ಮಂಗಳೂರು: ರಾಜ್ಯದಾದ್ಯಂತ ನಡೆಯುತ್ತಿರುವ ಪೌರ ಕಾರ್ಮಿಕರ ಮುಷ್ಕರ ನಾಳೆ ಐದನೇ ದಿನಕ್ಕೆ ಕಾಲಿರಿಸಲಿದೆ. ರಾಜ್ಯ ಘಟಕದ ಸೂಚನೆಯನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪ್ರತಿಭಟನೆ ಮುಂದುವರಿದಿದೆ.
ಸ್ವಚ್ಛತಾ ಕೆಲಸವನ್ನು ಸಂಪೂರ್ಣ ಸ್ಥಗಿತಗೊಳಿಸಿ ಪೌರ ಕಾರ್ಮಿಕರು ಮಂಗಳೂರಿನಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಈ ಸಂದರ್ಭ ಮಂಗಳೂರು ಕ್ಷೇತ್ರದ ಶಾಸಕ, ವಿಪಕ್ಷದ ಉಪನಾಯಕ ಯು ಟಿ ಖಾದರ್ ಅವರು ಪ್ರತಿಭಟನಾ ನಿರತರಲ್ಲಿ ಆಗಮಿಸಿ ಅವರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅವರು ಪ್ರತಿಭಟನೆಯಲ್ಲಿ ಮಾತನಾಡಿ ‘ಸರ್ಕಾರ ನಿಜವಾಗಿಯೂ ಜನರ ಕಷ್ಟಕ್ಕೆ ಬೆಲೆ ಕೊಡುತ್ತದೆ ಎಂಬುದಾಗಿದ್ದರೆ ಇವತ್ತು ಈ ಪ್ರತಿಭಟನೆಗೆ ಬಂದು ಪೌರಕಾರ್ಮಿಕರ ಸಮಸ್ಯೆಯನ್ನು ಕೇಳುತ್ತಿದ್ದರು. ಆದರೆ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ.
ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳಿಗೆ ಹೇಳುತ್ತಿರುವುದು ಏನೆಂದರೆ ಸಮಯ ಮೀರಿದೆ, ಕನಿಷ್ಠ ಪಕ್ಷ ಜನರ ಸಮಸ್ಯೆಯನ್ನು ಆಲಿಸಿ ಸರ್ಕಾರದ ಗಮನಕ್ಕೆ ತನ್ನಿ. ಕಾಂಗ್ರೆಸ್ ಸರ್ಕಾರ ಆಗಿರುತ್ತಿದ್ದರೆ ಡಾ. ಬಿ.ಆರ್ ಅಂಬೇಡ್ಕರ್ ಅವರ ತತ್ವ ಮಾದರಿಯಲ್ಲಿ ಸಾಗುತ್ತಿದ್ದೆವು ಎಂದು ಕಿಡಿಕಾರಿದರು.
ಸರಕಾರವು ಪೌರ ಕಾರ್ಮಿಕರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಅವರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಇವರ ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದು ನುಡಿದರು.
ಬಿಜೆಪಿ ಸರಕಾರ ಬಂದ ಮೇಲೆ ಈ ಎಲ್ಲಾ ಸಮಸ್ಯೆ ಸೃಷ್ಟಿಯಾಗಿದ್ದು, ಕಾಂಗ್ರೆಸ್ ಸರಕಾರವಿದ್ದಾಗ ಪೌರ ಕಾರ್ಮಿಕರ ಬೇಡಿಕೆಗೆ ಸಿದ್ಧರಾಮಯ್ಯ ಸರಕಾರ ಸರಿಯಾಗಿ ಸ್ಪಂದಿಸುತ್ತಿತ್ತು ಎಂದರು.