ಮಂಗಳೂರು:ತುಳು ಭಾಷೆಯ ಅಧಿಕೃತ ಸ್ಥಾನ ಮಾನ ಕುರಿತ ಟ್ವಿಟ್ಟರ್ ಅಭಿಯಾನ ಜೋರಾಗಿಯೇ ತುಳು ನಾಡಿನಲ್ಲಿ ನಡೆಯುತ್ತಿದ್ದು ಇದಕ್ಕೆ ಈಗಾಗಲೇ ಅನೇಕ ಮಹನೀಯರು, ಸಂಘ ಸಂಸ್ಥೆಗಳು ದೇಶ- ವಿದೇಶಗಳಿಂದ ಅಭೂತ ಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಸಂಸದರೂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ತುಳುವರು ಸಂತಸ ಪಡುವ ಸುದ್ದಿಯನ್ನು ನೀಡಿದ್ದಾರೆ. ನಮ್ಮ ಅವಧಿಯಲ್ಲಿಯೇ ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆ ಮಾನ್ಯತೆ ನೀಡುತ್ತೇವೆಂದು ಕಟೀಲ್ ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ.
ತುಳುಭಾಷೆಗೆ ಅಧಿಕೃತ ಸ್ಥಾನಮಾನ ದೊರಕಬೇಕೆಂದು ಸರ್ಕಾರದ ಗಮನಸೆಳೆಯಲು #TuluOfficialinKA_KL ಎಂಬ ಹ್ಯಾಶ್ ಟ್ಯಾಗ್ ನಡಿಯಲ್ಲಿ ‘ಟ್ವೀಟ್ ತುಳುನಾಡು’ ಟ್ವಿಟರ್ ಅಭಿಯಾನವು ನಿನ್ನೆ ಭಾನುವಾರ ಬೆಳಗ್ಗೆ 6 ರಿಂದ ರಾತ್ರಿ 11.59 ಗಂಟೆಯವರೆಗೆ ನಡೆಯುತ್ತಿದೆ.
ಈ ಹ್ಯಾಶ್ ಟ್ಯಾಗ್ ನಡಿಯಲ್ಲಿಯೇ ಟ್ವೀಟ್ ಮಾಡಿರುವ ನಳಿನ್ ಕುಮಾರ್ ಕಟೀಲು ‘ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿಯಂತೆ ಮಡಿಲಲ್ಲಿ ಕೂರಿಸಿ ಜೋಗುಳ ಹಾಡಿದ ತಾಯಿ ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ದೊರಕಬೇಕೆಂಬ ಹೋರಾಟಕ್ಕೆ ನನ್ನ ಬೆಂಬಲ ಖಂಡಿತ ಇದೆ.
ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆಯೂ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ತುಳುವರಿಗೆ ಅಭಯ ನೀಡಿದ್ದಾರೆ.