ಮಂಗಳೂರು: ಬಿಜೆಪಿಗರಿಗೆ ಹಿಂದೂಗಳು ಸತ್ತರೆ ಅದ್ರಲ್ಲೂ ಬಿಲ್ಲವರು ಸತ್ತರೆ ಮಾತ್ರ ಓಟು ಬರುತ್ತದೆ. ಅಲ್ಪಸಂಖ್ಯಾತರು ಸತ್ತರೆ ಓಟು ಬರೋದಿಲ್ಲ. ಅದಕ್ಕಾಗಿ ಹರೀಶ್ ಪೂಜಾರಿಯವರ ಹತ್ಯೆಯಾಯ್ತು. ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮರಸ್ಯವನ್ನು ಬಯಸುವ ಪಕ್ಷ. ಹಿಂಸೆಯನ್ನು ಬೆಂಬಲಿಸುವ ಪಕ್ಷ ಅಲ್ಲ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬಂಟ್ವಾಳದ ಹರೀಶ್ ಪೂಜಾರಿ ಹತ್ಯೆಯ ಆರೋಪಿ ಮೂರು ಹತ್ಯೆಯ ಆರೋಪಿ. ಅವನು ಹಾಗಾದ್ರೆ ಕೊಲೆ ಮಾಡುವವರ ಪಕ್ಷದವನು ಅಂತ ಆಯ್ತು. ಹಾಗಾದ್ರೆ ಆ ಪಕ್ಷಕ್ಕೆ ಓಟು ಹಾಕೋದು ಎಷ್ಟು ಸರಿ.
ಆ ಹತ್ಯೆಯ ದೋಷ ಓಟು ಹಾಕಿದ ಎಲ್ಲರಿಗೂ ಬರುತ್ತೆ. ಗಲಾಟೆ ನಮಗೆ ಬೇಡ. ಗಲಾಟೆಯಿಂದ ಕಾಂಗ್ರೆಸ್‌ಗೆ ಖಂಡಿತಾ ಲಾಭ ಇಲ್ಲ. ಆದರೆ ಯಾರಿಗೆ ಲಾಭ ಇದೆ ಅನ್ನುವುದನ್ನು ತಿಳಿದುಕೊಳ್ಳಿ. ಅಹಿಂಸೆಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು. ಹಿಂಸೆಯಿಂದಲ್ಲ. ಘರ್ಷಣೆ, ಗಲಾಟೆಗಳು ಯಾರು ಮಾಡ್ತಾರೆ, ಅದು ಆಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕು’ ಎಂದು ಹೇಳಿದರು.
ಇನ್ನು ಹತ್ಯೆ ಆರೋಪಿಗಳ ಆಸ್ತಿ ಮುಟ್ಟುಗೋಲು ವಿಚಾರವಾಗಿ ಮಾತನಾಡಿದ ಅವರು ‘ಎಡಿಜಿಪಿ ಅಲೋಕ್ ಕುಮಾರ್ ಅವರು ಆರೋಪಿಗಳ ಆಸ್ತಿ ಮುಟ್ಟುಗೋಲು ಬಗ್ಗೆ ಹೇಳಿದ್ರು. ಆದರೆ ನಾನು ಅವರಿಗೆ ಸಲಹೆ ಕೊಡುವುದು ಏನಂದ್ರೆ ನಿಮಗೆ ಸಾಧ್ಯ ಇದ್ರೆ ಈ ಹತ್ಯೆಗಳ ಸೂತ್ರದಾರ ಯಾರೆಂದು ಪತ್ತೆಹಚ್ಚಿ ಶಿಕ್ಷೆಗೆ ಒಳಪಡಿಸಿ.
ಈ ಜಿಲ್ಲೆಯಲ್ಲಿ ಗಲಾಟೆ ಎಲ್ಲ ನಿಂತು ಹೋಗುತ್ತದೆ. ಸ್ವಲ್ಪ ಹೆಚ್ಚು ಕೆಲಸ ಮಾಡ್ಬೇಕು. ಸೂತ್ರದಾರನ ಸೂಚನೆ ಮೇರೆಗೆ ಅವರು ಕೆಲಸ ಮಾಡುತ್ತಾರೆ. ಇವತ್ತು ಹಿಂದುಳಿದ ವರ್ಗದ ಬಹುತೇಕ ಜನ ಆರೋಪಿ ಸ್ಥಾನದಲ್ಲಿ ಇದ್ದಾರೆ. ಹೆಚ್ಚಲ್ಲ. ಬಹುಭಾಗ. ಸೂತ್ರದಾರರು ಅನಾಯಾಸವಾಗಿ ಇದ್ದಾರೆ. ಅವರು ನಮ್ಮಲ್ಲಿ ಇದ್ರೂ ಕೂಡಾ ಅವರಿಗೆ ಶಿಕ್ಷೆ ಆಗ್ಬೇಕು. ಸೂತ್ರದಾರರೇ ಕುಮ್ಮಕ್ಕುದಾರರು’ ಎಂದು ವಾಗ್ದಾಳಿ ನಡೆಸಿದರು.
ಇನ್ನು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕಾರಿನ ಮೇಲೆ ನಡೆದ ಮೊಟ್ಟೆ ದಾಳಿ ಕುರಿತು ಮಾತನಾಡಿ ‘ಅವರು ಪ್ರಕೃತಿ ವಿಕೋಪ ಆದ ಸ್ಥಳವನ್ನು ಭೇಟಿ ಮಾಡಲು ಹೋಗಿದ್ದ ಸಂದರ್ಭ ಅವರ ಕಾರಿಗೆ ಮೊಟ್ಟೆ ಬಿಸಾಡಿದ್ದಾರೆ. ಕಾರಣ ಯಾವುದೇ ಇರಬಹುದು. ಆದರೆ ಅವರು ಒಬ್ಬ ವಿಪಕ್ಷ ನಾಯಕ ಹಾಗೂ ಸಮಾಜದಲ್ಲಿ ಸ್ಥಾನಮಾನ ಇರುವವರು. ಆದ್ದರಿಂದ ಈ ಕುಕೃತ್ಯ ಸಲ್ಲದು. ಈ ಕೃತ್ಯವನ್ನು ಕಾಂಗ್ರೆಸ್ ಖಂಡಿಸುತ್ತದೆ.
ಏನೇ ಘಟನೆ ಆದ್ರೂ ಕೂಡಾ ಕಾಂಗ್ರೆಸ್ ಕುಮ್ಮಕ್ಕಿದೆ ಅಂತ ಹೇಳ್ತಾರೆ. ಆದ್ರೆ ಮೊನ್ನೆ ಕೂಡಾ ಸುಮಾರು ಹತ್ಯೆಗಳಾಯಿತು. ಸುಮಾರು ಹತ್ಯೆ ನಮ್ಮ ಅವಧಿಯಲ್ಲಿ ಕೂಡಾ ಆಗಿತ್ತು. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಮ್ಮ ಪಕ್ಷದ ಹಿಂದೂ ಕಾರ್ಯಕರ್ತರ ಮೇಲಾಗಲಿ, ಮುಸ್ಲಿಂ ಕಾರ್ಯಕರ್ತರ ಮೇಲಾಗಲಿ ಎಫ್‌ಐಆರ್ ಕೇಸ್ ಇಲ್ಲ. ಜನರಿಗೆ ಗೊತ್ತಾಗಲಿ ಅನ್ನುವುದಕ್ಕೆ ಮತ್ತೊಮ್ಮೆ ಹೇಳುತ್ತಿದ್ದೇನೆ.
ಆರೋಪಿಗಳು ಯಾರು ಅಂತ ಕೇಳಿದ್ರೆ ಒಂದು ರಾಜ್ಯದಲ್ಲಿ ಅಧಿಕಾರ ಮಾಡುತ್ತಿರುವಂತಹ ಪಕ್ಷ, ಇನ್ನೊಂದು ಸಣ್ಣ ಪಕ್ಷ. ದ.ಕ ಜಿಲ್ಲೆಯಲ್ಲಿ ಮತೀಯವಾದಿಗಳು, ಆ ಸಂಘಟನೆಗಳು ಅವರ ಪರಾಕಾಷ್ಠೆಯನ್ನು ಮರೆಯುತ್ತಿದ್ದಾರೆ. ಅವರ ಕಾರ್ಯಕರ್ತರು ಈ ಹತ್ಯೆಯಲ್ಲಿ ಭಾಗಿದಾರರು. ಬಿಜೆಪಿಯ ಹೆಚ್ಚು ಜನ ಈ ಹತ್ಯೆಯಲ್ಲಿ ಆರೋಪಿ ಸ್ಥಾನದಲ್ಲಿದ್ದಾರೆ. ಅದರ ನಂತರದ ಸ್ಥಾನವನ್ನು ಎಸ್‌ಡಿಪಿಐ ತೆಗೆದುಕೊಳ್ಳುತ್ತದೆ. ಹಿಂದೂಗಳ ಹತ್ಯೆಯಾಯ್ತು. ಅದರ ಸೂತ್ರದಾರರು ಕೂಡಾ ಸಂಘಟನೆಯವರಾಗಿರುತ್ತಾರೆ’ ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ‘ವಿಪಕ್ಷ ನಾಯಕ ಸಿದ್ಧರಾಮಯ್ಯನವರಿಗೆ ಅವರೇ ಆದ ಒಂದು ಸ್ಥಾನಮಾನ ಇದೆ. ಆದರೆ ಬಿಜೆಪಿಯ ಕಾರ್ತಕರ್ತರು ಮಡಿಕೇರಿಯಲ್ಲಿ ಅವರ ಕಾರನ್ನು ತಡೆಯಲು ಯತ್ನಿಸಿ ಮೊಟ್ಟೆ ಎಸೆದಿರುವುದು ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಬೆಳವಣಿಗೆ ಅಲ್ಲ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಸರಕಾರ ಇಂತಹ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಿದ್ಧರಾಮಯ್ಯನವರ ವಿರುದ್ಧ ಬಿಜೆಪಿ ಕ್ಷಮೆ ಯಾಚನೆ ಮಾಡಬೇಕು ಎಂದರು. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ.
ಸಿದ್ಧರಾಮಯ್ಯನವರು ಮಾಜಿ ಮಂತ್ರಿಗಳು. ಅವರು ಜವಾಬ್ದಾರಿಯಿಂದ ಅಲ್ಲಿಗೆ ನೆರೆಹಾನಿ ವೀಕ್ಷಿಸಲು ಹೋಗಿದ್ದಾರೆ. ಆದರೆ ಅವರನ್ನು ತಡೆದು ಮೊಟ್ಟೆ ಎಸೆಯುವ ಕೃತ್ಯ ಸರಿಯಲ್ಲ. ಇದನ್ನು ಯಾರು ಬೇಕಾದರೂ ನಾಳೆ ಮಾಡಬಹುದು. ಆದರೆ ಅದು ಅಶ್ಲೀಲ ಕೃತ್ಯ ಇದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.