ಮಂಗಳೂರು: ಕ್ಷೀಣವಾಗಿ ಆರಂಭಗೊಂಡಿದ್ದ ಮುಂಗಾರು ಮಳೆ ಇದೀಗ ಜಿಲ್ಲೆಯಲ್ಲಿ ಬಿರುಸಿನಿಂದ ಸುರಿಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕರಾವಳಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮೊದಲ ಮಳೆಗೆ ಒಬ್ಬರು ಮೃತಪಟ್ಟು 14 ಮನೆಗಳಿಗೆ ಹಾನಿಯಾಗಿದೆ.
6 ಮನೆಗಳಿಗೆ ಪೂರ್ಣ ಹಾನಿ ಮತ್ತು 8 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಜಿಲ್ಲೆಯಲ್ಲಿ ಹರಿಯುವ ನೇತ್ರಾವತಿ ನದಿ ಬಂಟ್ವಾಳದಲ್ಲಿ 3 ಮೀಟರ್ (ಅಪಾಯದ ಮಟ್ಟ 8.5 ಮೀಟರ್), ಉಪ್ಪಿನಂಗಡಿಯಲ್ಲಿ 24.4 ಮೀಟರ್(ಅಪಾಯದ ಮಟ್ಟ 31.5 ಮೀಟರ್), ಕುಮಾರಧಾರ ನದಿ ಉಪ್ಪಿನಂಗಡಿಯಲ್ಲಿ12 ಮೀಟರ್ (ಅಪಾಯದ ಮಟ್ಟ 26.5 ಮೀಟರ್) ಗುಂಡ್ಯ ನದಿ 3.3 ಮೀಟರ್(ಅಪಾಯದ ಮಟ್ಟ 5 ಮೀಟರ್) ತುಂಬಿದೆ.ಭಾರಿ ಮಳೆಯಿಂದಾಗುವ ಅಪಾಯದ ಸಂದರ್ಭದಲ್ಲಿ ಕಾರ್ಯಾಚರಣೆಗೆ ಎಸ್‌ಡಿಆರ್‌ಎಫ್‌ನ 24, ಸಿವಿಲ್ ಡಿಫೆನ್ಸ್ ಟೀಮ್‌ನ 50 ಮಂದಿ, ಎನ್‌ಡಿಆರ್‌ಎಫ್‌ನ 20 ಮಂದಿ ಮತ್ತು 16 ಬೋಟ್‌ಗಳನ್ನು ಸಜ್ಜಾಗಿಡಲಾಗಿದೆ.
ವಿದ್ಯುತ್ ತಗುಲಿ ಸಾವು
ಕಿನ್ನಿಗೋಳಿಯ ಐಕಳ ಗ್ರಾ.ಪಂ ವ್ಯಾಪ್ತಿಯ ಉಳೆಪಾಡಿ ಪುರುಂಜಿಗುಡ್ಡೆಯಲ್ಲಿ ವಿದ್ಯುತ್ ತಗುಲಿ ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಪಟ್ಟವರನ್ನು ಮಾಧವ ಆಚಾರ್ಯ (55) ಎಂದು ಗುರುತಿಸಲಾಗಿದೆ.
ಶನಿವಾರ ಸುರಿದ ಗಾಳಿ ಮಳೆಗೆ ಪುರುಂಜಿಗುಡ್ಡೆ ನಿವಾಸಿ ಮಾಧವ ಆಚಾರ್ಯ ಅವರ ಮನೆ ಮತ್ತು ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಕಂಬ ತುಂಡಾಗಿದ್ದು, ಮನೆಗೆ ಹಾನಿಯಾಗಿದೆ, ಕೂಡಲೇ ಮೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಭಾನುವಾರ ಮೆಸ್ಕಾಂನವರು ಬಂದು ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ನೀಡಿದ್ದು, ವಯರ್ ಮನೆಯ ಮುಂಭಾಗದಲ್ಲಿ ಇರುದರಿಂದ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.
ಮಾಧವ ಆಚಾರ್ಯ ಅವರು ಭಾನುವಾರ ಸಂಜೆ ಜನಾರ್ದನ ಆಚಾರ್ಯ ಅವರ ಮೂಲಕ ಮನೆಯ ಹಂಚು ಸರಿಪಡಿಸುತ್ತಿದ್ದರು. ಈ ಸಂದರ್ಭ ಏಣಿ ಜಾರಿ ಜನಾರ್ದನ ಅಚಾರ್ಯ ಬೀಳುವ ಹಂತದಲ್ಲಿದ್ದಾಗ ಮಾಧವ ಆಚಾರ್ಯ ಏಣಿಯನ್ನು ಹಿಡಿದಿದ್ದರು.
ಏಣಿ ಮನೆಯ ಮುಂಭಾಗದಲ್ಲಿದ್ದ ವಯರಿಗೆ ತಾಗಿ ವಿದ್ಯುತ್ ತಗುಲಿ ಮಾಧವ ಆಚಾರ್ಯ ಸಾವನ್ನಪ್ಪಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.