
8 ಓವರ್‌ಗಳ ಓವರ್ ಆರ್ಮ್ ಲೀಗ್ ಪಂದ್ಯಾವಳಿ ಇದ್ದಾಗಿದ್ದು, ಪಾಯಿಂಟ್ ಆಧಾರದಲ್ಲಿ ಕ್ವಾರ್ಟರ್ ಫೈನಲ್, ಸೆಮಿಫೈನಲ್, ಫೈನಲ್ ನಿರ್ಧಾರವಾಗಲಿದೆ.
ಆಯಾ ತಂಡದಲ್ಲಿ ಆಡುವ ಆಟಗಾರ ಸಂಬಂಧಪಟ್ಟ ವಿಧಾನಸಭೆ ಕ್ಷೇತ್ರದ ಸದಸ್ಯನಾಗಿರಬೇಕು. ಯಾವುದೇ ಕಾರಣಕ್ಕೂ ಬೇರೆ ವಿಧಾನಸಭೆ ಕ್ಷೇತ್ರದ ಆಟಗಾರನನ್ನು ಆಡಿಸುವಂತಿಲ್ಲ.
ಇದಕ್ಕಾಗಿ ವೋಟರ್ ಐಡಿ ಅಥವಾ ಆಧಾರ್ ಕಾರ್ಡ್ ದಾಖಲೆ ಹಾಜರುಪಡಿಸಬೇಕು. ತಂಡಗಳಿಗೆ ಯಾವುದೇ ನೋಂದಣಿ ಶುಲ್ಕವಿಲ್ಲ.
ಫೈನಲ್‌ನಲ್ಲಿ ವಿಜೇತ ತಂಡಕ್ಕೆ 1 ಲಕ್ಷ ರೂ. ಬಹುಮಾನ ಮತ್ತು ಪ್ರಶಸ್ತಿ, ರನ್ನರ್ಸ್ ಅಪ್ ತಂಡಕ್ಕೆ 50 ಸಾವಿರ ರೂ. ಮತ್ತು ಪ್ರಶಸ್ತಿ ಸಿಗಲಿದೆ.
ಸರಣಿ ಶ್ರೇಷ್ಠ, ಬೆಸ್ಟ್ ಬ್ಯಾಟ್ಸ್‌ಮನ್, ಬೆಸ್ಟ್ ಬೌಲರ್ ಪ್ರಶಸ್ತಿಗಳು ಹಾಗೂ ಪ್ರತಿ ಪಂದ್ಯದಲ್ಲೂ ವಿಶೇಷ ಬಹುಮಾನ ನೀಡಲು ಸಂಘಟಕರು ತೀರ್ಮಾನಿಸಿದ್ದಾರೆ.