ಮಂಗಳೂರು: ಮಂಗಳೂರು ಪೊಲೀಸರು ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಯೂರಿರುವ ವಿದೇಶಿಗರ ಪತ್ತೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.
ಸರಿಯಾದ ದಾಖಲೆಗಳಿಲ್ಲದ 518 ವಿದೇಶಿ ವಲಸಿಗರೆಂದು ಹೇಳಲಾದವರ ವಿಚಾರಣೆ ಆರಂಭಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸರು ಒಂದು ವಾರದಿಂದ ನಡೆಸುತ್ತಿದ್ದಾರೆ.
ಈಗಾಗಲೇ ಮಂಗಳೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ 18 ಪೊಲೀಸ್ ಠಾಣೆಯಲ್ಲಿ ನೆಲೆಸಿರುವ 4 ಸಾವಿರ ವಿದೇಶಿಗರನ್ನು ಗುರುತಿಸಲಾಗಿದೆ. ಇದರಲ್ಲಿ ಸೂಕ್ತ ದಾಖಲೆಗಳು ಇಲ್ಲದ 518 ಮಂದಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಮಂಗಳೂರಿನ ರೊಸಾರಿಯೋ ಹಾಲ್ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. 18 ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದವರನ್ನು ಆಯಾ ಠಾಣೆಗೆಂದು ಮಾಡಲಾದ ಕೌಂಟರ್ ನಲ್ಲಿ ಅವರ ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ನಡೆಯುತ್ತಿದೆ.
ಮಂಗಳೂರಿನಲ್ಲಿ ವಿದೇಶಿಗರ ದಾಖಲೆ ಪರಿಶೀಲನೆ ನಡೆಸಿ ಇವರಲ್ಲಿ ಹಲವರು ಒಡಿಶಾ , ಸಿಕ್ಕೀಂ, ತಮಿಳುನಾಡು, ಪಶ್ಚಿಮ ಬಂಗಾಳ ಮೂಲದವರೆಂದು ಹೇಳುತ್ತಿದ್ದು, ಈ ಬಗ್ಗೆ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ದಾಖಲೆ ಪತ್ರಗಳ ಜೊತೆಗೆ ಮೊಬೈಲ್ ಪರಿಶೀಲನೆ, ಗೂಗಲ್ ಮ್ಯಾಪ್ನಲ್ಲಿ ಖಾಯಂ ವಿಳಾಸ ಪರಿಶೀಲನೆ, ಸಂಬಂಧಿಕರ, ಸ್ನೇಹಿತರ ದೃಢೀಕರಣ ಮೊದಲಾದ 20 ಅಂಶಗಳನ್ನು ಇಟ್ಟುಕೊಂಡು ವಲಸಿಗರ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.