ಕೊಚ್ಚಿ: ಏಷ್ಯಾನೆಟ್ ನ್ಯೂಸ್‌ಗೆ ಪೊಲೀಸ್ ಭದ್ರತೆ ಕಲ್ಪಿಸುವಂತೆ ರಾಜ್ಯ ಪೊಲೀಸರಿಗೆ ಕೇರಳ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.
ಮಲಯಾಳಂನ ಏಷ್ಯಾನೆಟ್ ಸುದ್ದಿವಾಹಿನಿಯಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ಈಚೆಗೆ ಮಲಯಾಳಂನ ಸುದ್ದಿ ವಾಹಿನಿ ಏಷ್ಯಾನೆಟ್‌ನಲ್ಲಿ ‘ಮಾದಕ ದ್ರವ್ಯ ಎಂಬ ಹೊಲಸು ಉದ್ಯಮʼ ಎಂಬ ಹೆಸರಿನ ಕಾರ್ಯಕ್ರಮದ ವಿರುದ್ಧ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಏಷ್ಯಾನೆಟ್ ಕಚೇರಿಗೆ ನುಗ್ಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಕೋರಿ ವಾಹಿನಿಯು ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎನ್ ನಗರೇಶ್ ಅವರ ನೇತೃತ್ವದ ಏಕಸದಸ್ಯ ಪೀಠ, “ಘಟನೆಗೆ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಸುದ್ದಿಸಂಸ್ಥೆಯ ವಿರುದ್ಧ ಪ್ರತಿಭಟನೆಗಳು ನಡೆದಿದ್ದು, ಮುಂದೆಯೂ ಪ್ರತಿಭಟನೆ ನಡೆಯಲಿದ್ದು, ಅದು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.
ಅಂಥ ಸ್ಥಿತಿ ನಿರ್ಮಾಣವಾದರೆ ಸಂಸ್ಥೆಯ ಕೊಚ್ಚಿ, ಕೋರಿಕ್ಕೋಡ್, ಕಣ್ಣೂರು ಮತ್ತು ತಿರುವನಂತಪುರದಲ್ಲಿನ ಕಚೇರಿಗಳಿಗೆ ಸೂಕ್ತ ಭದ್ರತೆ ನೀಡಬೇಕು” ಎಂದು ಆದೇಶಿಸಿದರು.
ಈ ಮಧ್ಯೆ, ಸಿಪಿಐ (ಎಂ) ಶಾಸಕ ಪಿ.ವಿ.ಅನ್ವರ್ ಅವರು ಕಾರ್ಯಕ್ರಮದ ಕುರಿತು ಪ್ರಕರಣ ದಾಖಲಿಸಿದ್ದಾರೆ. ಇದರ ಬೆನ್ನಿಗೇ ಮಾರ್ಚ್ 5ರಂದು ಪೊಲೀಸರು ಏಷ್ಯಾನೆಟ್‌ನ ಕೋರಿಕ್ಕೋಡ್ ಕಚೇರಿಯ ಮೇಲೆ ದಾಳಿ ನಡೆಸಿದ್ದರು. ಇದನ್ನು ವಿರೋಧ ಪಕ್ಷಗಳು ಮತ್ತು ಪತ್ರಕರ್ತರು ಖಂಡಿಸಿದ್ದರು.