ಮಂಗಳೂರು ನಗರದಲ್ಲಿ ಹೊಂಡಗುಂಡಿಗಳನ್ನು ಸರಿಪಡಿಸುವ ಗತಿ ಇಲ್ಲದ ಕಾರಣ, ಇದೀಗ ಸಂಚಾರಿ ಪೊಲೀಸರೇ ಹಾರೆ ಕೈಯಲ್ಲಿ ಹಿಡಿದುಕೊಂಡು ಬಿರುಬಿಸಿಲಿಗೆ ಹೊಂಡಗುಂಡಿಗಳನ್ನು ತುಂಬಿಸುತ್ತಿದ್ದಾರೆ.
ಮಂಗಳೂರು: ಮಂಗಳೂರು ನಗರದಲ್ಲಿ ಹೊಂಡಗುಂಡಿಗಳನ್ನು ಸರಿಪಡಿಸುವ ಗತಿ ಇಲ್ಲದ ಕಾರಣ, ಇದೀಗ ಸಂಚಾರಿ ಪೊಲೀಸರೇ ಹಾರೆ ಕೈಯಲ್ಲಿ ಹಿಡಿದುಕೊಂಡು ಬಿರುಬಿಸಿಲಿಗೆ ಹೊಂಡಗುಂಡಿಗಳನ್ನು ತುಂಬಿಸುತ್ತಿದ್ದಾರೆ.

ಮಂಗಳೂರು ದಕ್ಷಿಣ ವಿಭಾಗದ ಸಂಚಾರಿ ಠಾಣೆಯ ಸಭ್ ಇನ್ಸ್ ಪೆಕ್ಟರ್ ಈಶ್ವರ ಸ್ವಾಮಿ , ಎಎಸ್‌ಐ ವಿಶ್ವನಾಥ ರೈ ಅವರು ಹಾರೆ, ಗುದ್ದಲಿ ಹಿಡಿದು ಈ ದುರಸ್ತಿ ಕಾರ್ಯವನ್ನು ಮಾಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲೂ ಈ ವಿಡಿಯೋ ವೈರಲ್ ಆಗುತ್ತಿದೆ.
ಮಂಗಳೂರಿನ ಬಹುತೇಕ ರಸ್ತೆಗಳಲ್ಲಿ ಈಗ ಹೊಂಡಗಳೇ ಇವೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದ್ದರೂ ಆಟಕ್ಕುಂಟು…ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊಂಡಗುಂಡಿಗಳೂ ಇವೆ. ಆದರೆ ಇದನ್ನು ಸರಿಪಡಿಸಬೇಕಾದ ಹೆದ್ದಾರಿ ಇಲಾಖೆ ಅದಕ್ಕೆ ಮುಂದಾಗುತ್ತಿಲ್ಲ.
ಅದಕ್ಕೆ ಹೆದ್ದಾರಿಯ ಗುಂಡಿಗಳನ್ನು ಕೂಡಾ ಸಂಚಾರಿ ಪೊಲೀಸರೇ ಹಾರೆ ಹಿಡಿದು ತುಂಬಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಹೇಳಿ…ಕೇಳಿ ನಗರದ ನಂತೂರು ವೃತ್ತ ಸಾವಿನ ಸರಮಾಲೆಗೆ ಕಾರಣವಾಗಿರುವ ಜಂಕ್ಷನ್. ಇಲ್ಲಿ ಅಪಘಾತಗಳಿಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಹಲವು ಮಾರ್ಪಾಟುಗಳನ್ನು ಮಾಡಿದ್ದಾರೆ.

ಸದ್ಯ ಇತ್ತೀಚೆಗೆ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಇಲ್ಲಿನ ಹೆದ್ದಾರಿಗಳ ಹೊಂಡ ತುಂಬಿ, ಸಾವಿಗೆ ನ್ಯಾಯ ಕೊಡಿ ಎಂದು ಸಾಮಾಜಿಕ ಕಾರ್ಯಕರ್ತರು ಕೈಯಲ್ಲಿ ಪ್ಲೇಕಾರ್ಡ್ ಹಿಡಿದು ಪ್ರತಿಭಟನೆಯನ್ನೂ ನಡೆಸಿದ್ದರು.
ಇದೀಗ ನಂತೂರಿನ ಹೊಂಡಗುಂಡಿಗಳನ್ನು ಸಂಚಾರಿ ಪೊಲೀಸರೇ ತುಂಬಿಸುತ್ತಿರುವುದು ಪಾಪ ಅನ್ನಿಸಿದರೂ ಅವರ ಕಾರ್ಯಕ್ಕೆ ವಾಹನ ಸವಾರರು, ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬಿರುಬಿಸಿಲಿಗೂ ಅವರು ಸಿಮೆಂಟ್, ಜಲ್ಲಿಕಲ್ಲು ಮಿಕ್ಸರ್ ಹಾಕಿ ರಸ್ತೆ ಸರಿಪಡಿಸುತ್ತಿರುವುದು ನೋಡಿದರೆ ಅಯ್ಯೋ ಅನ್ನಿಸುತ್ತಿದೆ.
ಇನ್ನೊಂದೆಡೆ ರಸ್ತೆ ಬ್ಲಾಕ್ ಆಗಿ ಜನ ಹಿಡಿಶಾಪ ಹಾಕುತ್ತಿದ್ದಾರೆ.