ಮಂಗಳೂರು: ಶತಮಾನದ ಇತಿಹಾಸವಿರುವ ನಗರದ ಹೃದಯಭಾಗದಲ್ಲಿರುವ ಮಿಲಾಗ್ರಿಸ್ ಚರ್ಚ್‌ನ ಒಳಭಾಗದಲ್ಲಿ ಎರಡು ಹೊಂಡ ನಿರ್ಮಾಣವಾಗಿದೆ.
ಮಿಲಾಗ್ರಿಸ್ ಚರ್ಚ್‌ನ ಕಟ್ಟಡಕ್ಕೆ 125 ವರ್ಷಗಳ ಇತಿಹಾಸವಿದ್ದು, ಚರ್ಚ್‌ನ ಒಳಗೆ 108 ಜನರ ಮೃತ ದೇಹಗಳನ್ನು ಸಮಾಧಿ ಮಾಡಲಾಗಿದೆ.
ಕಳೆದ ನವೆಂಬರ್ ತಿಂಗಳಿನಲ್ಲಿ ಒಂದು ಸಮಾಧಿ ಕುಸಿದಿತ್ತು. ಇದೀಗ ನಿನ್ನೆ ಇನ್ನೊಂದು ಸಮಾಧಿ ಕುಸಿತ ಕಂಡಿದೆ. ಸರಿ ಸುಮಾರು 80 ವರ್ಷಗಳ ಹಿಂದೆ ನಿರ್ಮಿಸಿದ ಸಮಾಧಿಗಳು ಈ ಚರ್ಚ್‌ನಲ್ಲಿವೆ.
1989 ರಲ್ಲಿ ಕೊನೆಯ ಸಮಾಧಿ ನಿರ್ಮಾಣವಾಗಿತ್ತು. ಈ ಕುಸಿತದಿಂದ ಚರ್ಚ್‌ನ ಕಟ್ಟಡಕ್ಕೆ ಹಾನಿಯಾಗುವ ಭೀತಿ ಎದುರಾಗಿದೆ.
ಜೊತೆಗೆ ಚರ್ಚ್‌ನ ಒಳಭಾಗದಲ್ಲಿ ಇನ್ನೂ ಹಲವು ಭಾಗಗಳಲ್ಲಿ ಕುಸಿಯುವ ಸಾಧ್ಯತೆ ಇದೆ ಎಂದು ತಜ್ಞ ಎಂಜಿನಿಯರುಗಳು ಹೇಳಿದ್ದು, ಮುಂದಿನ ಕ್ರಮದ ಬಗ್ಗೆ ಚರ್ಚ್ ಆಡಳಿತ ಮಂಡಳಿಯೊಂದಿಗೆ ಚರ್ಚಿಸುತ್ತಿದ್ದಾರೆ.
ಕಾರಣ ಏನು?
ಇಲ್ಲಿನ ಹಲವು ಸಮಾಧಿಗಳು ಅರ್ಧಶತಮಾನವನ್ನು ಕಳೆದಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿ ಹೂಳಿದ್ದ ಶವದ ಕೊಳೆತು ಮರದ ಪೆಟ್ಟಿಗೆಯ ಅವಶೇಷ ಮಣ್ಣಿನೊಂದಿಗೆ ಬೆರೆತಿದ್ದರಿಂದ ಕಾಲಕ್ರಮೇಣ ಮಣ್ಣು ಕುಸಿಯುತ್ತದೆ ಎಂಜಿನಿಯರ್‌ಗಳು ಅಭಿಪ್ರಾಯ ಪಟ್ಟಿದ್ದಾರೆ.
ಈಗಲೂ ಚರ್ಚ್‌ನಲ್ಲಿವೆ ಸಮಾಧಿ ಕುರುಗಳು
ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ಚರ್ಚ್‌ಗಳಲ್ಲಿ ಆಯ್ದ ಕುಟುಂಬಗಳ ಸದಸ್ಯರು ಮೃತರಾದಾಗ ಚರ್ಚ್‌ನ ಒಳಗೆ ಹೂಳುತ್ತಿದ್ದರು. ಹಾಗೂ ಚರ್ಚ್ ಧರ್ಮ ಗುರುಗಳನ್ನು ಹೂಳುತ್ತಿದ್ದರು.
ಮಂಗಳೂರು ನಗರದ ರೋಸಾರಿಯೋ, ವೆಲೆನ್ಸಿಯಾ, ಬಿಜೈ, ಬೆಂದೂರ್ ಸೇರಿದಂತೆ ಶತಮಾನ ಕಳೆದ ಚರ್ಚ್‌ನಲ್ಲಿ ಈಗಲೂ ಸಮಾಧಿಯ ಹಲವು ಕುರುಹುಗಳು ಇವೆ.