ಮಂಗಳೂರು: ಎರಡೂ ಕಿಡ್ನಿ ವೈಫಲ್ಯಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯುತ್ತಿದ್ದ ಬಾಲಕಿ ನೆಲ್ಯಾಡಿಗೆ ತಲುಪುವ ವೇಳೆಗೆ ಆಂಬುಲೆನ್ಸ್‌ನಲ್ಲಿಯೇ ಸಾವಿಗೀಡಾದ ಮನಕಲಕುವ ಘಟನೆ ಮೇ 31ರಂದು ನಡೆದಿದೆ.
ಮಂಗಳೂರು ಹೊರವಲಯದ ತೊಕ್ಕೊಟ್ಟು ಸಮೀಪದ ಸೇವಂತಿಗುಡ್ಡೆ ನಿವಾಸಿ ರಮೇಶ್ ನಾಯ್ಕ್ ಹಾಗೂ ರೇವತಿ ದಂಪತಿಯ ಪುತ್ರಿ,
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ತೇಜಸ್ವಿನಿ(15)ಯ ಎರಡೂ ಕಿಡ್ನಿಗಳು ವೈಫಲ್ಯಗೊಂಡಿದ್ದು, ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಆಕೆಗೆ ಕಿಡ್ನಿ ಕಸಿ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ತೇಜಸ್ವಿನಿಯನ್ನು ಮೇ 31ರಂದು ಬೆಳಿಗ್ಗೆ ಆಂಬುಲೆನ್ಸ್ ಮೂಲಕ ಮಂಗಳೂರಿನಿಂದ ಉಪ್ಪಿನಂಗಡಿ, ನೆಲ್ಯಾಡಿ ಮಾರ್ಗವಾಗಿ ಬೆಂಗಳೂರಿಗೆ ಕರೆದೊಯ್ಯಲಾಗುತ್ತಿತ್ತು.
ಆದರೆ ದಾರಿಮಧ್ಯೆ ತೇಜಸ್ವಿನಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿ ಆರೋಗ್ಯ ಹದಗೆಟ್ಟಿತ್ತು.
ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಕರೆಸಿ ಆಂಬುಲೆನ್ಸ್‌ನಲ್ಲಿಯೇ ತೇಜಸ್ವಿನಿಯನ್ನು ತಪಾಸಣೆಗೊಳಪಡಿಸಿದಾಗ ಆಕೆ ಮೃತಪಟ್ಟಿದ್ದರು.
ತೇಜಸ್ವಿನಿ ಕುಟುಂಬವು ಮಗಳ ಚಿಕಿತ್ಸೆಗಾಗಿ ದಾನಿಗಳಲ್ಲಿ ನೆರವು ಯಾಚಿಸಿತ್ತು. ಕೆಲವರು ತೇಜಸ್ವಿನಿ ಚಿಕಿತ್ಸೆಗೆ ಸಹಕರಿಸಿದ್ದರು.