ತುಮಕೂರು: ದಲಿತ ಸಮುದಾಯದ ಪರಮೇಶ್‌ಗೆ ನಿಂದನೆ ಹಾಗೂ ಜೀವ ಬೆದರಿಕೆ ಪ್ರಸಂಗದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಬಿ. ತೇಜಸ್ವಿನಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ತಹಶೀಲ್ದಾರ್ ತೇಜಸ್ವಿನಿ 2021ರ ಡಿಸೆಂಬರ್ 3ರಂದು ಪರಮೇಶ್‌ನನ್ನು ಕಚೇರಿಗೆ ಕರೆಸಿಕೊಂಡು ನಿಂದನೆ ಮತ್ತು ಧಮ್ಕಿ ಹಾಕಿದ್ದಾರೆ ಎಂದು ದೂರಲಾಗಿದೆ.
ತಾವು ವಾಸವಿದ್ದ ಗುಡಿಸಲು ಮಳೆಗೆ ಕೊಚ್ಚಿ ಹೋಗಿ ಪರಮೇಶ್ ಗಂಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದರು. ಗಂಜಿ ಕೇಂದ್ರದಲ್ಲಿ ಪರಮೇಶ್ ಸೇರಿದಂತೆ ಇನ್ನೂ ಕೆಲ ಕುಟುಂಬಗಳು ನೆಲೆಸಿದ್ದರು.
ಆದರೆ ಗಂಜಿ ಕೇಂದ್ರ ತೊರೆದು ಗುಂಡುದೋಪಿಗೆ ತೆರಳಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತೇಜಸ್ವಿನಿ ಬಿ. ವಿರುದ್ಧ ಅಟ್ರಾಸಿಟಿ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಗಂಜಿ ಕೇಂದ್ರ ಬಿಟ್ಟು ನಿಮ್ಮ ಮೂಲ ಸ್ಥಳ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಗುಂಡುದೋಪಿಗೆ ತೆರಳುವಂತೆ ತೇಜಸ್ವಿನಿ ಆದೇಶಿಸಿದ್ದರು. ಆದರೆ ಎರಡು ತಿಂಗಳ ಹಿಂದೆ ಸುರಿದಿದ್ದ ಮಳೆಗೆ ಗುಂಡುದೋಪು ಮುಳುಗಿ ಗುಡಿಸಲುಗಳೆಲ್ಲಾ ಮುಳುಗಿಹೋಗಿದ್ದವು.
ಆಗಿನಿಂದ ಡಿಸೆಂಬರ್‌ವರೆಗೆ ಗಂಜಿ ಕೇಂದ್ರದಲ್ಲೇ ಪರಮೇಶ್ ಮತ್ತು ಇತರೆ ದಲಿತ ಕುಟುಂಬದವರು ಇದ್ದರು. ಆದರೆ ಅಲ್ಲಿನ ವಾಸ್ತವ ಸಮಸ್ಯೆ ಹೇಳಿದಕ್ಕೆ ದಲಿತ ವ್ಯಕ್ತಿ ಪರಮೇಶ್‌ಗೆ ತಹಶೀಲ್ದಾರ್ ತೇಜಸ್ವಿನಿ ನಿಂದನೆ ಮಾಡಿ, ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ತಹಶೀಲ್ದಾರ್ ತೇಜಸ್ವಿನಿ ಬೆದರಿಕೆ ಹಾಕುವ ಆಡಿಯೋ ಸಾಕ್ಷ್ಯ ಕೊಟ್ಟು, ಪರಮೇಶ್ ದೂರು ದಾಖಲು ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.