ಭಟ್ಕಳ: ಈ ಹಿಂದೆ ಸಿಎಂ ಆಗಿದ್ದ ವೇಳೆ ಸಿದ್ದರಾಮಯ್ಯ ಮೀನೂಟ ತಿಂದು ಧರ್ಮಸ್ಥಳಕ್ಕೆ ಹೋದ ಪ್ರಕರಣ ಬಿಜೆಪಿ ಹಾಗೂ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇಂತಹದ್ದೇ ವಿವಾದದಲ್ಲಿ ಇದೀಗ ಸ್ವತಃ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಿಲುಕಿದ್ದಾರೆ.
ಫೆ.19ರಂದು ಭಟ್ಕಳ ಪಟ್ಟಣಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಳೀಯ ಶಾಸಕ ಸುನೀಲ್ ನಾಯ್ಕ ಮನೆಯಲ್ಲಿ ಮೀನೂಟ ಸವಿದು ನಾಗಬನ ಹಾಗೂ ದೇವರ ದರ್ಶನ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿವೆ. ಸದ್ಯ ಈ ವಿವಾದ ಭಾರೀ ಸದ್ದು ಮಾಡುತ್ತಿದೆ.
ಸಿ.ಟಿ ರವಿ ಮೀನೂಟ ಸೇವಿಸುತ್ತಿದ್ದ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಸಿ.ಟಿ ರವಿ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ.
ಹಿಂದೆ ಸಿದ್ದರಾಮಯ್ಯ ಮೀನೂಟ ತಿಂದು ಧರ್ಮಸ್ಥಳಕ್ಕೆ ಹೋಗಿದ್ದನ್ನ ಬಿಜೆಪಿ ದೊಡ್ಡ ವಿವಾದ ಮಾಡಿದ್ದರು. ಇದೀಗ ಸಿಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಔತಣಕೂಟ ಏರ್ಪಡಿಸಿದ್ದ ಬಿಜೆಪಿ ಶಾಸಕ ಸುನೀಲ್ ನಾಯ್ಕ ಪ್ರತಿಕ್ರಿಯಿಸಿದ್ದು, ಸಿ.ಟಿ.ರವಿ ಮಾಂಸಾಹಾರ ಸೇವಿಸಿಲ್ಲ.
ಅವತ್ತು ಮಾಂಸದ ಅಡುಗೆ ಮಾಡಿರಲಿಲ್ಲ. ಚಪಾತಿ, ಗೋಬಿಮಂಚೂರಿ, ಅನ್ನ, ರಸಂ ಮಾತ್ರ ಸೇವಿಸಿದ್ದಾರೆ. ವಿವಾದ ಸೃಷ್ಟಿ ಮಾಡಲು ಫೋಟೋ ವೈರಲ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದಾದ ಸ್ವಲ್ಪ ಹೊತ್ತಲ್ಲೇ ಮಂಡ್ಯದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಸಿಯಿಸಿದ ಸಿ.ಟಿ ರವಿ ನಾನು ಮಾಂಸದೂಟ ಸೇವಿಸಿದ್ದು ಹೌದು, ಆದರೆ ದೇವಸ್ಥಾನದ ಹೊರ ಆವರಣದಲ್ಲೇ ಕೈ ಮುಗಿದು ಬಂದಿದ್ದೇನೆ ಎಂದಿದ್ದಾರೆ. ನಾನು ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದ್ದೇನೆ.
ಈ ಕುರಿತು ಕೆಲವರು ವಿವಾದ ಹುಟ್ಟು ಹಾಕುತ್ತಿದ್ಧಾರೆ. ನಾನು ಮಾಂಸ ತಿನ್ನುತ್ತೇನೆ, ಹಾಗಂತ ತಿಂದು ದಾರ್ಷ್ಟ್ಯ ತೋರಿಸುವುದಿಲ್ಲ. ಮಾಂಸ ತಿಂದು ದೇವಾಲಯಕ್ಕೆ ಹೋಗುತ್ತೀನಿ, ಏನಿವಾಗ ಎಂದು ಕೇಳುವುದಿಲ್ಲ. ವ್ರತ, ಪೂಜೆ ಮಾಡುವವನು ನಾನು, ದೇವರ ಬಗ್ಗೆ ಶ್ರದ್ಧೆ ಇದೆ ಎಂದರು.